ಶಿವಕುಮಾರ ಕುಷ್ಟಗಿ

ಗದಗ: ರಾಷ್ಟ್ರೀಯ ಹೆದ್ದಾರಿ 52ರ ಹುಬ್ಬಳ್ಳಿ- ವಿಜಯಪುರ ಮಾರ್ಗವು ಈಗ ವನ್ಯಜೀವಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ವೇಗವಾಗಿ ಚಲಿಸುವ ವಾಹನಗಳ ಅಬ್ಬರಕ್ಕೆ ಸಿಲುಕಿ ನರಿ, ಕಾಡುಬೆಕ್ಕು ಸೇರಿದಂತೆ ಹತ್ತಾರು ಪ್ರಭೇದದ ಪ್ರಾಣಿಗಳು ನಿರಂತರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಪರಿಸರಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

​ಇತ್ತೀಚೆಗೆ (ಏ. 20) ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಕಾಲುವೆ ಸಮೀಪ ಅಪಘಾತದಲ್ಲಿ ಮೃತಪಟ್ಟ ಹೆಣ್ಣುನರಿಯ ಕಳೆಬರ ಪತ್ತೆಯಾಗಿದೆ. ಬಾದಾಮಿಯ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಮತ್ತು ಶಿವಪ್ರಕಾಶ ಹೊಸಕೇರಿಮಠ ಅವರು ಈ ಘಟನೆಯನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ವಿಷಯದ ತೀವ್ರತೆ ಗೊತ್ತಾಗಿದೆ.

​ಅಪಾಯದ ಅಂಚಿನಲ್ಲಿ ಕಿರು ಸಸ್ತನಿಗಳು: ​ಎನ್ಎಚ್- 52ರಲ್ಲಿ ದಿನದ 24 ಗಂಟೆಯೂ ಲಘು ಮತ್ತು ಬೃಹತ್ ವಾಹನಗಳ ಸಂಚಾರವಿರುತ್ತದೆ. ಈ ಹೆದ್ದಾರಿಯು ವನ್ಯಜೀವಿಗಳ ನೈಸರ್ಗಿಕ ಸಂಚಾರ ಪಥಗಳನ್ನು ಹಾದು ಹೋಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ನರಿ ಹೈನಾ, ಪುನುಗು ಬೆಕ್ಕು, ಕಾಡು ಬೆಕ್ಕು, ಮಂಗ, ಅಳಿಲು, ಹಾವುಗಳು, ಹಲ್ಲಿಗಳು ಹಾಗೂ ಉಭಯಚರಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಚಕ್ರದಡಿ ಸಿಲುಕಿ ವ್ಯಾಪಕವಾಗಿ ಸಾವಿಗೀಡಾಗುತ್ತಿವೆ.


ವ್ಯಾಪಕ ಸಾವು: ವಿಶೇಷವಾಗಿ ಬೇಸಿಗೆ ಹಾಗೂ ಮಳೆಗಾಲದ ಆರಂಭದ ಸಮಯದಲ್ಲಿ ಪ್ರಾಣಿಗಳು ಆಹಾರ ಮತ್ತು ನೀರು ಹುಡುಕುತ್ತಾ ರಸ್ತೆ ದಾಟುವಾಗ ಈ ದುರಂತಗಳು ಹೆಚ್ಚಾಗಿ ಸಂಭವಿಸುತ್ತವೆ. ಈ ​ಹೆದ್ದಾರಿ ಅಗಲೀಕರಣಗೊಂಡ ನಂತರ ವಾಹನಗಳ ವೇಗ ಮಿತಿ ಮೀರಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದು ಮತ್ತು ಪ್ರಾಣಿಗಳು ದಾಟುವ ವಲಯಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಫಲಕಗಳು ಇಲ್ಲದಿರುವುದು ಈ ರಸ್ತೆಯಲ್ಲಿ ಮೂಕ ಪ್ರಾಣಿಗಳ ಜೀವಹಾನಿಗೆ (ರೋಡ್ ಕಿಲ್ಸ್) ಪ್ರಮುಖ ಕಾರಣಗಳಾಗಿವೆ.

ಚಾಲಕರಲ್ಲಿ ಜಾಗೃತಿ: ಹುಬ್ಬಳ್ಳಿ- ವಿಜಯಪುರ ಮಾರ್ಗದಲ್ಲಿ ಸಣ್ಣ ಸಸ್ತನಿಗಳು ಮತ್ತು ಸರೀಸೃಪಗಳು ನಿರಂತರವಾಗಿ ಸಾವಿಗೀಡಾಗುತ್ತಿವೆ. ಅರಣ್ಯ ಇಲಾಖೆಯು ಕೂಡಲೇ ವನ್ಯಜೀವಿ ಸಂಚಾರವಿರುವ ವಲಯಗಳನ್ನು ಗುರುತಿಸಿ ವನ್ಯಜೀವಿ ದಾಟುವಿಕೆ ಫಲಕಗಳನ್ನು (ವೈಡ್ ಲೈಫ್ ಕ್ರಾಸ್ಸಿಂಗ್ ಬೋರ್ಡ್ಸ್) ಅಳವಡಿಸಬೇಕು. ಇದರಿಂದ ಚಾಲಕರಲ್ಲಿ ಜಾಗೃತಿ ಮೂಡಿಸಿ ಅಪಘಾತಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.ಎಚ್ಚರಿಕೆ ಫಲಕ:

ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ಅಪಘಾತಕ್ಕೆ ಈಡಾಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ವನ್ಯಜೀವಿಗಳ ಓಡಾಟ ಹೆಚ್ಚಿರುವ ಪ್ರದೇಶಗಳನ್ನು ಶೀಘ್ರವೇ ಗುರುತಿಸಿ, ಅಲ್ಲಿ ಇಲಾಖೆಯ ವತಿಯಿಂದ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ಸಂತೋಷಕುಮಾರ ಕೆಂಚಪ್ಪನವರ ತಿಳಿಸಿದರು.