ಸಾರಾಂಶ
ಪ್ರವಾಸೋದ್ಯಮ ಮಂತ್ರಿಯಾಗಿದ್ದಾಗ ಸೈಂಟ್ ಮೇರೀಸ್ ಅಭಿವೃದ್ಧಿ ಮಾಡಿ, ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ ಮಾಡುವ ಕನಸಿತ್ತು. ಆದರೆ ಸಾಧ್ಯವಾಗಲಿಲ್ಲ. ಶ್ರೀಕೃಷ್ಣನ ಆಶಿರ್ವಾದದಿಂದ ಮತ್ತೆ ಅಧಿಕಾರ ಸಿಕ್ಕರೆ ಆ ಎಲ್ಲ ಕೆಲಸ ಮಾಡುತ್ತೇವೆ ಎಂದು ಜನಾರ್ದನ ರೆಡ್ಡಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ತಾನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಪಡೆದರೆ ಸೈಂಟ್ ಮೇರೀಸ್ ದ್ವೀಪವನ್ನು ಶ್ರೀ ಕೃಷ್ಣ ದ್ವೀಪವನ್ನಾಗಿ ಮಾಡುತ್ತೇನೆ, ಅಲ್ಲಿ ಶ್ರೀಕೃಷ್ಣನ ಭವ್ಯ ಮೂರ್ತಿ, ಮಂದಿರ ನಿರ್ಮಿಸುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.ಅವರು ಗುರುವಾರ ಪುತ್ತಿಗೆ ಮಠದ ಸಂಧ್ಯಾ ದರ್ಬಾರ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಾನು ಹಿಂದೆ ಪ್ರವಾಸೋದ್ಯಮ ಮಂತ್ರಿಯಾಗಿದ್ದಾಗ ಸೈಂಟ್ ಮೇರೀಸ್ ಅಭಿವೃದ್ಧಿ ಮಾಡಿ, ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ ಮಾಡುವ ಕನಸಿತ್ತು. ಆದರೆ ನನಗೆ ಕೆಟ್ಟ ಘಳಿಗೆ ಆರಂಭವಾದ್ದರಿಂದ ಅದು ಸಾಧ್ಯವಾಗಿಲಿಲ್ಲ ಎಂದು ವಿಷಾದಿಸಿದರು. ಶ್ರೀಕೃಷ್ಣನ ಆಶಿರ್ವಾದದಿಂದ ಮತ್ತೆ ಅಧಿಕಾರ ಸಿಕ್ಕರೆ ಆ ಎಲ್ಲ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ತಮ್ಮ ಭಾಷಣದ ನಡುವೆ ಒಂದು ಹಂತದಲ್ಲಿ ಭಾವುಕರಾದ ರೆಡ್ಡಿ, ನಾನು 13 ವರ್ಷದ ವನವಾಸ ಮುಗಿಸಿ ಮತ್ತೆ ಶಾಸಕನಾಗಿದ್ದೇನೆ, ಉಡುಪಿಯ ಪುತ್ತಿಗೆ, ಪೇಜಾವರ ಸ್ವಾಮೀಜಿ ಅನುಗ್ರಹದಿಂದ ಸಮಸ್ಯೆಗಳು ಬಗೆಹರಿದಿವೆ. ನಾನು ಬಂಧನದಿಂದ ಬಿಡುಗಡೆಯಾದ 48 ಗಂಟೆಯಲ್ಲಿ ಪೇಜಾವರ ಮಠದ ಶ್ರೀಗಳು ಮನೆಗೆ ಬಂದು ಆಶೀರ್ವದಿಸಿದರು, ಹಿಂದಿನ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಆಶೀರ್ವಾದವನ್ನು ಸದಾ ಸ್ಮರಣೆ ಮಾಡುತ್ತೇನೆ ಎಂದರು.ಎಲ್ಲವೂ ಸರಿಯಾಗಿ ನಡೆಯುತ್ತಿದೆ., ಮುಂದೆ ವಿಶ್ವ ಶೀಘ್ರವೇ ಹಿಂದುತ್ವ ಮಯ, ಕೃಷ್ಣ ಮಯವಾಗುತ್ತದೆ ಎಂದು ರೆಡ್ಡಿ ಹೇಳಿದರು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯವಹಿಸಿದ್ದರು.