ಬಾಳೆಹೊನ್ನೂರಿಗೆ ವಾಪಾಸ್ ಬಂದ ಕಾಡಾನೆಗಳು

| Published : Aug 22 2025, 12:00 AM IST

ಬಾಳೆಹೊನ್ನೂರಿಗೆ ವಾಪಾಸ್ ಬಂದ ಕಾಡಾನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಕಳೆದ ಹತ್ತು ದಿನಗಳ ಹಿಂದೆ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದು ಕೊಪ್ಪ, ಶೃಂಗೇರಿ ತಾಲೂಕಿಗೆ ತೆರಳಿದ್ದ ಎರಡು ಕಾಡಾನೆಗಳು ಬುಧವಾರ ರಾತ್ರಿ ಪುನಃ ಬಾಳೆಹೊನ್ನೂರು ವ್ಯಾಪ್ತಿಗೆ ಪ್ರವೇಶ ಮಾಡಿವೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಹತ್ತು ದಿನಗಳ ಹಿಂದೆ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದು ಕೊಪ್ಪ, ಶೃಂಗೇರಿ ತಾಲೂಕಿಗೆ ತೆರಳಿದ್ದ ಎರಡು ಕಾಡಾನೆಗಳು ಬುಧವಾರ ರಾತ್ರಿ ಪುನಃ ಬಾಳೆಹೊನ್ನೂರು ವ್ಯಾಪ್ತಿಗೆ ಪ್ರವೇಶ ಮಾಡಿವೆ.

ಕಳೆದ ಹತ್ತು ದಿನಗಳ ಹಿಂದೆ ಎರಡು ಕಾಡಾನೆಗಳು ಪಟ್ಟಣದ ಮೂಲಕ ಕಾರ್‌ಗದ್ದೆ, ಮಾಗೋಡು, ಅಕ್ಷರನಗರ, ಕಣಬೂರು, ಸಿಆರ್‌ಎಸ್, ಹುಣಸೇಮನೆ, ನೇತ್ರಕೊಂಡ ಮುಂತಾದ ಕಡೆಗಳಲ್ಲಿ ತೋಟ, ಮನೆ, ಕೃಷಿಕರ ಜಮೀನುಗಳಲ್ಲಿ ಬೀಡುಬಿಟ್ಟು ತಿರುಗಾಡಿದ್ದ ಎರಡು ಕಾಡಾನೆಗಳು ಕೊಪ್ಪ ತಾಲೂಕಿನ ಶಾಂತಿಪುರ, ಗುತ್ತಿಖಾನ್ ಮತ್ತಿತರರ ಕಡೆಗಳಲ್ಲಿ ಸುತ್ತಾಡಿ ಶೃಂಗೇರಿ ತಾಲ್ಲೂಕಿಗೂ ಪ್ರವೇಶ ಮಾಡಿ ಶೃಂಗೇರಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸುತ್ತಾಡಿದ್ದವು.

ಕಳೆದ 4-5 ದಿನಗಳ ಹಿಂದೆ ಈ 2 ಆನೆಗಳು ಹೋಗಿದ್ದ ದಾರಿಯಲ್ಲಿಯೇ ಪುನಃ ಕೊಪ್ಪ ತಾಲೂಕಿಗೆ ವಾಪಾಸ್ ಬಂದಿದ್ದವು. ಬುಧವಾರ ರಾತ್ರಿ ವೇಳೆಯಲ್ಲಿ ಈ ಆನೆಗಳು ಮಾಗೋಡು, ಕಾರ್‌ಗದ್ದೆ, ಕಣಬೂರು, ಕಗ್ಗನಗದ್ದೆ, ಅಂಚೆ ಮುಂತಾದ ಕಡೆಗಳಲ್ಲಿ ಸುತ್ತಾಡಿ ಗುರುವಾರ ಬೆಳಗ್ಗಿನ ವೇಳೆಗೆ ಪಟ್ಟಣದ ಎನ್.ಆರ್.ಪುರ ರಸ್ತೆಯಲ್ಲಿರುವ ಅನಂತ್ಯ ವಿದ್ಯಾಕೇಂದ್ರದ ಆವರಣಕ್ಕೆ ಪ್ರವೇಶ ಮಾಡಿ ಸುತ್ತಾಡಿವೆ. ಅನಂತ್ಯ ವಿದ್ಯಾಕೇಂದ್ರದ ಆವರಣದಲ್ಲಿರುವ ಬಿದಿರನ್ನು ಮುರಿದು ತಿಂದಿರುವ ಆನೆಗಳು ಶಾಲಾ ಆವರಣದ ಹಲವು ಕಡೆಗಳಲ್ಲಿ ಲದ್ದಿ ಹಾಕಿವೆ.

ಮುಂಜಾನೆ ಬೆಳಕು ಹರಿದ ಬಳಿಕ ಅನಂತ್ಯ ಶಾಲೆಯ ಹಿಂಭಾಗದಲ್ಲಿರುವ ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ. ಪಟ್ಟಣದ ಒಳಭಾಗಕ್ಕೆ ಆನೆಗಳು ಬಂದಿರುವ ಕಾರಣ ಸಾರ್ವಜನಿಕರು ಆತಂಕಕ್ಕೆ ಈಡಾಗಿದ್ದಾರೆ. ಆನೆಗಳು ಶಾಲಾ ಆವರಣಕ್ಕೆ ಲಗ್ಗೆ ಇಟ್ಟ ಕಾರಣ ಗುರುವಾರ ಅನಂತ್ಯ ಶಾಲೆಗೆ ಮುಂಜಾಗರೂಕ ಕ್ರಮವಾಗಿ ರಜೆ ಘೋಷಿಸಲಾಗಿತ್ತು.

ಆನೆಗಳು ಪಟ್ಟಣಕ್ಕೆ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮಕೈ ಗೊಂಡಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವ ಜತೆಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.

೨೧ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಕಗ್ಗಿನಗದ್ದೆ ಅಂಚೆ ಗ್ರಾಮದ ಕೃಷಿಕರೊಬ್ಬರ ಜಮೀನಿಗೆ ಬಂದಿರುವ ಕಾಡಾನೆಗಳು ತೆಂಗಿನ ಸಸಿ ತುಳಿದು ಪುಡಿ ಮಾಡಿರುವುದು.