ವಿದ್ಯುತ್‌ ಶಾಕ್‌ನಿಂದ ಒಂಟಿ ಸಲಗ ಸಾವು

| Published : Oct 18 2024, 12:13 AM IST

ಸಾರಾಂಶ

ಬಿಎಸ್‌ಎನ್‌ಎಲ್ ಟವರ್‌ಗೆ ೧೧ ಕೆವಿ ವಿದ್ಯುತ್ ಪೂರೈಸುವ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎಲೆಕ್ಟ್ರಿಕಲ್ ಡಿಯೋಲ್ ಅತ್ಯಂತ ಕೆಳಮಟ್ಟದಲ್ಲಿ ಇರುವುದ ಕಾಡಾನೆ ಸಾವಿಗೆ ಕಾರಣವಾಗಿದ್ದು, ಕಂಬಗಳನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದರು ನಿರ್ಲಕ್ಷ್ಯ ತೋರಿರುವ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕಳೆದ ಆರು ವರ್ಷಗಳಲ್ಲಿ ಹದಿನಾರು ಕಾಡಾನೆಗಳು ಮೃತಪಟ್ಟಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ವಿದ್ಯುತ್ ಶಾಕ್‌ನಿಂದ ಸುಮಾರು ಇಪ್ಪತ್ತೈದು ವರ್ಷದ ದೈತ್ಯಾಕಾರದ ಒಂಟಿ ಸಲಗವೊಂದು ಸಾವನ್ನಪ್ಪಿದ ಘಟನೆ ತಾಲೂಕಿನ, ಬನವಾಸೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಿಎಸ್‌ಎನ್‌ಎಲ್ ಟವರ್‌ಗೆ ೧೧ ಕೆವಿ ವಿದ್ಯುತ್ ಪೂರೈಸುವ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎಲೆಕ್ಟ್ರಿಕಲ್ ಡಿಯೋಲ್ ಅತ್ಯಂತ ಕೆಳಮಟ್ಟದಲ್ಲಿ ಇರುವುದ ಕಾಡಾನೆ ಸಾವಿಗೆ ಕಾರಣವಾಗಿದ್ದು, ಕಂಬಗಳನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದರು ನಿರ್ಲಕ್ಷ್ಯ ತೋರಿರುವ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕಳೆದ ಆರು ವರ್ಷಗಳಲ್ಲಿ ಹದಿನಾರು ಕಾಡಾನೆಗಳು ಮೃತಪಟ್ಟಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಚಿಕ್ಕಮಗಳೂರು ಜಿ, ಮೂಡಿಗೆರೆ ಭಾಗದಿಂದ ಹಾಸನ ಜಿಗೆ ಬಂದಿದ್ದ ಉದ್ದನೇ ದಂತವುಳ್ಳ ಒಂಟಿಸಲಗ ಹಾನುಬಾಳು, ಹುರಡಿ ಭಾಗದಲ್ಲಿ ಕಾಣಿಸಿಕೊಂಡಿತ್ತು. ಆದರೆ ಕಾಡಾನೆಗಳ ಗುಂಪಿನ ಜೊತೆ ಒಂಟಿಸಲಗ ಸೇರಿರಲಿಲ್ಲ. ಹೊಸ ಜಾಗದಲ್ಲಿ ಅಲೆದಾಡುತ್ತಿತ್ತು. ಎರಡು ದಿನಗಳ ಹಿಂದೆ ಆಲೂರು ತಾಲೂಕಿನ, ಹೊಲ್ಲಹಳ್ಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಎಂಬ ಯುವಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಇದೇ ಒಂಟಿಸಲಗ ಬುಧವಾರ ರಾತ್ರಿ ಬನವಾಸೆ ಗ್ರಾಮದ ಬಳಿ ಸಂಚಾರ ಮಾಡಿತ್ತು. ಬನವಾಸೆ ಗ್ರಾಮದ ಬಳಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಎಲೆಕ್ಟ್ರಿಕಲ್ ಡಿಯೋಲ್ ಐದರಿಂದ, ಆರಡಿ ಎತ್ತರದಲ್ಲಿದ್ದು ಆಹಾರ ಹುಡುಕಿಕೊಂಡು ಒಂಟಿಸಲಗ ಹೋಗುತ್ತಿದ್ದ ವೇಳೆ ಸೊಂಡಿಲು ಎಲೆಕ್ಟ್ರಿಕಲ್ ಡಿಯೋಲ್ ತಗುಲಿದ್ದು ವಿದ್ಯುತ್ ಶಾಕ್‌ನಿಂದ ಸ್ಥಳದ ಒದ್ದಾಡಿ ಪ್ರಾಣ ಬಿಟ್ಟಿದೆ. ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಒಂಟಿಸಲಗದ ಚಲನವಲನ ಗಮನಿಸಲು ತೆರಳಿದ ವೇಳೆ ವಿದ್ಯುತ್ ಸ್ಪರ್ಶಿಸಿ ಬೃಹದಾಕಾರದ ಒಂಟಿಸಲಗ ಸಾವನ್ನಪ್ಪಿರುವ ತಿಳಿದಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾಡಾನೆ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಕಾಡಾನೆ ಮೃತದೇಹವನ್ನು ನೋಡಲು ಮುಗಿಬಿದ್ದಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲವರು ಕಾಡಾನೆಗೆ ನಮಸ್ಕಾರ ಮಾಡಿ ಪೂಜೆ ವಿಧಿವಿಧಾನಗಳನ್ನು ಸಲ್ಲಿಸುವ ಮುಖಾಂತರ ವಿದಾಯ ಹೇಳಿದರು. ನಂತರ ಪಶುವೈದ್ಯರು ಸ್ಥಳದ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಒಂಟಿಸಲಗ ಸಾವನ್ನಪ್ಪಿದ ಸ್ಥಳದ ಅಂತ್ಯಸಂಸ್ಕಾರ ನಡೆಸಲಾಯಿತು. ಮೇಲ್ನೋಟಕ್ಕೆ ವಿದ್ಯುತ್ ಶಾಕ್‌ನಿಂದಲೇ ಕಾಡಾನೆ ಸಾವನ್ನಪ್ಪಿರುವುದು ಕಂಡುಬಂದಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಿಎಫ್‌ಒ ಸೌರಭ್‌ ಕುಮಾರ್‌ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಬಾಳ್ಳುಪೇಟೆಯಲ್ಲಿ ಎಲೆಕ್ಟ್ರಿಕ್ ವೈರ್‌ಗೆ ಸೊಂಡಿಲು ಹಾಕಿ ಕಾಡಾನೆಯೊಂದು ಮೃತಪಟ್ಟಿರುವುದು ದುಃಖದ ವಿಷಯ, ಕಾಡಾನೆಗಳು ಆಹಾರ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿಂದ ನಗರಗಳ ಕಡೆ ಬರುತ್ತಿದೆ. ಕಳೆದ ವಾರ ವನಗೂರು ಭಾಗದಲ್ಲಿ ಕಾಡಾನೆಯೊಂದು ಮೃತ ಪಟ್ಟಿದ್ದು ಇದೀಗ ಮತ್ತೊಂದು ಕಾಡಾನೆ ಮೃತಪಟ್ಟಿರುವುದು ಅತ್ಯಂತ ಬೇಸರದ ಸಂಗತಿ. ಗಾತ್ರದಲ್ಲಿ ದೊಡ್ಡದಾಗಿರುವ ಕಾಡಾನೆ ವಿದ್ಯುತ್ ತಂತಿ ಮುಟ್ಟಿ ಕೇವಲ ಒಂದು ನಿಮಿಷದಲ್ಲಿ ಸಾವನ್ನಪ್ಪಿರುವುದು ದುರಂತವಾಗಿದೆ. ಮಲೆನಾಡಿನಲ್ಲಿ ಕಾಡಾನೆಗಳಿಗೂ ನೆಮ್ಮದಿ ಇಲ್ಲ, ರೈತರಿಗೂ ನೆಮ್ಮದಿ ಇಲ್ಲ. ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ನಾನು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜನರ ಜೀವ ಮಾತ್ರವಲ್ಲ ಪ್ರಾಣಿಗಳ ಜೀವ ಉಳಿಸಲು ಸಹ ಮುಂದಾಗಬೇಕು. ಮುಂದಿನ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮೊದಲು ಕಾಡಾನೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವಿವಿಧ ರೈತ ಪರ ಸಂಘಟನೆಗಳು, ಬುದ್ಧಿಜೀವಿಗಳು, ಹೋರಾಟಗಾರರ ಜೊತೆ ಸಭೆ ಮಾಡಿ ಮತ್ತೊಂದು ಯೋಜನೆ ರೂಪಿಸಿ ಸರ್ಕಾರಕ್ಕೆ ಕಾಡಾನೆ ಸಮಸ್ಯೆ ಬಗೆಹರಿಸಲು ಮತ್ತೊಮ್ಮೆ ಒತ್ತಾಯಿಸುತ್ತೇನೆ ಎಂದರು. ಕಳೆದ ಆರು ವರ್ಷಗಳಲ್ಲಿ ಹಾಸನ ಜಿಯಲ್ಲಿ ಹದಿನಾರು ಕಾಡಾನೆಗಳು ಅನಾರೋಗ್ಯ, ಗುಂಡೇಟು, ವಿದ್ಯುತ್ ಶಾಕ್ ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟಿವೆ. ಈ ವರ್ಷ ಮೂರು ಕಾಡಾನೆಗಳು ಮೃತಪಟ್ಟಿವೆ. ದಂತಕ್ಕಾಗಿ ಗುಂಡಿಟ್ಟು ಸಲಗಗಳನ್ನು ಕೊಲ್ಲಲಾಗುತ್ತಿದೆ. ಇದರ ಬಗ್ಗೆ ಅರಣ್ಯ ಸೂಕ್ತ ತನಿಖೆ ನಡೆಸಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ. ಜಿಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಅಪಾರ ಬೆಳೆಗಳನ್ನು ನಾಶಪಡಿಸುತ್ತಿದ್ದರೆ ಮತ್ತೊಂದೆಡೆ ತನ್ನದಲ್ಲದ ತಪ್ಪಿಗೆ ಕಾಡಾನೆಗಳು ಸಾವನ್ನಪ್ಪುತ್ತಿರುವ ನಿಜಕ್ಕೂ ಎಲ್ಲರಲ್ಲೂ ಬೇಸರ ತರಿಸಿದೆ. ಇನ್ನಾದರೂ ಸರ್ಕಾರ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತು ಕಾಡಾನೆಗಳನ್ನು ರಕ್ಷಿಸುವುದರ ಜೊತೆಗೆ ರೈತರ ಬೆಳೆ ನಾಶ ಮಾಡುವುದನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಮಲೆನಾಡು ಭಾಗದ ಜನರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. * ಹೇಳಿಕೆ-1

ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಕಾಡಾನೆಗಳಿಗೆ ಅರಣ್ಯ ಇಲಾಖೆ ಸರಿಯಾದ ಚಿಕಿತ್ಸೆ ನೀಡದೆ ಬೇಜವಾಬ್ದಾರಿ ತೋರಿರುವುದರಿಂದ ಕಾಡಾನೆಗಳು ಮೃತಪಡುತ್ತಿವೆ. ಆದರೂ ಅರಣ್ಯ ಇಲಾಖೆ ಕಾಡಾನೆಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈಗ ದೈತ್ಯಾಕಾರದ ಕಾಡಾನೆ ಸಾವನ್ನಪ್ಪಿದ್ದು, ಇದಕ್ಕೆ ವಿದ್ಯುತ್ ಇಲಾಖೆಯೇ ಕಾರಣ. ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ಅಲ್ಲದೇ ನ್ಯಾಯಾಲಯದಲ್ಲೂ ಮೊಕದ್ದಮೆ ಹೂಡಲಾಗುವುದು.

- ಹುರುಡಿ ವಿಕ್ರಮ, ಪ್ರಾಣಿಪ್ರಿಯ