ಬಸವರಾಜರೆಡ್ಡಿ ಆತ್ಮಹತ್ಯೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ.ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇನೆ

ಕನಕಗಿರಿ: ಬಸವರಾಜರೆಡ್ಡಿ ಆತ್ಮಹತ್ಯೆಯಿಂದ ಕುಟುಂಬಸ್ಥರು ನೊಂದಿದ್ದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಪರಿಹಾರ ನೀಡುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.

ಅವರು ಶನಿವಾರ ಸಂತ್ರಸ್ತ ಕುಟುಂಬಸ್ಥರ ಮನೆಗೆ ತೆರಳಿ ಸಾಂತ್ವನ ಹೇಳಿ ಪತ್ರಕರ್ತರ ಜತೆ ಮಾತನಾಡಿದರು.

ನಿವೇಶನ ವಿಚಾರವಾಗಿ ಬಸವರಾಜರೆಡ್ಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ನೋವು ತಂದಿದೆ. ಈ ಘಟನೆಯಿಂದ ಕುಟುಂಬ ನೊಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಸಣ್ಣ ವಿಚಾರ ಸಾವಿನಲ್ಲಿ ಅಂತ್ಯವಾಗಲು ಹಲವು ಕಾರಣಗಳಿದ್ದು, ತನಿಖೆಯಾದ ನಂತರ ಎಲ್ಲವೂ ಹೊರ ಬೀಳಲಿದೆ. ತನಿಖಾಧಿಕಾರಿಗಳ ತನಿಖಾ ಮಾಹಿತಿಯೊಂದಿಗೆ ಇನ್ನೂ ಹೆಚ್ಚಿನ ವಿವರ ನೀಡುತ್ತೇನೆ. ಸಧ್ಯಕ್ಕೆ ಪ್ರಕರಣದ ಕುರಿತಂತೆ ಏನೂ ಹೇಳಲು ಬಯಸುವುದಿಲ್ಲ ಎಂದರು.

ಬಸವರಾಜರೆಡ್ಡಿ ಆತ್ಮಹತ್ಯೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ.ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇನೆ. ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ನನ್ನ ಜೀವನದಲ್ಲಿ ಸಾವಿನಲ್ಲಿ ರಾಜಕೀಯ ಎಂದೂ ಮಾಡಿಲ್ಲ. ನನ್ನೊಂದಿಗೆ ಕುಟುಂಬಸ್ಥರು ಹಂಚಿಕೊಂಡಿರುವ ಮನದಾಳ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಿಸುವುದಾಗಿ ತಿಳಿಸಿದರಲ್ಲದೇ ಮಾಜಿ ಶಾಸಕ ಬಸವರಾಜ ದಢೇಸ್ಗುರು ಏನೂ ಗೊತ್ತಿಲ್ಲ. ಏನೂ ಗೊತ್ತಿಲ್ಲದ ಕಾರಣಕ್ಕಾಗಿಯೇ ಜಿಲ್ಲಾಧ್ಯಕ್ಷ ಸ್ಥಾನದಿಂದ ಅವರನ್ನು ತೆಗೆಯಲಾಯಿತು ಎಂದು ಕುಟುಕಿದರು.

ಎಸ್ಪಿ ರಾಮ್ ಅರಸಿದ್ಧಿ, ಡಿವೈಎಸ್‌ಪಿ ಜೆ.ಎಸ್ ನ್ಯಾಮಗೌಡ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ರಾಜಸಾಬ್‌ ನಂದಾಪುರ, ರಾಕೇಶ, ಗಂಗಾಧರಸ್ವಾಮಿ, ವಿರೇಶ ಸಮಗಂಡಿ, ಬಸವಂತಗೌಡ, ಮಲಕನಗೌಡ, ಕೆ.ಎಚ್.ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ರವಿ ಪಾಟೀಲ್, ಸತ್ಯಪ್ಪ ಭೋವಿ, ಶರಣಪ್ಪ ಭತ್ತದ, ನಾಗಪ್ಪ ಹುಗ್ಗಿ ಸೇರಿದಂತೆ ಇತರರು ಇದ್ದರು.

ಸಚಿವ ತಂಗಡಗಿ ವಿರುದ್ಧ ಕುಟುಂಬಸ್ಥರ ಬೇಸರ

ತಮ್ಮದೆ ಪಕ್ಷದ ಕಾರ್ಯಕರ್ತನ ಸಹೋದರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯದಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಮೃತ ಬಸವರಾಜರೆಡ್ಡಿ ಪತ್ನಿ ರಾಧಿಕಾ ಸಚಿವರ ಮುಂದೆಯೇ ಬೇಸರಿಸಿ ಕಣ್ಣೀರಿಟ್ಟರು. ಪೊಲೀಸರು ಹಾಗೂ ಪಪಂ ಸಿಬ್ಬಂದಿ ಸ್ಪಂದಿಸಿದ್ದರೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸ್ಪಂದಿಸದೆ ಇರುವುದರಿಂದ ನನ್ನ ಗಂಡನ ಸಾವು ಸಂಭವಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಸಚಿವರಿಗೆ ರಾಧಿಕಾ ಮನವಿ ಮಾಡಿದಳು.

ಪೊಲೀಸ್ ಠಾಣೆ ಹಾಗೂ ಪಪಂನಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಹಲವು ದೂರುಗಳಿದ್ದು, ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರನ್ನು ಬೇರೆಡೆ ವರ್ಗಾಯಿಸಲು ಸೂಚಿಸಿದ್ದೇನೆ. ಪಪಂಗೆ ಹೊಸ ಮುಖ್ಯಾಧಿಕಾರಿ ನಿಯೋಜಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಸೂಚಿಸಿದ್ದೇನೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.