ರಾಜಾ ಅಮರೇಶ್ವರ ನಡೆ ನಿಗೂಢ, ಬಿವಿ ನಾಯಕಗೆ ರಾಯಚೂರು ಲೋಕಸಭಾ ಟಿಕೆಟ್‌ ಸಿಗುತ್ತಾ?

| Published : Jan 17 2024, 01:49 AM IST / Updated: Jan 17 2024, 05:11 PM IST

bjp congress
ರಾಜಾ ಅಮರೇಶ್ವರ ನಡೆ ನಿಗೂಢ, ಬಿವಿ ನಾಯಕಗೆ ರಾಯಚೂರು ಲೋಕಸಭಾ ಟಿಕೆಟ್‌ ಸಿಗುತ್ತಾ?
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಲೋಕಸಭಾ ಚುನಾವಣಾ ಪೂರ್ವ ಸಿದ್ಧತೆಗಳು ಸದ್ದಿಲ್ಲದೆ ಆರಂಭವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಟಿಕೆಟ್ ಹಂಚಿಕೆಯೇ ಸವಾಲಾಗಿ ಪರಿಣಮಿಸಿದೆ.

ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ. ಈಗಾಗಲೇ ಲೋಕಸಭಾ ಚುನಾವಣಾ ಪೂರ್ವ ಸಿದ್ಧತೆಗಳು ಸದ್ದಿಲ್ಲದೆ ಆರಂಭವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಟಿಕೆಟ್ ಹಂಚಿಕೆಯೇ ಸವಾಲಾಗಿ ಪರಿಣಮಿಸಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಈ ಕ್ಷೇತ್ರ, ಪ್ರಸ್ತುತ ಬಿಜೆಪಿ ತೆಕ್ಕೆಯಲ್ಲಿದೆ. ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಬೇಕೆನ್ನುವ ಛಲದೊಂದಿಗೆ ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ. 

ಇನ್ನು ಕಳೆದ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದೆ. ಚುನಾವಣೆ ಪೂರ್ವ ಮೈತ್ರಿಯಂತೆ ಕ್ಷೇತ್ರದಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ಸಿಕ್ಕಿರುವುದರಿಂದ ಹೆಚ್ಚಿನ ಬಲಬಂದಂತಾಗಿದೆ.

ರಾಯಚೂರು ಜಿಲ್ಲೆಯ ಐದು, ಯಾದಗಿರಿ ಜಿಲ್ಲೆಯ ಎರಡು ವಿಧಾನಸಭೆ ಸೇರಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗ‍ಳ‍ು ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. ಕ್ಷೇತ್ರದ ಹಾಲಿ ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮತ್ತೊಮ್ಮೆ ಸ್ಪರ್ಧಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಹೀಗಾಗಿ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ಬಿ.ವಿ.ನಾಯಕ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ಅಮರೇಶ್ವರ ನಾಯಕ ಅವರ ಸ್ಪರ್ಧೆ ನಿರಾಸಕ್ತಿಯಿಂದ ಬಿ.ವಿ.ನಾಯಕ ಅವರು ಲೋಕಸಭಾ ಚುನಾವಣೆ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. 

ಇದರ ಜೊತೆಗೆ ಸುರಪುರ ಮಾಜಿ ಶಾಸಕ ರಾಜೂಗೌಡ (ನರಸಿಂಹ ನಾಯಕ), ದೇವದುರ್ಗದ ಕೆ.ಶಿವನಗೌಡ ನಾಯಕ ಹಾಗೂ ತಿಪ್ಪರಾಜು ಹವಾಲ್ದಾರ್‌ ಅವರ ಹೆಸರೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿನ ಪೈಪೋಟಿ ತುಸು ಜಾಸ್ತಿಯೇ ಇದೆ. ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ, ಜಾರಕಿಹೊಳಿ ಕುಟುಂಬದ ಆಪ್ತರಾಗಿರುವ ರವಿ ಪಾಟೀಲ್‌, ದೇವಣ್ಣ ನಾಯಕ ಹಾಗೂ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಅವರ ಸಹೋದರನ ಪುತ್ರ ರಾಜಾ ಕುಮಾರ ನಾಯಕ ಹೆಸರು ಚರ್ಚೆಯಲ್ಲಿದೆ. 

ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಿತಿಮೀರಿರುವ ಗುಂಪು ಸಂಘರ್ಷ, ಬಣ ರಾಜಕೀಯದಿಂದಾಗಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬುದೇ ಕುತೂಹಲದ ವಿಚಾರವಾಗಿ ಪರಿಣಮಿಸಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್‌, ಬೋಸರಾಜು ಅವರ ಕೃಪಾಕಟಾಕ್ಷ ಮತ್ತು ತಂತ್ರಗಾರಿಕೆಯಿಂದಾಗಿ ಅಚ್ಚರಿಯ ಅಭ್ಯರ್ಥಿಗೆ ಈ ಬಾರಿ ಟಿಕೆಟ್‌ ದೊರೆತರೂ ಅಚ್ಚರಿ ಇಲ್ಲ ಎಂಬ ಮಾತುಗಳು ಪಕ್ಷದೊಳಗೇ ಕೇಳಿಬರುತ್ತಿವೆ.

ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಿರುವ ಬಿ.ವಿ.ನಾಯಕ ಅವರನ್ನು ವಾಪಸ್‌ ಕಾಂಗ್ರೆಸ್‌ಗೆ ಕರೆದುಕೊಂಡು ಬಂದು ಟಿಕೆಟ್‌ ಕೊಡಬೇಕು ಎನ್ನುವ ಚರ್ಚೆಗಳೂ ಪಕ್ಷದಲ್ಲಿ ಸದ್ದಿಲ್ಲದೆ ಸಾಗಿವೆ. ಇದರ ಜತೆಗೆ, ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಗೆದ್ದು ಸಂಸದರಾಗಿ ಆಯ್ಕೆಯಾಗಿರುವ ರಾಜಾ ಅಮರೇಶ್ವರ ನಾಯಕ ಅವರು ಮತ್ತೆ ಸ್ಪರ್ಧಿಸುವ ಒಲವು ತೋರದಿದ್ದರೆ ವಾಪಸ್‌ ಕಾಂಗ್ರೆಸ್‌ಗೆ ಕರೆತಂದು ಪಕ್ಷ ಬಲವರ್ಧನೆ ಮಾಡಬೇಕೆನ್ನುವ ಪ್ರಯತ್ನಗಳೂ ಒ‍ಳಗೊಳಗೆ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. 

ಇದರ ನಡುವೆ, ಈ ಮೊದಲು ರಾಯಚೂರಿನಲ್ಲೇ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಜಿ.ಕುಮಾರ ನಾಯಕ ಅವರೂ ಕಾಂಗ್ರೆಸ್‌ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಇವರ ಜತೆಗೆ ರವಿ ಪಾಟೀಲ್, ರಾಜಾ ಕುಮಾರ ನಾಯಕ ಅವರೂ ತಮ್ಮ ರಾಜಕೀಯ ಪ್ರಭಾವ ಬಳಸಿ ಟಿಕೆಟ್‌ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.