ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾನಮಾನ ಈ ಬಾರಿ ಅಧಿವೇಶನದಲ್ಲಿ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಬಲವಾಗಿದೆ.
ಹಲವು ವರ್ಷಗಳ ಹೋರಾಟದ ಫಲವಾಗಿ, ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಆಶದಾಯಕ ಬೆಳವಣಿಗೆ ಆಗಿತ್ತು.ಧಾರವಾಡಕ್ಕೆ ಮಹಾನಗರ ಪಾಲಿಕೆ ರಚನೆಯಾಗಲು ಅಗತ್ಯವಿರುವ ಎಲ್ಲ ಮಾನದಂಡಗಳು ಪೂರ್ಣವಾಗಿವೆ. ಪ್ರತ್ಯೇಕ ಪಾಲಿಕೆ ರಚನೆಗೆ ಕ್ರಮ ವಹಿಸಿ ಆದೇಶ ಹೊರಡಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಅರವಿಂದ ಬೆಲ್ಲದ ನಗರಾಭಿವೃದ್ಧಿ ಸಚಿವರ ಗಮನ ಸೆಳೆದಿದ್ದರು. ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ ಅವರು, ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ 1976ರಲ್ಲಿರುವ ಮಾನದಂಡಗಳನ್ನು ಪೂರೈಸುತ್ತಿರುವ ಬಗ್ಗೆ ಪರಿಶೀಲಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾಡಳಿತ ಸೂಕ್ತ ದಾಖಲೆಗಳೊಂದಿಗೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿ ಉತ್ತರ ನೀಡಿದ್ದರು. ಜಿಲ್ಲಾಡಳಿತ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಅಬ್ಬಯ್ಯ ಪ್ರಸಾದ ಸಹ ಪತ್ರ ಬರೆದು ತಮ್ಮ ಒಪ್ಪಿಗೆ ಸಹ ಸೂಚಿಸಿದ್ದಾರೆ.
ಆರು ತಿಂಗಳ ಆನಂತರ ಜು. 15ರಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ಆಗಿರುವ ಬೆಳವಣಿಗೆ ಬಗ್ಗೆ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಶಾಸಕ ಅರವಿಂದ ಬೆಲ್ಲದ ಸಿದ್ಧರಾಗಿದ್ದು, ಈ ಕುರಿತು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಬೇಕೆನ್ನುವುದಕ್ಕೆ ನನ್ನ ಸಹಮತವೂ ಇದೆ. ಆಡಳಿತ ಸುಗಮವಾಗಲು, ನಗರ ಅಭಿವೃದ್ಧಿ ಹೊಂದಲು ಪ್ರತ್ಯೇಕ ಪಾಲಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದ್ದಾರೆ.ಹುಬ್ಬಳ್ಳಿಯಂತೆ ಧಾರವಾಡ ಸಹ ವೇಗವಾಗಿ ಬೆಳೆಯುತ್ತಿದೆ. ಇಷ್ಟು ದಿನ ದೂರವಾಗಿದ್ದ ಹೈಕೋರ್ಟ್ ಸಹ ಇದೀಗ ಸಮೀಪಿಸಿದೆ. ಅಲ್ಲಿಯ ವರೆಗೂ ಧಾರವಾಡ ಬೆಳೆದಿದೆ. ಧಾರವಾಡ ಸಮೀಪದ ಕೆಲವು ಗ್ರಾಮಗಳನ್ನು ಸೇರಿಸಿಕೊಂಡು ಪ್ರತ್ಯೇಕ ಪಾಲಿಕೆ ರಚಿಸಲು ಯಾವುದೇ ಸಮಸ್ಯೆ ಇಲ್ಲ. ಹು-ಧಾ ಮಹಾನಗರ ಪಾಲಿಕೆಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಲು ಆಗುತ್ತಿಲ್ಲ. ಧಾರವಾಡದ ಕಚೇರಿಗೆ ಮೇಯರ್, ಪಾಲಿಕೆ ಆಯುಕ್ತರು ವಾರಕ್ಕೆ ಎರಡು ದಿನ ಮಾತ್ರ ಬರುತ್ತಿದ್ದು, ಧಾರವಾಡ ಜನತೆಗೆ ಆಡಳಿತ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಆದ್ದರಿಂದ ಪ್ರತ್ಯೇಕ ಪಾಲಿಕೆ ರಚನೆಗೆ ಅರ್ಹ ₹6 ಕೋಟಿಗೂ ಅಧಿಕ ತೆರಿಗೆ ಸಂಗ್ರಹ, ವ್ಯಾಪ್ತಿ ಪ್ರದೇಶದಲ್ಲೂ ನಿಯಮಾನುಸಾರ ಅರ್ಹವಾಗಿದೆ. 3 ಲಕ್ಷ ಜನಸಂಖ್ಯೆಯೂ ಇದೆ. ಆದ್ದರಿಂದ ಪ್ರತ್ಯೇಕ ಪಾಲಿಕೆ ಮಾಡಲೇಬೇಕು ಎನ್ನುವುದು ಪ್ರತ್ಯೇಕ ಪಾಲಿಕೆಯ ಹೋರಾಟ ಸಮಿತಿ ಆಗ್ರಹ.
ಧಾರವಾಡ ಜನತೆಯ ಈ ಆಗ್ರಹವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಮಾಧಾನಕ್ಕೆ ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಸಾಲದು, ಕೂಡಲೇ ಆದೇಶ ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದು, ಮಳೆಗಾಲದ ಅಧಿವೇಶನದಲ್ಲಿ ಎಷ್ಟರ ಮಟ್ಟಿಗೆ ಧಾರವಾಡ ಜನತೆಯ ಆಗ್ರಹಕ್ಕೆ ರಾಜ್ಯ ಸರ್ಕಾರ ಸ್ಪಂದಿಸಲಿದೆ ಕಾದು ನೋಡಬೇಕಿದೆ. ಹೋರಾಟ ಅನಿವಾರ್ಯಸ್ಮಾರ್ಟ್ ಸಿಟಿ ಅನುದಾನ ಹಂಚಿಕೆಯಲ್ಲಿ ಧಾರವಾಡಕ್ಕೆ ಅನ್ಯಾಯವಾಗುತ್ತಿದೆ. ಅವಳಿ ನಗರಕ್ಕೆ ದೊರೆಯುವ ಅನುದಾನದಲ್ಲಿ ಹುಬ್ಬಳ್ಳಿಗೆ ಸಿಂಹಪಾಲು ಸಿಗುತ್ತಿದ್ದರೆ ಧಾರವಾಡದವರು ಅಲ್ಪ ಅನುದಾನಕ್ಕೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಧಾರವಾಡದ ಸರ್ವಾಂಗೀಣ ಅಭಿವೃದ್ಧಿಗೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅವಶ್ಯಕ. ಇಲ್ಲದೇ ಹೋದರೆ ಹೋರಾಟ ಅನಿವಾರ್ಯ ಎಂದು ಪ್ರತಿಪಾದಿಸಿದರು.
ಲಲಿತ ಭಂಡಾರಿ, ಪ್ರತ್ಯೇಕ ಪಾಲಿಕೆ ಹೋರಾಟಗಾರ