ಸಾರಾಂಶ
ಸಕಲೇಶಪುರ: ತಾಲೂಕಿನಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು ಆಹಾರ ಹುಡುಕಿಕೊಂಡು ರೈತರ ಕೃಷಿ ವಲಯಕ್ಕೆ ಕಾಡಾನೆಗಳು ಹಿಂಡು ಹಿಂಡಾಗಿ ದಾಂಧಲೆ ನಡೆಸುತ್ತಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ. ತಾಲೂಕಿನ ವಳಲಹಳ್ಳಿಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯೂರು ಕೂಡಿಗೆ ಗ್ರಾಮದ ಚಿನ್ನಣ್ಣ ಮತ್ತು ಸೋಮಶೇಖರ್ ಎಂಬವರ ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡೊಂದು ನುಗ್ಗಿ ಫಸಲಿಗೆ ಬಂದಿರುವ ಐವತ್ತು ಕಾಫಿ ಗಿಡಗಳನ್ನು ಸೋಮವಾರ ಮುಂಜಾನೆ ನಾಶಪಡಿಸಿವೆ. ವಳಲಹಳ್ಳಿ ನಾಗರಾಜ್ ಎಂಬುವರ ಕಾಫಿ ತೋಟದಲ್ಲಿ ಮೂವತ್ತು ಕಾಫಿ ಗಿಡಗಳನ್ನು ನಾಶಪಡಿಸಿವೆ. ಇದೇ ಗ್ರಾಮದ ಪಟೇಲರ ಮನೆ ಬಸಪ್ಪ ಗೌಡ ಎಂಬುವರ ತೋಟವನ್ನು ನಾಶಪಡಿಸಿವೆ. ಇದೇ ರೀತಿ ತಾಲೂಕಿನ ಕೊಡಗು ಗಡಿ ಗ್ರಾಮ ತಂಬಲಗೇರಿಯಲ್ಲಿ ಐದಕ್ಕೂ ಹೆಚ್ಚು ಕಾಡಾನೆಗಳು ಗ್ರಾಮದ ಕೃಷ್ಣಮೂರ್ತಿ ಎಸ್ಟೇಟ್, ಟಿಡಿ ಸುಬ್ರಹ್ಮಣ, ಧರ್ಮರಾಜ್‌ರವರ ಕಾಫಿ ತೋಟಗಳಲ್ಲಿ ಕಾಫಿ, ಏಲಕ್ಕಿ, ಅಡಿಕೆ ಗಿಡಗಳನ್ನು ನಾಶಪಡಿಸಿವೆ. ಇದೇ ಗ್ರಾಮದ ವಿನೋದ್, ಮಧು ಎಂಬುವರ ಭತ್ತದ ಗz ಹಾಗೂ ತೋಟದ ಕೆರೆಯನ್ನು ಸಂಪೂರ್ಣ ನಾಶಪಡಿಸಿವೆ.
ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಕಾಡಾನೆಗಳು ವಿಪರೀತ ಉಪಟಳ ನೀಡುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಕನಿಷ್ಠ ನಷ್ಟವಾಗಿರುವ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮದ ಲೋಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಯಸಳೂರು ಹೋಬಳಿ ಉಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಂದೂರು, ಬಾಳಕೇರಿ, ದೊಡ್ಡಕುಂದೂರು, ಸುತ್ತಮುತ್ತ ಕಾಡಾನೆಗಳು ಕಳೆದ ೧೫ ದಿನಗಳಿಂದ ಬೀಡು ಬಿಟ್ಟಿದ್ದು ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಕೂಡಲೆ ಕಾಡಾನೆಗಳನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.