ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೋಕೇರಿ ಮತ್ತು ನರಿಯಂದಡ ಗ್ರಾಮದ ತೋಟಗಳಲ್ಲಿ ಕಾಡಾನೆಗಳು ದಾಂದಲೆ ನಡೆಸಿ ಅಪಾರ ಕೃಷಿ ಗಿಡಗಳನ್ನು ಧ್ವಂಸ ಮಾಡಿ ನಷ್ಟ ಉಂಟು ಮಾಡಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ದಾಂದಲೆ ನಡೆಸಿದ್ದು ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿದ್ದು ರೈತರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಸುಮಾರು 20ಕ್ಕೂ ಅಧಿಕ ಕಾಡಾನೆಗಳು ಸುತ್ತಮುತ್ತಲು ಅಡ್ಡಾಡುತ್ತಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಕೋಕೇರಿ ಗ್ರಾಮದ ಕಾಫಿ ಬೆಳೆಗಾರ ಚೆರುವಾಳಂಡ ಕಿಶನ್ ಸೋಮಯ್ಯ ತಮ್ಮ ತೋಟದಲ್ಲಿ ಸಂಗ್ರಹಿಸಿಟ್ಟಿದ್ದ ಗೊಬ್ಬರಚೀಲಗಳನ್ನು ಕಾಡಾನೆಗಳು ಹಾಳುಗೆಡವಿವೆ. ನರಿಯಂದಡ ಗ್ರಾಮದ ತೋಟಂಬೈಲ್ ಅನಂತಕುಮಾರ್ ಅವರ ತೋಟಗಳಲ್ಲಿ ಕಾಡಾನೆಗಳು ದಾಂದಲೆ ನಡೆಸಿವೆ. ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಕೆ ಗಿಡಗಳನ್ನು ಧ್ವಂಸಮಾಡಿವೆ. ಕಾಡಾನೆಗಳನ್ನು ಒಂದು ಭಾಗದಿಂದ ಓಡಿಸಿದರೆ ಮತ್ತೊಂದು ಭಾಗದಿಂದ ನುಸುಳುತ್ತವೆ. ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಮೂಲಕ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಎಂದು ಕಿಶನ್ ಸೋಮಯ್ಯ ಒತ್ತಾಯಿಸಿದರು.