ಕನ್ನಡಪ್ರಭ ವಾರ್ತೆ ಸಕಲೇಶಪುರಸಕಲೇಶಪುರ ವಲಯ ವ್ಯಾಪ್ತಿಯ ಹೆಬ್ಬನಹಳ್ಳಿ ಹಾಗೂ ಹರನಹಳ್ಳಿ ಗ್ರಾಮಗಳ ಸಮೀಪ ಎರಡು ಕಾಡಾನೆಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿದರು.ಗ್ರಾಮಗಳಲ್ಲಿ ಸಾರ್ವಜನಿಕರಿಗೆ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸದಂತೆ, ಒಬ್ಬೊಬ್ಬರಾಗಿ ಓಡಾಡುವುದನ್ನು ತಪ್ಪಿಸಿ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದರು. ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಸಮೀಪ ಹೋಗದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ಕಾಡಾನೆಗಳ ಚಲನವಲನದ ಬಗ್ಗೆ ನಿರಂತರ ನಿಗಾ ವಹಿಸಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದರು. ಗ್ರಾಮಸ್ಥರು ಆತಂಕಕ್ಕೆ ಒಳಗಾಗದೆ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.