ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣವೋ, ಉಡಾನ್ ಜಾರಿಯೋ?

| Published : Jan 26 2025, 01:31 AM IST

ಸಾರಾಂಶ

ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಉತ್ಸುಕತೆಯಲ್ಲಿದ್ದರೆ, ಕೇಂದ್ರ ಈಗಿರುವ ಖಾಸಗಿ ವಿಮಾನ ತಂಗುದಾಣದಲ್ಲಿಯೇ ಉಡಾನ್ ಜಾರಿಗೆ ಮುಂದಾಗುತ್ತಿದೆ. ಹೀಗಾಗಿ, ಯಾವುದು ಕಾರ್ಯಸಾಧ್ಯ ಮತ್ತು ಯಾವುದು ಸೂಕ್ತ ಎನ್ನುವುದು ಸದ್ಯದ ಚರ್ಚೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಸಾಲು ಸಾಲು ಕೈಗಾರಿಕೆ ಹಾಗೂ ತೋಟಗಾರಿಕೆ ಉತ್ಪನ್ನಗಳ ವಿದೇಶಕ್ಕೆ ರಫ್ತು ಮಾಡುವ ಮೂಲಕ ವಾಣಿಜ್ಯ ವ್ಯವಹಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕೊಪ್ಪಳ ಬಳಿ ವಿಮಾನ ನಿಲ್ದಾಣವಾಗಬೇಕು ಎನ್ನುವ ಬಹುದಿನಗಳ ಬೇಡಿಕೆಗೆ ಈಗ ಮತ್ತೆ ಜೀವ ಬಂದಿದೆ.

ರಾಜ್ಯ ಸರ್ಕಾರ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಉತ್ಸುಕತೆಯಲ್ಲಿದ್ದರೆ, ಕೇಂದ್ರ ಈಗಿರುವ ಖಾಸಗಿ ವಿಮಾನ ತಂಗುದಾಣದಲ್ಲಿಯೇ ಉಡಾನ್ ಜಾರಿಗೆ ಮುಂದಾಗುತ್ತಿದೆ. ಹೀಗಾಗಿ, ಯಾವುದು ಕಾರ್ಯಸಾಧ್ಯ ಮತ್ತು ಯಾವುದು ಸೂಕ್ತ ಎನ್ನುವುದು ಸದ್ಯದ ಚರ್ಚೆ.

ಈ ಹಿಂದೆಯೇ ಕೊಪ್ಪಳ ತಾಲೂಕಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಅನುಮೋದನೆ ನೀಡಿ, ಭೂ ಸ್ವಾಧೀನಕ್ಕೂ ಕೆಕೆಆರ್‌ಡಿಬಿಯಲ್ಲಿ ₹100 ಕೋಟಿ ಮೀಸಲಿರಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಆ ಅನುದಾನವನ್ನು ಬೇರೆಡೆ ವರ್ಗಾಯಿಸಲಾಯಿತು. ಹೀಗಾಗಿ, ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಯೋಜನೆ ನನೆಗುದಿಗೆ ಬಿದ್ದಿತು.

ಇದಕ್ಕೂ ಮೊದಲು ಈಗಾಗಲೇ ಇರುವ ಎಂಎಸ್ ಪಿಎಲ್ ಕಂಪನಿಯ ವಿಮಾನ ತಂಗುದಾಣವನ್ನೇ ಮತ್ತಷ್ಟು ಅಭಿವೃದ್ಧಿಪಡಿಸಿ, ಅದರಲ್ಲಿಯೇ ಕೇಂದ್ರ ಸರ್ಕಾರದ ಉಡಾನ್ ಯೋಜನೆ ಜಾರಿಗೆ ಯತ್ನಿಸಲಾಯಿತು. ಆದರೆ ಎಂಎಸ್‌ಪಿಎಲ್ ಕಂಪನಿ ಸಹಮತ ಸೂಚಿಸಲಿಲ್ಲ. ಹಲವಾರು ಷರತ್ತುಗಳನ್ನು ಇಟ್ಟಿದ್ದರಿಂದ ಅದು ಸಹ ಕಾರ್ಯಗತವಾಗಲಿಲ್ಲ. ನಂತರ ಕೊಪ್ಪಳದಲ್ಲಿ ಸರ್ಕಾರದ ವತಿಯಿಂದಲೇ ಪ್ರತ್ಯೇಕ ವಿಮಾನ ನಿಲ್ದಾಣ ಯೋಜನೆ ಜಾರಿಯಾಗುತ್ತದೆ ಎನ್ನುವ ಹಂತ ತಲುಪಿ, ಅದನ್ನು ಕೈಬಿಡಲಾಯಿತು.

ಮತ್ತೆ ಪ್ರಸ್ತಾವನೆ: ಈಗ ರಾಜ್ಯ ಸರ್ಕಾರದ ಮುಂದೆ ಕೊಪ್ಪಳ ಬಳಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಇದೆ. ಹಟ್ಟಿ, ತಾಳಕನಕಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಈಗಾಗಲೇ ಇದಕ್ಕಾಗಿ 468 ಎಕರೆ ಭೂಮಿ ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಬೇಕಿದೆ. ಈ ಪ್ರಸ್ತಾವನೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಸಹಮತ ವ್ಯಕ್ತಪಡಿಸಿದ್ದು, ಇನ್ನೂ ಅಧಿಕೃತ ಮುದ್ರೆ ಒತ್ತಿಲ್ಲ. ಹೀಗಾಗಿ ಜಾರಿ ಸಾಧ್ಯವೇ, ರಾಜ್ಯ ಸರ್ಕಾರ ಅನುಮೋದನೆ ನೀಡುತ್ತದೆಯೇ ಎನ್ನುವುದು ಸ್ಪಷ್ಟವಿಲ್ಲ.

