ಮಟ ಮಟ ಮಧ್ಯಾಹ್ನ ಸಮಯದಲ್ಲಿ ಮುಖ್ಯರಸ್ತೆ , ತೋಟಗಳಲ್ಲಿ ಓಡಾಡಿದ ಕಾಡಾನೆಯಿಂದಾಗಿ ಗ್ರಾಮಸ್ಥರು ಜೀವ ಭಯದಿಂದ ತತ್ತರಗೊಂಡಿರುವ ಘಟನೆ ಶುಕ್ರವಾರ ಮರದೋಡ ಗ್ರಾಮದಲ್ಲಿ ಜರುಗಿದೆ.
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಮಟ ಮಟ ಮಧ್ಯಾಹ್ನ ಸಮಯದಲ್ಲಿ ಮುಖ್ಯರಸ್ತೆ , ತೋಟಗಳಲ್ಲಿ ಓಡಾಡಿದ ಕಾಡಾನೆಯಿಂದಾಗಿ ಗ್ರಾಮಸ್ಥರು ಜೀವ ಭಯದಿಂದ ತತ್ತರಗೊಂಡಿರುವ ಘಟನೆ ಶುಕ್ರವಾರ ಮರದೋಡ ಗ್ರಾಮದಲ್ಲಿ ಜರುಗಿದೆ. ಇಲ್ಲಿಗೆ ಸಮೀಪದ ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಗಳಲ್ಲಿ ನಿರಂತರ ಕಾಡಾನೆಗಳ ಹಾವಳಿ ಅಧಿಕವಾಗಿದ್ದು ಇದೀಗಾಗಲೇ ಕಾಫಿ ತೋಟ, ಗದ್ದೆ ಗಳಿಗೆ ರಾತ್ರಿ ವೇಳೆಯಲ್ಲಿ ಲಗ್ಗೆ ಇಟ್ಟ ಕಾಡಾನೆಗಳು ಕೃಷಿ ಗಿಡಗಳು ಹಾಗೂ ಬೆಳೆಗಳನ್ನು ಧ್ವಂಸಗೊಳಿಸಿ ಬಹಳಷ್ಟು ನಷ್ಟ ಮಾಡಿದ್ದು ಗ್ರಾಮಸ್ಥರು ಹೈರಾಣವಾಗಿದ್ದಾರೆ. ಆದರೆ ಇದೀಗ ಮಟ ಮಟ ನಡು ಮಧ್ಯಾಹ್ನವೇ ಕಾಡಾನೆಯೊಂದು ನಾಪೋಕ್ಲು, ಕಕ್ಕಬೆ, ವಿರಾಜಪೇಟೆ ಮುಖ್ಯ ರಸ್ತೆಯ ಮರಂದೋಡ ಗ್ರಾಮದ ನೀಡುಮಂಡ ಸೇತುವೆಯ ಮೇಲೆ ಓಡಾಡುತ್ತಿರುವ ದೃಶ್ಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಇದರಿಂದ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನಲ್ಲಿ ತೊಡಗಿದ್ದ ಕಾರ್ಮಿಕರು ಹಾಗೂ ಗ್ರಾಮಸ್ಥರು ಚೆಲ್ಲಾಪಿಲ್ಲಿಯಾಗಿ ಓಡಿ ಜೀವ ಅಪಾಯದಿಂದ ಪಾರಾಗಿದ್ದಾರೆ. ಗ್ರಾಮದಲ್ಲಿ ಜೀವ ಭಯದ ಕಾರ್ಮೋಡ ಆವರಿಸಿ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಭೀತರಾಗಿದ್ದು ಕೂಡಲೇ ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.