ಸಾರಾಂಶ
ತಾಲೂಕಿನ ಬಿಕ್ಕೋಡು ಹೋಬಳಿ ತಗರೆ ಮತ್ತು ಕೋಗಿಲೆಮನೆ ಪ್ರದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ವಾಹನ ಸವಾರರು ಮತ್ತು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಬೇಲೂರು : ತಾಲೂಕಿನ ಬಿಕ್ಕೋಡು ಹೋಬಳಿ ತಗರೆ ಮತ್ತು ಕೋಗಿಲೆಮನೆ ಪ್ರದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ವಾಹನ ಸವಾರರು ಮತ್ತು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನ ಅರೇಹಳ್ಳಿ, ಬಿಕ್ಕೋಡು, ಗೆಂಡೆಹಳ್ಳಿ ಮಲೆನಾಡು ಪ್ರಾಂತ್ಯದಲ್ಲಿ ಈಗಾಗಲೇ ಕಳೆದ ಎರಡು ವರ್ಷದಿಂದಲೂ ಆನೆಗಳ ಹಾವಳಿಯಿಂದ ಇಲ್ಲಿನ ಜನ ತತ್ತರಿಸಿದ್ದಾರೆ. ಕಳೆದ ಐದು ತಿಂಗಳಿನಿಂದ ಬಿಕ್ಕೋಡು ಹೋಬಳಿಯಲ್ಲಿ ಸುಮಾರು 55ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮತ್ತು ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಗಂಭೀರವಾಗಿ ಗಾಯಗೊಳಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ಶಾಶ್ವತವಾಗಿ ಆನೆಗಳನ್ನು ಸ್ಥಳಾಂತರಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಶೀಘ್ರವೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬೇಲೂರು ತಾಲೂಕಿನಲ್ಲಿ ಹತ್ತಾರು ಬಾರಿ ಪ್ರತಿಭಟನೆಗಳು ರಸ್ತೆ ತಡೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟಂತ ಸರ್ಕಾರ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ಮಲೆನಾಡಿಗರ ಜೀವನ ಅತ್ಯಂತ ಕಷ್ಟಕರವಾಗಿದೆ. ಈಗ ಕಾಫಿ ಬೆಲೆ ಹೆಚ್ಚಾಗುತ್ತಿದೆ ಆದರೆ ಕಟಾವು ಮಾಡಲು ಕೂಲಿ ಕಾರ್ಮಿಕರು ಕಾಡಾನೆಯಿಂದ ತೋಟಕ್ಕೆ ಬರುತ್ತಿಲ್ಲ. ಇದರಿಂದ ಕಾಫಿ ಉದುರಿ ಹೋಗುತ್ತಿದೆ. ಒಂದು ಕಡೆ ಅತಿವೃಷ್ಟಿ, ಅನಾವೃಷ್ಟಿಯ ಜೊತೆಗೆ ಕಾಡಾನೆಗಳ ಹಾವಳಿಯಿಂದ ನಮ್ಮ ಜೀವನ ಬೇಸತ್ತಿದೆ. ಬೇಲೂರು ಸಮೀಪದಲ್ಲಿದೆ ಕೋಗಿಲೆ ಮನೆ ಮತ್ತು ತಗರೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕಾಡಾನೆಗಳು ಬಿಡು ಬಿಟ್ಟಿದ್ದರೂ ಕೂಡ ಅರಣ್ಯ ಅಧಿಕಾರಿಗಳು ನೆಪಮಾತ್ರಕ್ಕೆ ಪಟಾಕಿಯನ್ನು ಸಿಡಿಸಿ ಸುಮ್ಮನಾಗುತ್ತಿದ್ದಾರೆ.
ಮೂರು ಬಾರಿ ಕಾರ್ಯಾಚರಣೆಯನ್ನು ನಡೆಸಿದರೂ ಯಾವ ಆನೆಗಳನ್ನು ಕೂಡ ಹೊರಗಟ್ಟಲು ಅಂತಹ ಕಾರ್ಯತಂತ್ರ ಮಾಡಿಲ್ಲ. ಮೂಡಿಗೆರೆ-ಸಕಲೇಶಪುರ-ಚಿಕ್ಕಮಂಗಳೂರಿನಲ್ಲಿ ಇಲ್ಲದ ಕಾಡಾನೆ ಹಾವಳಿ ಬೇಲೂರಿನಲ್ಲಿ ಏಕೆ ಇದೆ ಎಂದು ಇಲ್ಲಿನ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಗೆ ಬೆಳೆಗಾರರು ಪ್ರಶ್ನೆ ಮಾಡಿದ್ದಾರೆ.
ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಕುಮಾರ್ ಮಾತನಾಡಿ, ಕಳೆದ ಐದು ತಿಂಗಳಿನಿಂದ ಬಿಕ್ಕೋಡು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರತೆ ಹೆಚ್ಚಾಗಿದೆ ಅಪಾರ ಪ್ರಮಾಣದ ಬೆಳೆಗಳನ್ನು ಇಲ್ಲಿನ ಜನ ಕಳೆದುಕೊಂಡಿದ್ದಾರೆ ಹಲವು ಕಾರ್ಮಿಕರಿಗೂ ಕೂಡ ಗಾಯಗೊಂಡಿದ್ದಾರೆ ಈ ಬಗ್ಗೆ ಹತ್ತಾರು ಬಾರಿ ಸಂಬಂಧ ಪಟ್ಟಂತವರಿಗೆ ತಿಳಿಸಿದರೂ ಕೂಡ ಕನಿಷ್ಠ ಸೌಜನ್ಯಕ್ಕೂ ಕೂಡ ಅರಣ್ಯ ಸಚಿವರು ನಮ್ಮ ಕೋರಿಕೆಗೆ ಮನ್ನಣೆಯನ್ನು ನೀಡುತ್ತಿಲ್ಲ. ರೈತರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ಹೊಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಇರುವ ಕಾರಣ ಜನರು ಓಡಾಡಲು ಕಷ್ಟವಾಗಿದೆ. ಕಾಫಿ ತೋಟಕ್ಕೆ ಕೂಲಿಕಾರ್ಮಿಕರು ಬರದೇ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಆನೆಗಳನ್ನು ಸ್ಥಳಾಂತರಿಸಬೇಕು ಇಲ್ಲವೇ ನಮಗೆ ಸೂಕ್ತ ಭೂಮಿಯನ್ನು ನೀಡಿ ನಮ್ಮನ್ನು ಸ್ಥಳಾಂತರಿಸುವುದು ಉತ್ತಮ.
- ಅದ್ಧೂರಿ ಚೇತನ್ ಕುಮಾರ್, ತಾ.ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