ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಧಿಕಾರಿ ನಡೆ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುವ ನಮ್ಮಂತಹವರಿಗೆ ನಿರ್ಬಂಧ ಹೇರುತ್ತಿರುವ ಸರ್ಕಾರ, ಮುಸ್ಲಿಮರ ಓಲೈಕೆಗಾಗಿ ದ್ವೇಷ ಭಾಷಣ ನಿಯಂತ್ರಣ ಮಸೂದೆ ಜಾರಿಗೆ ತರಲು ಮುಂದಾಗಿದೆ .
ಕನ್ನಡಪ್ರಭ ವಾರ್ತೆ ರಾಮನಗರ
ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಲ್ಲಿನ ಜಿಲ್ಲಾಧಿಕಾರಿಗಳು ಸಂವಿಧಾನ ನನಗೆ ಕೊಟ್ಟಿರುವ ಹಕ್ಕಿನ ಉಲ್ಲಂಘನೆ ಮಾಡಿದ್ದಾರೆ. ಇದರ ವಿರುದ್ಧ ಹೈಕೋರ್ಟಿನಲ್ಲಿ ದಾವೆ ಹೂಡಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬುಧವಾರ ಸಂಜೆ ಕರಾಳ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಮಂಡ್ಯಕ್ಕೆ ಹೊರಟಿದ್ದೆ. ಆದರೆ, ಜಿಲ್ಲಾಧಿಕಾರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿ ಬೆಳಗ್ಗೆ 6 ಗಂಟೆಗೆ ಆದೇಶ ಕಳುಹಿಸಿದ್ದಾರೆ. ಆ ಮೂಲಕ ಸಂವಿಧಾನವು ಕೊಟ್ಟಿರುವ ನನಗೆ ಕೊಟ್ಟಿರುವ ಹಕ್ಕಿನ ಉಲ್ಲಂಘನೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ನಾನು ಕೋಮು ಪ್ರಚೋದನೆ ಅಥವಾ ದ್ವೇಷ ಭಾಷಣ ಮಾಡಿದರೆ ಪ್ರಕರಣ ದಾಖಲಿಸಬೇಕಿತ್ತು. ಅದು ಬಿಟ್ಟು ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ. ನಿರ್ಬಂಧ ಆದೇಶದಲ್ಲಿ ನನ್ನ ವಿರುದ್ಧ 36 ಪ್ರಕರಣಗಳಿವೆ ಎಂದು ಹೇಳಲಾಗಿದೆ. ಸದ್ಯ ನನ್ನ ವಿರುದ್ದ 2 ಪ್ರಕರಣ ಮಾತ್ರ ಚಾಲ್ತಿಯಲ್ಲಿದ್ದು, ಉಳಿದವುಗಳಲ್ಲಿ ಖುಲಾಸೆಯಾಗಿವೆ ಎಂದು ಹೇಳಿದರು.ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಧಿಕಾರಿ ನಡೆ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುವ ನಮ್ಮಂತಹವರಿಗೆ ನಿರ್ಬಂಧ ಹೇರುತ್ತಿರುವ ಸರ್ಕಾರ, ಮುಸ್ಲಿಮರ ಓಲೈಕೆಗಾಗಿ ದ್ವೇಷ ಭಾಷಣ ನಿಯಂತ್ರಣ ಮಸೂದೆ ಜಾರಿಗೆ ತರಲು ಮುಂದಾಗಿದೆ ಎಂದು ಟೀಕಿಸಿದರು.
ಮಂಡ್ಯದಲ್ಲಿ ಗೂಂಡಾ, ಮಟ್ಕಾ, ಗಾಂಜಾ ಮಾರಾಟ ಮಾಡುತ್ತಿರುವವರನ್ನು ಬಿಟ್ಟು, ಹಿಂದೂಪರ ಶ್ರಮಿಸುವ ಕಾರ್ಯಕರ್ತರಿಗೆ ತಡೆವೊಡ್ಡಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. 2 ವರ್ಷದ ಹಿಂದೆ ಕೆರೆಗೋಡು ದೇವಾಲಯದ ಎದುರು 108 ಅಡಿ ಎತ್ತರದ ಭಗವಧ್ವಜ ಹಾರಿಸಲಾಗಿತ್ತು. ಇದು ಯಾವ ಜಾತಿ, ಸಂಘಟನೆಯದ್ದಲ್ಲ. ಆದರೆ, ಅದನ್ನು ಸಹ ವಿರೋಧಿಸುತ್ತಾರೆ. ಅಲ್ಲಿನ ಸ್ಥಳೀಯ ಶಾಸಕರ ಕುಮ್ಮಕ್ಕೇ ಇದಕ್ಕೆ ಕಾರಣ. ಧ್ವಜ ಹಾರಿಸಲು ಸ್ಥಳೀಯ ಗ್ರಾಮ ಪಂಚಾಯಿತಿಯ 20 ಸದಸ್ಯರು ಒಪ್ಪಿದ್ದರು ಎಂಬುದು ಮುಖ್ಯ ಎಂದರು. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲದೇಶಿಯರನ್ನು, ರೋಹಿಂಗ್ಯಗಳನ್ನು ಮೊದಲು ಬ್ಯಾನ್ ಮಾಡಲಿ, ತದ ನಂತರ ನಮ್ಮ ಬ್ಯಾನ್ ಬಗ್ಗೆ ಮಾತನಾಡಲಿ. ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿ ಹಾಗೂ ಕಾಂಗ್ರೆಸ್ಸಿಗರು ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ಸಿಗರ ಇಂತಹ ಧೋರಣೆಗಳಿಂದಾಗಿಯೇ ದೇಶ ಅಪಾಯದ ಸ್ಥಿತಿ ತಲುಪಿದೆ ಎಂದು ಹೇಳಿದರು.ಸಾರ್ವಜನಿಕವಾಗಿ ಶೂಟ್ ಮಾಡಿ:
ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ಪರಿಶಿಷ್ಟ ಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ತನ್ನ ಗರ್ಭಿಣಿ ಮಗಳನ್ನು ಮರ್ಯಾದೆಗೀಡು ಹತ್ಯೆ ಮಾಡಿದ ತಂದೆ ಹಾಗೂ ಇತರರನ್ನು ಸಾರ್ವಜನಿಕವಾಗಿ ಶೂಟ್ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಹೆತ್ತ ಮಕ್ಕಳನ್ನೇ ಕೊಲೆ ಮಾಡುವುದು ಅಮಾನವೀಯ. ದಲಿತರಿಗೂ ಪ್ರೀತಿ ಮಾಡುವ ಹಕ್ಕಿದೆ. ಮನುಷ್ಯರಾದ ಅವರಿಗೂ ಭಾವನೆಗಳಿವೆ. ಅದನ್ನು ಗೌರವಿಸಬೇಕು ಎಂದರು.