ತುದಿಗಾಲಲ್ಲಿ ಕೇಂದ್ರ: ಈಗ ಪುನಃ ಕೇಂದ್ರ ಸರ್ಕಾರ ಎಂಎಸ್‌ಪಿಎಲ್‌ ವಿಮಾನ ತಂಗುದಾಣವನ್ನೇ ಮತ್ತಷ್ಟು ಅಭಿವೃದ್ಧಿ ಪಡಿಸಿ, ವಿಸ್ತರಿಸಿ, ಉಡಾನ್ ಯೋಜನೆಯನ್ನಾದರೂ ಜಾರಿ ಮಾಡಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ವಿಮಾನ ಯಾನ ಸಚಿವಾಲಯ ಕೊಪ್ಪಳ ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದೆ. ಎಂಎಸ್‌ಪಿಎಲ್ ಸಹಮತ ನೀಡುವುದಾದರೆ ಮೊದಲು ವಿಮಾನ ಹಾರಾಟವಾದರೂ ಪ್ರಾರಂಭವಾಗಲಿ, ಆನಂತರ ನೂತನ ವಿಮಾನ ನಿರ್ಮಾಣ ಕುರಿತು ಚಿಂತಿಸಿದರಾಯಿತು ಎನ್ನುತ್ತಿದೆ ಕೇಂದ್ರ. ಈಗ ಎಂಎಸ್‌ಪಿಎಲ್ ಸಹ ಸಹಮತ ಸೂಚಿಸಲು ಸಿದ್ಧವಿದೆ ಎನ್ನಲಾಗಿದೆ. ಎಂಎಸ್‌ಪಿಎಲ್ ಕಂಪನಿಯೇ ಕೊಪ್ಪಳ ಬಳಿ ಬೃಹತ್ ಸ್ಟೀಲ್ ಪ್ಲಾಂಟ್ ಹಾಕಲು ಮುಂದಾಗಿರುವುದರಿಂದ ಅದಕ್ಕೂ ವಿಮಾನಯಾನದ ಅಗತ್ಯವಿದೆ. ಹೀಗಾಗಿ, ಇರುವ ವಿಮಾನ ತಂಗುದಾಣವನ್ನೇ ಮತ್ತಷ್ಟು ಅಭಿವೃದ್ಧಿಪಡಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿಮಾನ ನಿಲ್ದಾಣವನ್ನೇ ನಿರ್ಮಾಣ ಮಾಡಲು ಉತ್ಸುಕವಾಗಿದೆ.

ಹೀಗಾಗಿ ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಸೂಕ್ತವೋ ಅಥವಾ ಈಗಿರುವ ಖಾಸಗಿ ವಿಮಾನ ತಂಗುದಾಣದಲ್ಲಿಯೇ ಉಡಾನ್ ಜಾರಿ ಮಾಡುವುದು ಸೂಕ್ತವೋ ಎನ್ನುವುದು ಸದ್ಯಕ್ಕೆ ಇರುವ ಚರ್ಚೆ.ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣಕ್ಕೆ ಈಗಾಗಲೇ 468 ಎಕರೆ ಭೂಮಿ ಗುರುತಿಸಲಾಗಿದ್ದು, ಇದನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶೀಘ್ರದಲ್ಲಿಯೇ ಭೂ ಸ್ವಾಧೀನಕ್ಕೆ ಅನುಮತಿ ನೀಡುತ್ತಾರೆ. ಹೀಗಾಗಿ, ನೂತನ ವಿಮಾನ ನಿಲ್ದಾಣವನ್ನೇ ನಿರ್ಮಾಣ ಮಾಡಲು ಪ್ರಯತ್ನ ನಡೆದಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣ ಯೋಜನೆ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಭೂ ಸ್ವಾಧೀನ ಮಾಡಿಕೊಡುತ್ತಿಲ್ಲ. ಕೆಕೆಆರ್‌ಡಿಬಿಯಲ್ಲಿ ಕಾಯ್ದಿರಿಸಿದ್ದ ಅನುದಾನವನ್ನು ಬೇರೆಯ ಕಾರಣಕ್ಕಾಗಿ ಬಳಕೆ ಮಾಡಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಈಗಿರುವ ಖಾಸಗಿ ವಿಮಾನ ತಂಗುದಾಣದಲ್ಲಿಯೇ ವಿಮಾನ ಹಾರಾಟ ಪ್ರಾರಂಭಿಸಲು ಉತ್ಸುಕವಾಗಿದೆ. ರಾಜ್ಯ ಸರ್ಕಾರ ಈ ಕುರಿತು ನಿರ್ಣಯಕೈಗೊಳ್ಳುವ ಅಗತ್ಯವಿದೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಹೇಳಿದರು.