ಸಾರಾಂಶ
71ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಬೀದಳ್ಳಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕನ್ನಡಪ್ರಭವಾರ್ತೆ, ಸೋಮವಾರಪೇಟೆ
71ನೆ ವನ್ಯಜೀವಿ ಸಪ್ತಾಹ -2025 ಅಂಗವಾಗಿ ಬೀದಳ್ಳಿಯಲ್ಲಿ ಗುರುವಾರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಪ್ರಕೃತಿ ನಡಿಗೆ ಹಾಗೂ ಪ್ಲಾಸ್ಟಿಕ್ ತೆರವು ಕಾರ್ಯದೊಂದಿಗೆ ಪ್ರಾರಂಭಿಸಲಾಯಿತು. ಈ ಮೂಲಕ ಜನರಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಹಾಗೂ ಪ್ರಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮವನ್ನು ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಪ್ರೊ. ಡಾ. ಜಡೆಗೌಡ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಕಾರಿಯಪ್ಪ ಉದ್ಘಾಟಿಸಿದರು. ನಂತರ ಅರಣ್ಯ ಕಾಲೇಜಿನ ಪ್ರೊ. ಡಾ. ಜಡೆಗೌಡ ಮಾತನಾಡಿ, ವನ್ಯಜೀವಿ ಸಂರಕ್ಷಣೆಯ ಮಹತ್ವ, ಮನುಷ್ಯ–ಪ್ರಾಣಿ ಸಂಘರ್ಷ, ಹಾಗೂ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ಕುರಿತು ವಿವರಿಸಿದರು.ಮಡಿಕೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಕಾರಿಯಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳು, ಸ್ವಚ್ಛತಾ ಅಭಿಯಾನ, ಸ್ಪರ್ಧೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.ಪುಷ್ಪಗಿರಿ ವಲಯದ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.