ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯ ಬಿಜೆಪಿಗರು ರಾಷ್ಟ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹಾಗೂ ಅಡುಗೆ ಅನಿಲದ ಬೆಲೆಯನ್ನು ನಿರಂತರ ಏರಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಬೇಕೇ ಹೊರತು ರಾಜ್ಯ ಸರ್ಕಾರದ ವಿರುದ್ಧ ಅಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌಡಗೆರೆ ಪಂಚಾಯತಿಯ ಹೊನ್ನಪ್ಪನಹಳ್ಳಿ, ಚಿನ್ನ ನಾಗೇನಹಳ್ಳಿ ಹಾಗೂ ಬಂದಾರ್ಲಹಳ್ಳಿ ಗ್ರಾಮಗಳಲ್ಲಿ ‘ನಮ್ಮ ಊರಿಗೆ ನಮ್ಮ ಶಾಸಕರು’ ಕಾರ್ಯಕ್ರಮದ ನಿಮಿತ್ತ ಆಗಮಿಸಿ ಅಲ್ಲಿನ ಜನತೆಯ ಕುಂದುಕೊರತೆಗಳನ್ನು ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ಜನತಾ ಪಕ್ಷದವರು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಗೆ ಜನರೇ ಬರುತ್ತಿಲ್ಲ. ಇನ್ನು ಆಕ್ರೋಶ ಎಲ್ಲಿಂದ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆಯನ್ನು ವಿರೋಧಿಸಿ ವಿಜಯೇಂದ್ರ, ಪ್ರಹ್ಲಾದ್ ಜೋಷಿ ಒಳಗೊಂಡಂತೆ ಬಿಜೆಪಿ ನಾಯಕರು ಏನು ಹೇಳುತ್ತಾರೆ? ಅವರದೇ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡ್ತಾರಾ? ಎಂದು ಪ್ರಶ್ನಿಸಿದರು.ನಂತರ ಹೊನ್ನಪ್ಪಹಳ್ಳಿ, ಚಿನ್ನ ನಾಗೇನಹಳ್ಳಿ ಮತ್ತು ಬಂದರಹಳ್ಳಿ ಗ್ರಾಮಗಳಿಗೆ ಶಾಸಕರು ಭೇಟಿ ನೀಡಿದಾಗ ಈ ಗ್ರಾಮಗಳನ್ನು ಹೊಂದಿರುವ ಪಂಚಾಯತಿಯ ಪಿಡಿಒ ಲೋಕೇಶ್ ಮೇಲೆ ಜನಸಾಮಾನ್ಯರು ಹಲವಾರು ಆರೋಪಗಳನ್ನು ಮಾಡಿದ್ದು ಇವರನ್ನು ತಕ್ಷಣ ಈ ಪಂಚಾಯಿತಿಯಿಂದ ಬೇರೊಂದು ಪಂಚಾಯಿತಿಗೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದರು.
ಪಿಡಿಒ ಲೋಕೇಶ್ ಮಾಡಿರುವ ಹಲವಾರು ಅವೈಜ್ಞಾನಿಕ ಕಾಮಗಾರಿಗಳು ಮತ್ತು ದಲಿತರ ವಿರುದ್ಧ ಇದ್ದಾರೆ ಎಂಬುದಕ್ಕೆ ಬಂದಾರ್ಲಹಳ್ಳಿ ಗ್ರಾಮದ ನಿವಾಸಿ ನಿವೃತ್ತ ರೈಲ್ವೆ ಅಧಿಕಾರಿ ನಾರಾಯಣಪ್ಪ ಊರಿಗೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ನಾನಾ ಕಚೇರಿಗಳಿಗೆ ಅಲೆದಾಡಿ ಬಂದರೂ ಮುಖ್ಯವಾಗಿ ಗ್ರಾಮ ಪಂಚಾಯಿತಿಯಲ್ಲಿ ಇವರಿಗೆ ಯಾವುದೇ ಸಹಕಾರ ಕೊಡಲಿಲ್ಲ. ಕೊನೆಗೆ ಮೂರು ವರ್ಷಗಳ ಹಿಂದೆ ಹೈಕೋರ್ಟ್ ನಿಂದ ದಲಿತರೇ ಇರುವ ಬಂದಾರ್ಲಹಳ್ಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಪಂಚಾಯತಿಗೆ ಆದೇಶ ತಂದಿದ್ದರೂ ಸಹ, ಹೈಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಪಿಡಿಒ ಲೋಕೇಶ್ ಮೇಲೆ ಶಾಸಕರಿಗೆ ದಾಖಲೆ ಸಮೇತ ಮಾಹಿತಿಯನ್ನು ಕೊಟ್ಟರು.ಈ ಸಂಬಂಧ ಗೌಡಗೆರೆ ಪಿಡಿಒ ಲೋಕೇಶ್ ರ ಕಾರ್ಯ ವೈಖರಿ ಬಗ್ಗೆ ತನಿಖೆ ಮಾಡಬೇಕು ಮತ್ತು ಅವರನ್ನು ಬೇರೆಡೆಗೆ ವರ್ಗ ಮಾಡಲು ಸಂಬಂಧಪಟ್ಟ ಇಲಾಖೆ ಮತ್ತು ಸಚಿವರ ಜೊತೆ ನಾನು ಮಾತನಾಡುತ್ತೇನೆ ಎಂದು ತಿಳಿಸಿ, ಬಂದಾರ್ಲಹಳ್ಳಿ ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಆಲಿಸಿ ಬಹುತೇಕ ದಲಿತರು ಇರುವ ಈ ಊರಿಗೆ 35 ರಿಂದ 45 ಲಕ್ಷ ರು.ಗಳ ಅನುದಾನ ಕೊಡುವುದಾಗಿ ಭರವಸೆ ನೀಡಿದರು,
ಶಾಸಕರೊಂದಿಗೆ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಅರವಿಂದ್, ಜಿ.ಉಮೇಶ್, ಆಹಾರ, ಅಬಕಾರಿ,ಅರಣ್ಯ,ಬೆಸ್ಕಾಂ, ಆರೋಗ್ಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ತಾಲೂಕು,ಗ್ರಾಮ ಪಂಚಾಯತಿ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಇದ್ದರು.-