ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಕ್ಯಾಬಿನೆಟ್ ನಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಸ್ಥಾನ ಪಡೆಯುತ್ತಿದ್ದಂತೆ ರಾಜ್ಯದ ಅದರಲ್ಲಿಯೂ ಪ್ರಮುಖವಾಗಿ ಭದ್ರಾವತಿಯ ವಿಶ್ವೇಶ್ವರಯ್ಯ ಐರನ್ ಎಂಡ್ ಸ್ಟೀಲ್ ಕಂಪನಿ ಪುನರುಜ್ಜೀವನಗೊಳ್ಳುವ ಭರವಸೆಯ ಬೆಳಕು ಜಿಲ್ಲೆಯಲ್ಲಿ ಮೂಡಿದೆ. ಮುಖ್ಯವಾಗಿ ವಿಎಸ್ ಐಎಲ್ ಸಂಸ್ಥೆಯ ಸಾವಿರಾರು ಕಾರ್ಮಿಕರಲ್ಲಿ ಹೊಸ ಬೆಳಕು ಕಾಣಿಸಿದೆ. ಇದರ ಜೊತೆಗೆ ಇದರ ಪುನರುಜ್ಜೀವನದಿಂದ ಜಿಲ್ಲೆಯ ಆರ್ಥಿಕತೆ ಕೂಡ ಪುಟಿದೇಳಲಿದೆ ಎಂಬ ಅಭಿಪ್ರಾಯ ಮೂಡುತ್ತಿದೆ.
ವಿಐಎಸ್‌ಎಲ್ ಗೆ 101 ವರ್ಷವಾಗುತ್ತಿರುವ ಸಂಭ್ರಮಕ್ಕೆ ಸಾರ್ಥಕತೆಯ ಲೇಪ ದೊರೆಯಬಹುದೆಂಬ ಆಶಾವಾದವಿದೆ. ಹಲವು ದಶಕಗಳ ಹೋರಾಟದ ಬಳಿಕವೂ ಪುನರುಜ್ಜೀವನದ ಕನಸು ನನಸಾಗದ ಹೊತ್ತಿನಲ್ಲಿ ಈಗ ಇದೆಲ್ಲ ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗಿದೆ.ರಾಜ್ಯ ಸರ್ಕಾರದ ವಶದಲ್ಲಿದ್ದ ಕಾರ್ಖಾನೆಯನ್ನು 1989ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಗೆ ಹಸ್ತಾಂತರ ವಾದ ಬಳಿಕ ಏನೋ ಬದಲಾವಣೆಯಾಗಬಹುದೆಂಬ ಎಲ್ಲ ನಿರೀಕ್ಷೆಗಳೂ ತಲೆಕೆಳಗಾದ ಬಳಿಕ ಕಾರ್ಮಿಕರಲ್ಲಿ ಭಾರೀ ನಿರಾಶೆ ಮೂಡಿತ್ತು. ಬೆನ್ನಲ್ಲೇ ಕಳೆದ ದಶಕ ದಿಂದೀಚೆಗೆ ಹಲವು ರೀತಿಯ ಹೋರಾಟಗಳೂ ನಡೆದವು. ಸಂಸದ ಬಿ.ವೈ.ರಾಘವೇಂದ್ರ ಅವರ ಎಲ್ಲ ರೀತಿಯ ಪ್ರಯತ್ನಗಳ ನಡುವೆಯೂ ಕೇಂದ್ರ ಸರ್ಕಾರ ಪುನರುಜ್ಜೀವನದ ಬದಲಿಗೆ ಇದನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಯಿತು. ಆದರೆ ಕೇಂದ್ರ ಸರ್ಕಾರದ ದುರದೃಷ್ಟವೋ ಏನೋ ಯಾರೂ ಕೂಡ ಇದಕ್ಕೆ ಬಿಡ್ ಮಾಡಲು ಮುಂದೆ ಬರಲೇ ಇಲ್ಲ.
