ಸಾರಾಂಶ
ಸತೀಶ ಸಿ.ಎಸ್.
ರಟ್ಟೀಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಮೊದಲ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆ ಪಕ್ಷೇತರರಾಗಿ ಗೆದ್ದಿರುವ ಅಭ್ಯರ್ಥಿಯೊಬ್ಬರು "ಕೈ'''' ಬೆಂಬಲಿಸುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ.15ನೇ ವಾರ್ಡ್‌ನಿಂದ ಪಕ್ಷೇತರರಾಗಿ ಗೆದ್ದಿರುವ ಲಲಿತಾ ಚನ್ನಗೌಡ್ರ ಅವರ ಪುತ್ರ ಶಂಕರಗೌಡ ಚನ್ನಗೌಡ್ರ ಅವರು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಶುಕ್ರವಾರ ಪಕ್ಷೇತರರಾಗಿ ಗೆದ್ದಿರುವ ಲಲಿತಾ ಚನ್ನಗೌಡ್ರ ಅವರ ಪುತ್ರ ಶಂಕರಗೌಡ ಸೇರಿದಂತೆ ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿಎಚ್. ಬನ್ನಿಕೋಡ ಹಾಗೂ ಪಪಂ ಕಾಂಗ್ರೆಸ್ ಸದಸ್ಯರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಇದರಿಂದ ಕಾಂಗ್ರೆಸ್ ಸದಸ್ಯರು ಅಧಿಕಾರ ನಡೆಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಬೆಳವಣಿಗೆಯಿಂದ ಕಮಲ ಪಡೆ ಕಂಗಾಲಾಗಿದೆ.
ಆ. 20ರಂದು ಪ್ರಕಟವಾದ ಪಪಂ ಫಲಿತಾಂಶದಲ್ಲಿ ಕಾಂಗ್ರೆಸ್ಸಿಗೆ 7 ಸ್ಥಾನ, ಬಿಜೆಪಿಗೆ 6 ಸ್ಥಾನ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಯಾಗಿದ್ದರು. ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿರಲಿಲ್ಲ. ಸಹಜವಾಗಿ ಪಕ್ಷೇತರ ಅಭ್ಯರ್ಥಿಗಳಿಗೆ ಡಿಮ್ಯಾಂಡ್ ಬಂದಿತ್ತು. ಅದರಲ್ಲಿ 15ನೇ ವಾರ್ಡ್‌ನಿಂದ ಗೆದ್ದಿರುವ ಲಲಿತಾ ಚನ್ನಗೌಡ್ರ ಅವರು ದಿಢೀರ್ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದಾರೆ.ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 8 ಇದ್ದ ಕಾರಣ ಕಾಂಗ್ರೆಸ್ಸಿಗೆ ಒಬ್ಬ ಸದಸ್ಯರ ಅವಶ್ಯಕತೆ ಇತ್ತು. ಆದರೆ ಬಿಜೆಪಿ 6 ಸ್ಥಾನ ಪಡೆದಿದ್ದರಿಂದ ಮ್ಯಾಜಿಕ್ ನಂಬರ್‌ಗೆ ಇಬ್ಬರು ಸದಸ್ಯರು ಬೇಕಾಗಿತ್ತು. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾಗಿದ್ದರು. ಈ ಇಬ್ಬರ ಬೆಂಬಲ ಪಡೆದು ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಪಕ್ಕಾ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಎಲ್ಲರ ನಿರೀಕ್ಷೆ ಉಲ್ಟಾ ಮಾಡಿರುವ ಲಲಿತಾ ಚನ್ನಗೌಡ್ರ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದಾರೆ.ಮತದಾರರ ಬೇಸರ: ಚುನಾವಣಾ ಪ್ರಚಾರ ವೇಳೆ ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಅವರ ಪುತ್ರ ಶಂಕರಗೌಡ ಚನ್ನಗೌಡ್ರ ಅವರು, ಮತದಾರರಿಗೆ ನಾನು ಪಕ್ಕಾ ಬಿಜೆಪಿ ಕಾರ್ಯಕರ್ತ. ಅಲ್ಲದೇ ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದಿದ್ದು, ಪ್ರಖರ ಹಿಂದುತ್ವವಾದಿ. ಕಾಂಗ್ರೆಸ್ ಸಿದ್ಧಾಂತ ನಮಗೆ ತದ್ವಿರುದ್ಧವಾಗಿವೆ. ನಮ್ಮ ತಾಯಿಗೆ ಆಶೀರ್ವಾದ ಮಾಡಿದರೆ ಮರಳಿ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದಿದ್ದರು. ಗೆದ್ದ ಬಳಿಕ ಏಕಾಏಕಿ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸುತ್ತಿರುವುದು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ಸಿಗೆ ಬೆಂಬಲ ಅಷ್ಟೆ: ಶಂಕರಗೌಡ
ಕಾಂಗ್ರೆಸ್ ಸೇರ್ಪಡೆ ಕುರಿತು ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಅವರನ್ನು ಸಂಪರ್ಕಿಸಿದರೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪುತ್ರ ಶಂಕರಗೌಡ ಚನ್ನಗೌಡ್ರ ಅವರನ್ನು ಸಂಪರ್ಕಿಸಿದಾಗ ನನ್ನ ತಾಯಿ ಹಾಗೂ ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲ. ಕೇವಲ ಬೆಂಬಲ ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.