ಸಾರಾಂಶ
ಮುರುಘ ರಾಜೇಂದ್ರರ ಅಮೃತ ಮಹೋತ್ಸವ । ಗುರುವಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಆನವಟ್ಟಿಕಾಡು ಪ್ರದೇಶವಾಗಿದ್ದ ಗ್ರಾಮದಲ್ಲಿ ಯಾವುದೇ ಸೌಲಭ್ಯವಿಲ್ಲದ ಮಠದ ಸ್ವಾಮೀಜಿಯಾಗಿ, ನಿರಂತರ ಪರಿಶ್ರಮದಿಂದ ಕಷ್ಟಪಟ್ಟು ಶಿವಮೂರ್ತಿ ಸ್ವಾಮೀಜಿ ಅವರು ಹಿರೇಮಾಗಡಿ ಮಠವನ್ನು ಒಳ್ಳೆಯ ಧಾರ್ಮಿಕ ಕ್ಷೇತ್ರವನ್ನಾಗಿ ಬೆಳೆಸಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಹಿರೇಮಾಗಡಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶಿವಮೂರ್ತಿ ಮುರುಘ ರಾಜೇಂದ್ರ ಮಹಾ ಸ್ವಾಮೀಜಿ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಗರುವಂದನಾ ಸಮಾರಂಭದಲ್ಲಿ ಗೌರವ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಠದಲ್ಲಿ ದಾಸೋಹ ಪೂರ್ವ ಪ್ರಾಥಮಿಕದಿಂದ 7ನೇ ತರಗತಿವರೆಗೂ ಶಾಲೆ ಸ್ಥಾಪಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ಹಿರೇಮಾಗಡಿ ಮಠವನ್ನು ಅತ್ಯಂತ ಎತ್ತರವಾಗಿ ಬೆಳೆಸಿರುವ ಕೀರ್ತೀ ಶಿವಮೂರ್ತಿ ಮುರುಘ ರಾಜೇಂದ್ರ ಮಹಾ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಅವರ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭ ನಮ್ಮೆಲ್ಲರಿಗೂ ಹೆಮ್ಮೆ ಎಂದರು.
ಸಿದ್ದರಾಮಯ್ಯನವರ ಆರ್ಶಿವಾದದಿಂದ ಮಕ್ಕಳ ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಮಕ್ಕಳ ಸೇವೆ ಮಾಡುವುದರಲ್ಲೇ ದೇವರನ್ನು ಕಾಣುತ್ತಿದ್ದೇನೆ. ಮಕ್ಕಳು ವಿದ್ಯಾವಂತರಾದರೆ ಅದೇ ನನಗೆ ಪ್ರಸಾದ ಎಂದರು.ಹಿರೇಮಾಗಡಿ ಮಠಕ್ಕೆ 40 ವರ್ಷದ ಹಿಂದೆ ತಂದೆ ಬಂಗಾರಪ್ಪ ರಂಗಮಂದಿರ ನಿರ್ಮಾಣಕ್ಕೆ 3 ಲಕ್ಷ ರು. ಅನುದಾನ ನೀಡಿದ್ದರು. ಇನ್ನಷ್ಟು ಎತ್ತರವಾಗಿ ಮಠವನ್ನು ಬೆಳೆಸಲು ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಹಿರೇಮಾಗಡಿ ರಸ್ತೆಗೆ ನಾನು ಶಾಸಕನಾಗಿದ್ದಾಗ 3.5 ಕಿ.ಮೀ. ರಸ್ತೆ ಮಂಜೂರು ಮಾಡಿಸಿದ್ದೆ, ನಂತರ ಚುನಾವಣೆಯಲ್ಲಿ ಸೋಲು ಉಂಟಾಯಿತು. ಕಾಮಗಾರಿ ನಡೆಯದೆ ಹಣ ವಾಪಸ್ ಹೋಗಿದೆ. ಈಗ ಸಚಿವನಾಗಿರುವುದರಿಂದ ಮುಖ್ಯ ರಸ್ತೆಯಿಂದ ಗಿಣಿವಾಲದವರೆಗೆ ಸುಮಾರು 5.5 ಕಿ.ಮೀ. ರಸ್ತೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.ದೇಶದ ಮೊದಲ ಸಂಸತ್ತು 12ನೇ ಶತಮಾನದಲ್ಲೇ ನಡೆದಿದೆ. ಅದರ ಮೊದಲ ಅಧ್ಯಕ್ಷ ಅಲ್ಲಮಪ್ರಭು ಅವರು ಶಿವಮೊಗ್ಗ ಜಿಲ್ಲೆಯವರು. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಶಿವಮೊಗ್ಗದ ಸ್ವಾತಂತ್ರ್ಯ ಉದ್ಯಾನಕ್ಕೆ ಅಲ್ಲಮ್ಮಪ್ರಭು ಬಯಲು ಎಂದು ನಾಮಕರಣ ಮಾಡಲಾಗಿದೆ ಎಂದರು.
ರಾಜ್ಯದ ವಿವಿಧ ಮಠಗಳಿಂದ ಬಂದ ಸ್ವಾಮೀಜಿಗಳು, ಭಕ್ತರಿಗೆ ಆಶೀರ್ವಚನ ನೀಡಿದರು. ಗಂಗಾವತಿ ಪ್ರಾಣೇಶ್ ಅವರ ತಂಡದಿಂದ ನಗೆಹಬ್ಬ ಕಾರ್ಯಕ್ರಮ ನಡೆಯಿತು.ಸಮಾರಂಭದಲ್ಲಿ ಪಟ್ಟಾಧಿಕಾರ ಸಮಿತಿಯ ಅಧ್ಯಕ್ಷ ಕೆ.ಪಿ ರುದ್ರಗೌಡ, ಕಾರ್ಯಾಧ್ಯಕ್ಷ ಬಸಣ್ಣ ಭಾರಂಗಿ, ಉಪಾಧ್ಯಕ್ಷ ಬಸವನಗೌಡ ಮಲ್ಲಾಪುರ, ಸದಸ್ಯರಾದ ಗಂಗಾಧರ ಹಿರೇಮಾಗಡಿ, ಎ.ವಿ ಬಸವರಾಜ ಅಗಸನಹಳ್ಳಿ, ಸೋಮನಗೌಡ, ವಿ.ಕೆ ಪಾಟೀಲ್, ಲತಾ ಯೋಗರಾಜ್ ಇದ್ದರು.