ಕೊಡಗು ಜಿಲ್ಲೆಯ ಸಿದ್ದಾಪುರ, ನೆಲ್ಯಹುದಿಕೇರಿ ಹಾಗೂ ಮಾಲ್ದಾರೆ ಸೇರಿದಂತೆ ವಿವಿಧ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಕಾಡಾನೆ, ಹುಲಿ, ಚಿರತೆ ಮತ್ತಿತರ ವನ್ಯಪ್ರಾಣಿಗಳ ಹಾವಳಿಯಿಂದ ನೊಂದಿರುವ ರೈತರು ಮತ್ತು ಸ್ಥಳೀಯರು, ಶಾಶ್ವತ ಪರಿಹಾರ ಹಾಗೂ ರಕ್ಷಣೆ ಕೋರಿ ಗ್ರಾಮ ಪಂಚಾಯಿತಿಗಳ ಎದುರು ಏಕಕಾಲದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ಸಿದ್ದಾಪುರ, ನೆಲ್ಯಹುದಿಕೇರಿ ಹಾಗೂ ಮಾಲ್ದಾರೆ ಸೇರಿದಂತೆ ವಿವಿಧ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಕಾಡಾನೆ, ಹುಲಿ, ಚಿರತೆ ಮತ್ತಿತರ ವನ್ಯಪ್ರಾಣಿಗಳ ಹಾವಳಿಯಿಂದ ನೊಂದಿರುವ ರೈತರು ಮತ್ತು ಸ್ಥಳೀಯರು, ಶಾಶ್ವತ ಪರಿಹಾರ ಹಾಗೂ ರಕ್ಷಣೆ ಕೋರಿ ಗ್ರಾಮ ಪಂಚಾಯಿತಿಗಳ ಎದುರು ಏಕಕಾಲದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಗ್ರಾಮ ಪಂಚಾಯಿತಿ ಎದುರು ಜಮಾಯಿಸಿದ ಕಾರ್ಮಿಕ ಸಂಘಟನೆ, ರೈತ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಕೇಂದ್ರ-ರಾಜ್ಯ ಸರ್ಕಾರದ ಅವೈಜ್ಞಾನಿಕ ಅರಣ್ಯ ನೀತಿ ಖಂಡಿಸಿ ಘೋಷಣೆ ಕೂಗಿದರು.ಈಗಾಗಲೇ ಜಿಲ್ಲೆಯಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ ಸುಮಾರು 9 ಮಂದಿ ಕಾಡುಪ್ರಾಣಿ ಸಂಘರ್ಷಕ್ಕೆ ಸಿಲುಕಿ ಬಲಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಜೀವ ಕೈಯಲ್ಲಿ ಹಿಡಿದು ಬದುಕು:

ಸಿದ್ದಾಪುರ, ನೆಲ್ಯಹುದಿಕೇರಿ ಹಾಗೂ ಮಾಲ್ದಾರೆ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ದುಡಿಯುವ ವರ್ಗ, ಕೃಷಿಕರು ದಿನನಿತ್ಯ ಜೀವವನ್ನು ಕೈಯಲ್ಲಿಟ್ಟುಕೊಂಡು ಕೆಲಸ ಮಾಡುವಂತಾಗಿದೆ. ವಿದ್ಯಾರ್ಥಿಗಳು ತರಗತಿಗೆ ಹೋಗಿ ಹಿಂತಿರುಗುವವರೆಗೆ ಪೋಷಕರು ಭಯದಲ್ಲೇ ಕಾಯುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.ಆ.28ರಂದು ಜಿಲ್ಲೆಗೆ ಆಗಮಿಸಲಿರುವ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ಆಯಾ ಗ್ರಾಮ ಪಂಚಾಯಿತಿ ಪಿಡಿಓಗಳ ಮುಖಾಂತರ ಸಚಿವರಿಗೆ ಮನವಿ ಸಲ್ಲಿಸಿದರು.ಮುಖಂಡರ ಎಚ್ಚರಿಕೆ:

ಕಾರ್ಮಿಕ ಮುಖಂಡ ಭರತ್ ಮಾತನಾಡಿ, ‘ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀಡುಬಿಟ್ಟಿರುವ 240ಕ್ಕೂ ಅಧಿಕ ಕಾಡಾನೆಗಳನ್ನು ಈ ಹಿಂದೆ ಕಾರ್ಯಾಚರಣೆ ಮಾಡಿ ಸೆರೆ ಹಿಡಿದಂತೆ ಸೆರೆ ಹಿಡಿದು ಕಾಡಿನೊಳಗೆ ಬಿಟ್ಟು ಅವು ಮತ್ತೆ ನಾಡಿಗೆ ಬಾರದಂತೆ ಅರಣ್ಯ ಇಲಾಖೆ ನಿಗಾ ವಹಿಸಬೇಕು. ಈಗಾಗಲೇ ಹಲವರನ್ನು ಕಳೆದುಕೊಂಡಿದ್ದೇವೆ, ಮುಂದೆ ಯಾವೊಬ್ಬ ಅಮಾಯಕನ ಜೀವ ಹೋಗುವುದನ್ನು ಸಹಿಸಲ್ಲ. ಕೂಡಲೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು, ತಪ್ಪಿದಲ್ಲಿ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ರೈತ ಸಂಘಟನೆಯ ಪ್ರಮುಖ ಪೂಣಚ್ಚ ಮಾತನಾಡಿ, ‘ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ-ಕಾಡಾನೆ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟಬೇಕು. ನಮ್ಮ ಮನವಿಯನ್ನು ಸಚಿವರಿಗೆ ತಲುಪಿಸುವುದು ಪಂಚಾಯತಿಗಳ ಹೊಣೆ’ ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರು ಸಲ್ಲಿಸಿದ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಿತಿ ಮೀರಿರುವ ಕಾಡಾನೆ ಹಾವಳಿ ತಡೆಗೆ ಒತ್ತಾಯಿಸಿ ಪಂಚಾಯಿತಿ ಎದುರು ವಿವಿಧ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಮನವಿ ಪತ್ರವನ್ನು ನಾವು ಸ್ವೀಕರಿಸಿದ್ದು, ಸಂಬಂಧಪಟ್ಟ ತಹಸೀಲ್ದಾರ್, ಸೇರಿದಂತೆ ಇಲಾಖೆ ಅಧಿಕಾರಿಗಳಿಗೆ, ಸಚಿವರಿಗೆ ತಲುಪಿಸಿ ಜನತೆಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.ಕಾರ್ಮಿಕ ಮುಖಂಡರಾದ ರಮೇಶ್, ಕುಟ್ಟಪ್ಪ, ಬೈಜು, ರೈತ ಸಂಘದ ಬೋಪಣ್ಣ, ಹಮೀದ್, ಸಿಐಟಿಯು ಸಂಘಟನೆಯ ಸಾಬು, ಡಿವೈಎಫ್‌ಐ ಜಿಲ್ಲಾ ಪ್ರಮುಖ ಸಾಧಿಕ್, ಆಟೋ ಚಾಲಕ ಸುರೇಶ್, ಸಂಜೀವಿನಿ ಒಕ್ಕೂಟದ ಯಮುನಾ, ಉದಯ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್ ಸೇರಿದಂತೆ ಹಲವರು ಇದ್ದರು.