ಇದೆಲ್ಲ ಆಗುತ್ತಿದ್ದಂತೆ ಪುನಃ ಸಂಸದ ರಾಘವೇಂದ್ರ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಉಕ್ಕುಖಾತೆ ಸಚಿವರಿಗೆ ಮನವಿ ಸಲ್ಲಿಸಿ ಪುನರುಜ್ಜೀವನಕ್ಕೆ ಮನವಿ ಸಲ್ಲಿಸಿ ಪ್ರಯತ್ನ ಮುಂದುವರೆಸಿದರು. ಇದಕ್ಕೆ ಕೇಂದ್ರ ಪ್ರತಿಕ್ರಿಯಿಸಿ ಪುನರುಜ್ಜೀವನಕ್ಕೆ ಪ್ರಯತ್ನ ನಡೆಸುವುದಾಗಿ ಭರವಸೆ ಕೂಡ ನೀಡಿದ್ದರು. ಮುಖ್ಯವಾಗಿ ಈ ಕಾರ್ಖಾನೆಯಲ್ಲಿ ಬ್ಲಾಸ್ಟ್ ಫರ್ನೇಸ್ ತಂತ್ರಜ್ಞಾನದ ಮೂಲಕ ಉತ್ತಮ ಗುಣಮಟ್ಟದ ಉಕ್ಕು ಉತ್ಪಾದಿಸಬಹುದಾಗಿದೆ ಎಂಬುದನ್ನು ಸಂಸದ ರಾಘವೇಂದ್ರ ಅವರು ಮನವರಿಕೆ ಮಾಡಿಕೊಟ್ಟಿದ್ದು, ಈ ಉತ್ತಮ ಗುಣಮಟ್ಟದ ಉಕ್ಕು ರಕ್ಷಣಾ ಸಾಮಗ್ರಿಗಳು ಉತ್ಪಾದನೆಗೆ ಬಳಕೆಯಾಗಲಿದೆ. ಇದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಆಗಲಿದೆ ಎಂಬ ನಂಬಿಕೆ ಅವರಲ್ಲಿದೆ.ಪುನಶ್ಚೇತನ:
ಇದರ ಪುನಶ್ಚೇನಕ್ಕೆ ಸುಮಾರು 500 ಕೋಟಿ ರು.ಗಳ ತಕ್ಷಣದ ಹೂಡಿಕೆಯ ಅಗತ್ಯವಿದೆ. ಒಮ್ಮೆ ಲಾಭಕ್ಕೆ ಬಂದರೆ ಇದನ್ನು ಇನ್ನಷ್ಟು ಉಚ್ಚ್ರಾಯ ಸ್ಥಿತಿಗೆ ಕರೆದೊಯ್ಯಬಹುದು ಎನ್ನುತ್ತಾರೆ ಸಂಸದ ಬಿ. ವೈ. ರಾಘವೇಂದ್ರ. ಈ ಕಾರ್ಖಾನೆಗಾಗಿ ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಗಣಿಯನ್ನು ಕೂಡ ಮಂಜೂರು ಮಾಡಿದೆ. ಆದರೆ ಇದನ್ನು ಪಡೆಯಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸ.ಹೆಚ್.ಡಿ.ಕುಮಾರಸ್ವಾಮಿಯವರು ಈ ವಿಷಯದಲ್ಲಿ ಗಟ್ಟಿಯಾದ ನಿಲುವು ತೋರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ಸಂಸದ ಬಿ. ವೈ.ರಾಘವೇಂದ್ರ ಕೂಡ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜಕೀಯಲಾಭ:ಭದ್ರಾವತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಲಿಷ್ಠವಾಗಿದೆ. ವಿಐಎಸ್‌ಎಲ್ ಪುನರುಜ್ಜೀವನದ ಮೂಲಕ ರಾಜಕೀಯವಾಗಿ ಇಲ್ಲಿ ಬಲಿಷ್ಠವಾಗಲು ಬಿಜೆಪಿ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಇದುವರೆಗೆ ಯಶಸ್ವಿಯಾಗಿಲ್ಲ. ಈ ಬಾರಿ ಕುಮಾರಸ್ವಾಮಿ ಉಕ್ಕು ಸಚಿವರಾಗಿದ್ದು, ಅವರು ಈ ಕಂಪನಿಯನ್ನು ಪುನರುಜ್ಜೀವನ ಗೊಳಿಸಿದರೆ ಸಹಜವಾಗಿಯೇ ಜೆಡಿಎಸ್ ಇದರ ಲಾಭ ಪಡೆಯಲು ಯತ್ನಿಸಲಿದೆ.