ಮರ್ಯಾದೆಗೀಡು ಹತ್ಯೆಯಾದ ವಿಷಯ ಗೊತ್ತಾದ ತಕ್ಷಣ ನಾನು, ಸಂತ್ರಸ್ತರನ್ನು ಭೇಟಿ ನೀಡಿ ಸಾಂತ್ವನ ಹೇಳಿ ಬಂದೆ. ಅವರದ್ದು ಬಸವ ದೀಕ್ಷೆ ಸ್ವೀಕರಿಸಿದ್ದ ಕುಟುಂಬ. ಹೀಗಿದ್ದರೂ ಜಾತಿ ಕಾರಣಕ್ಕೆ ನಡೆದ ಘಟನೆ ಖಂಡನೀಯ ಎಂದು ಹೇಳಿದರು.ಹಿಂದೂ ಧರ್ಮದಲ್ಲಿನ ರೋಗವಾದ ಅಸ್ಪೃಶ್ಯತೆ ಮತ್ತು ಜಾತೀಯತೆಯನ್ನು ನಾವು ಬಿಟ್ಟು ಒಂದಾಗಬೇಕು. ಆಗ ಬೇರೆಯವರು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪುತ್ತದೆ. ಇದರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ನಾಗಾರ್ಜುನ ಗೌಡ, ಸುಂದರೇಶ್, ಡಿ.ಎಂ.ರಾಜೇಶ್ , ಪರಮೇಶ್ ಗೌಡ ಇದ್ದರು.---
ರಾಮೋತ್ಸವ ಆಯೋಜಿಸಿದ ಶಾಸಕ ಇಕ್ಬಾಲ್ ಕಾರ್ಯ ಅಭಿನಂದನೀಯ: ಪ್ರಮೋದ್ ಮುತಾಲಿಕ್ರಾಮನಗರ: ಶ್ರೀ ರಾಮ ಪಾದಸ್ಪರ್ಶ ಮಾಡಿದ ರಾಮನಗರದಲ್ಲಿ ರಾಮೋತ್ಸವ ಆಯೋಜಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಅವರ ಕಾರ್ಯವನ್ನು ಅಭಿನಂದಿಸಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶ್ರೀರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯ ದೇವಾಲಯ ನಿರ್ಮಾಣದ ಭರವಸೆಯನ್ನು ನೀಡಿದ್ದರು. ಆ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯ ನಿರ್ಮಾಣದ ವಿಚಾರದಲ್ಲಿ ಶ್ರೀರಾಮ ಸೇನೆ ವತಿಯಿಂದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಮನವಿ ಸಲ್ಲಿಸಿ ಕಾಲಾವಧಿ ನೀಡಲಾಗುವುದು. ಹಾಗೊಮ್ಮೆ ದೇವಾಲಯ ನಿರ್ಮಾಣದ ವಿಚಾರದಲ್ಲಿ ಪ್ರಗತಿ ಕಾಣದಿದ್ದರೆ ರಾಜ್ಯಾದ್ಯಂತ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಸಂಘಟಿಸಿ ರಾಮನಗರ ಚಲೋ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಮದೇವರ ಬೆಟ್ಟದಲ್ಲಿ ಶ್ರೀರಾಮ ದೇವಾಲಯವನ್ನು ನಿರ್ಮಿಸಿ ದಕ್ಷಿಣ ಅಯೋಧ್ಯೆ ಮಾಡುವುದಾಗಿ ಘೋಷಣೆ ಮಾಡಿತ್ತು. ನಂತರ ಚುನಾವಣೆ ವೇಳೆ ಕಾಂಗ್ರೆಸ್ ಸಹ ದೇವಾಲಯ ನಿರ್ಮಿಸುವುದಾಗಿ ಹೇಳಿ ಹಿಂದೂಗಳನ್ನು ಭಾವನಾತ್ಮಕಗೊಳಿಸಿ ಮತಗಳ ಕ್ರೂಢಿಕರಿಸಿತ್ತು. ಆದರೆ, ರಾಮೋತ್ಸವದ ವೇಳೆ ಶಾಸಕ ಇಕ್ಬಾಲ್ ಹುಸೇನ್ ದೇವಾಲಯ ನಿರ್ಮಾಣ ವಿಚಾರವನ್ನು ಪ್ರಸ್ತಾಪ ಮಾಡಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.