ಸಾರಾಂಶ
ಕಳೆದ ಮೂರು ದಿನಗಳಿಂದ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಹೆಣ್ಣು ಕಾಡಾನೆಯೊಂದು ತಾಲೂಕಿನ ವನಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಲಾ ಬೆಟ್ಟ ಸಮೀಪದ ಕಡ್ರಳ್ಳಿ ಗ್ರಾಮದ ಸಮೀಪ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಈ ಕಾಡಾನೆ ನಿಂತಲ್ಲೆ ಮೂರು ದಿನಗಳಿಂದ ನಿಂತಿದೆ. ಚಿಕಿತ್ಸೆಗಾಗಿ ಕಾಡಾನೆಯನ್ನು ಸ್ಥಳಾಂತರ ಮಾಡಿದರೆ ಹೃದಯಾಘಾತವಾಗುವ ಸಂಭವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇಂದು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲು ಮುಂದಾಗಿದ್ದು ಇಂದು ಚಿಕಿತ್ಸೆ ನೀಡಲು ಮುಂದಾದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಅನಾರೋಗ್ಯದಿಂದ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ವನಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ಮೂರು ದಿನಗಳಿಂದ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಹೆಣ್ಣು ಕಾಡಾನೆಯೊಂದು ತಾಲೂಕಿನ ವನಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಲಾ ಬೆಟ್ಟ ಸಮೀಪದ ಕಡ್ರಳ್ಳಿ ಗ್ರಾಮದ ಸಮೀಪ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳಿನಿಂದ ಆನೆಗುಂಡಿ, ಪಟ್ಲಬೆಟ್ಟ,ಬೆಟ್ಟದಮನೆ, ವನಗೂರು, ಕಡ್ರಹಳ್ಳಿ, ಬಿಸ್ಲೆ, ಮಾಗೇರಿ ಸುತ್ತಮುತ್ತ ಈ ಕಾಡಾನೆ ಇತರ ಕಾಡಾನೆಗಳ ಜೊತೆ ಸಂಚಾರ ಮಾಡುತ್ತಿತ್ತು. ಕಳೆದ ೨ ತಿಂಗಳಿನಿಂದ ಸುಮಾರು ೨೨ ವರ್ಷದ ಈ ಹೆಣ್ಣಾನೆ ಕಡ್ರಳ್ಳಿ ಸುತ್ತಮುತ್ತ ರೈತರ ಕಾಫಿ ತೋಟ, ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಕಳೆದ ಕೆಲವು ದಿನಗಳಿಂದ ಈ ಕಾಡಾನೆ ಗುಂಪಿನಿಂದ ಬೇರ್ಪಟ್ಟು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಒಂದು ವಾರದ ಹಿಂದೆ ಕಡ್ರಳ್ಳಿ ಗ್ರಾಮದ ಅವಿನಾಶ್ ಎಂಬುವರು ವಾಹನದಲ್ಲಿ ಹೋಗುವಾಗ ರಸ್ತೆಗೆ ಅಡ್ಡಲಾಗಿ ನಿಂತು ತನ್ನ ಅಸಹಾಯಕತೆಯನ್ನು ತೋರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಯ ಅನಾರೋಗ್ಯದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಸಹ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.ಅನಾರೋಗ್ಯದಿಂದ ಈ ಕಾಡಾನೆ ನಿಂತಲ್ಲೆ ಮೂರು ದಿನಗಳಿಂದ ನಿಂತಿದೆ. ಚಿಕಿತ್ಸೆಗಾಗಿ ಕಾಡಾನೆಯನ್ನು ಸ್ಥಳಾಂತರ ಮಾಡಿದರೆ ಹೃದಯಾಘಾತವಾಗುವ ಸಂಭವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇಂದು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲು ಮುಂದಾಗಿದ್ದು ಇಂದು ಚಿಕಿತ್ಸೆ ನೀಡಲು ಮುಂದಾದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕಾಡಾನೆ ಸುಮಾರು ೩ ದಿನಗಳ ಕಾಲ ಅನ್ನ ನೀರನ್ನು ತ್ಯಜಿಸಿತ್ತು ಎಂದು ತಿಳಿದು ಬಂದಿದೆ. ಕಾಡಾನೆಗೆ ಸುಮಾರು ಇಪ್ಪತೆರಡು ವರ್ಷವಾಗಿದೆಯೆಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದ ಅಂತ್ಯಕ್ರಿಯೆ ನಡೆಸಿದ್ದಾರೆ.
ಗುರುವಾರ ಬೆಳಿಗ್ಗೆಯೆ ಕಾಡಾನೆ ಸಾವಿನ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ದೊರಕಿದ್ದು ಆದರೆ ಅರಣ್ಯ ಇಲಾಖೆಯವರು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಾಡಾನೆ ಮೃತಪಟ್ಟಿರುವ ಜಾಗಕ್ಕೆ ಹೋಗಲು ಅವಕಾಶ ನೀಡದೆ ಅಂತ್ಯಕ್ರಿಯೆ ನಡೆಸಿರುವುದು ಅರಣ್ಯ ಇಲಾಖೆ ನಡೆಯ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.