ಬಾಕ್ಸ್:ಕಾರ್ಖಾನೆಯ ಇತಿಹಾಸ:
ಭದ್ರಾ ನದಿಯ ದಂಡೆಯ ಭದ್ರಾವತಿಯಲ್ಲಿ ಮೈಸೂರು ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಹೆಸರಿನಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಆಗಿನ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ 1923ರಲ್ಲಿ ಸ್ಥಾಪಿಸಿದರು.ಆರಂಭದಲ್ಲಿ ಅದಿರು ಕರಗಿಸಲು ಮರಗಳನ್ನು ಬಳಸಲಾಗುತ್ತಿತ್ತು. ಈ ಮರದ ದಿಮ್ಮೆಗಳನ್ನು ತಾಳಗುಪ್ಪ ಅರಣ್ಯ ಪ್ರದೇಶದಿಂದ ಸಾಗಿಸಲು 1939ರಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗವನ್ನು ಹಾಕಲಾಯಿತು. 1952ರಲ್ಲಿ ಕಂಪನಿಯಲ್ಲಿ ಎರಡು ಎಲೆಕ್ಟ್ರಿಕ್ ಪಿಗ್-ಕಬ್ಬಿಣದ ಮೇಲ್ಮೈಗಳನ್ನು ಸ್ಥಾಪಿಸಲಾಯಿತು, ಇದರಿಂದಾಗಿ VISL ಅನ್ನು ಕಬ್ಬಿಣದ ಅದಿರು ಕರಗಿಸಲು ವಿದ್ಯುಚ್ಛಕ್ತಿಯನ್ನು ಬಳಸಿದ ಭಾರತದ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯಾಗಿ ಹೆಸರು ಪಡೆಯಿತು. 1962ರಲ್ಲಿ ಈ ಕಾರ್ಖಾನೆಯ ಹೆಸರನ್ನು ದಿ ಮೈಸೂರು ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಎಂದು ಬದಲಾಯಿಸಲಾಯಿತು
ಸುಮಾರು 70 ವರ್ಷಗಳ ಕಾಲ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಈ ಕಾರ್ಖಾನೆ ಭದ್ರಾವತಿಯ ಆರ್ಥಿಕ ಚಿತ್ರಣವನ್ನೇ ಬದಲಾಯಿಸಿತ್ತು. ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಅನ್ನ ನೀಡಿದ್ದ ಈ ಸಂಸ್ಥೆ ದೇಶದ ಆದಾಯದಲ್ಲಿಯೂ ಪ್ರಮಖ ಸ್ಥಾನದಲ್ಲಿತ್ತು. ಸುವರ್ಣ ಯುಗವನ್ನೇ ಸೃಷ್ಟಿಸಿತ್ತು. ಇದಕ್ಕೆ ಕೆಮ್ಮಣ್ಣು ಗುಂಡಿಯಿಂದ ಕಬ್ಬಿಣದ ಅದಿರು ತರಲು ಗಣಿ ಆರಂಭಿಸಲಾಯಿತಲ್ಲದೆ, ಅಲ್ಲಿಂದ ರೋಪ್ ವೇ ಮೂಲಕ ಅದಿರನ್ನು ಕಾರ್ಖಾನೆಗೆ ಸಾಗಿಸಲಾಗುತ್ತಿದ್ದು, 80 ರ ದಶಕದಲ್ಲಿ ಇದಕ್ಕೆ ಕೊನೆ ಹಾಡಲಾಯಿತು.ಹೆಚ್.ಡಿ.ದೇವೇಗೌಡರ ಅವಧಿಯಲ್ಲಿ ರಾಜ್ಯ ಸರ್ಕಾರವು ಸಾಂಕೇತಿಕವಾಗಿಒಂದು ರುಪಾಯಿಗೆ ಸರ್ಕಾರಿ ಸ್ವಾಮ್ಯದ VISL ಅನ್ನು SAILಗೆ ವರ್ಗಾಯಿಸಿತು. ಅಂದಿನಿಂದ ಇದು SAILನ ಭಾಗವಾಯಿತು.