ಅಪ್ಪಮಕ್ಕಳ ರಾಜ್ಯಭಾರ ಬಗ್ಗೆ ಚರ್ಚೆ ಮಾಡುವುದಿಲ್ಲ: ಸಿ.ಟಿ.ರವಿ

| Published : Nov 19 2023, 01:30 AM IST

ಅಪ್ಪಮಕ್ಕಳ ರಾಜ್ಯಭಾರ ಬಗ್ಗೆ ಚರ್ಚೆ ಮಾಡುವುದಿಲ್ಲ: ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಮೋದಿಜಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಂಸದೀಯ ಸಮಿತಿಯನ್ನೂಳಗೊಂಡ ವರಿಷ್ಠರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂತಹ ಆರೋಪಗಳು ಕೇಳಿ ಬಂದಿರುವುದು ನಿಜ, ಆದರೆ ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸದೃಢವಾಗಿ ಬೆಳೆಯಲಿ

ಕನ್ನಡಪ್ರಭ ವಾರ್ತೆ ಉಡುಪಿ

ಕಾಂಗ್ರೆಸನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಅಪ್ಪ ಮಕ್ಕಳ ರಾಜ್ಯಭಾರ ಆರೋಪದ ಬಗ್ಗೆ ನಾನು ಈ ಸಂದರ್ಭ ಚರ್ಚೆ ಮಾಡುವುದಿಲ್ಲ. ಚರ್ಚಿಸಲು ಹೊರಟರೆ ಬೇರೆಬೇರೆ ಅರ್ಥಗಳು ಹುಟ್ಟಿಕೊಳ್ಳುತ್ತದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಜಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಂಸದೀಯ ಸಮಿತಿಯನ್ನೂಳಗೊಂಡ ವರಿಷ್ಠರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂತಹ ಆರೋಪಗಳು ಕೇಳಿ ಬಂದಿರುವುದು ನಿಜ, ಆದರೆ ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸದೃಢವಾಗಿ ಬೆಳೆಯಲಿ ಎಂದರು.

* ಅಶೋಕ್ ಉತ್ತರಿಸುತ್ತಾರೆ

ಬಿಜೆಪಿಯಿಂದ ಉತ್ತರ ಕರ್ನಾಟಕ ನಿರ್ಲಕ್ಷ್ಯ ಎಂದು ಬಿಜೆಪಿ ನಾಯಕರಾದ ಯತ್ನಾಳ್, ಬೆಲ್ಲದ್ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ನಾಯಕರ ಆಯ್ಕೆಯಲ್ಲಿ ಯಾವ ಭಾಗ ಎಂದು ಬರುವುದಿಲ್ಲ, ನಿರ್ಮಲಾ ಸೀತಾರಾಮನ್, ದುಷ್ಯಂತ್ ಜೊತೆ ನಮ್ಮೆಲ್ಲ ನಾಯಕರ, ಶಾಸಕರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗಿದೆ. ಆರ್.ಅಶೋಕ್ ಅವರು ಸಮರ್ಥ ವಿಪಕ್ಷ ನಾಯಕನಾಗಿ ಎಲ್ಲ ಟೀಕೆಗೆ ಉತ್ತರಿಸುತ್ತಾರೆ ಎಂದರು.

* ನಾನು ಆಕಾಂಕ್ಷಿಯಾಗಿಲ್ಲ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಿ.ಟಿ.ರವಿ ಅವರ ಹೆಸರು ಕೇಳಿ ಬರುತ್ತಿರುವುದಕ್ಕೆ ಉತ್ತರಿಸಿದ ಅವರು, ನಾನು 1994ರ ನಂತರ ಯಾವುದೇ ಸ್ಥಾನ ಕೇಳಿ ಪಡೆದಿಲ್ಲ. ನಾನು ಯಾವುದೇ ಸ್ಥಾನಕ್ಕೆ ಆಕಾಂಕ್ಷಿಯಲ್ಲ. ಪಕ್ಷಕ್ಕಾಗಿ, ಪಕ್ಷದ ಗೆಲುವಿಗಾಗಿ ಶಕ್ತಿಮೀರಿ ಕೆಲಸ ಮಾಡುತ್ತೇನೆ ಎಂದರು.

* ಅಸಮಾಧಾನವೂ ಇಲ್ಲ

ರಾಜ್ಯ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನು ಇಲ್ಲ ಎಂದು ಮೂರು ತಿಂಗಳ ಹಿಂದೆ ಸ್ಪಷ್ಟಪಡಿಸಿದ್ದೆ. ಅಂದಮೇಲೆ ಬೇಸರದ ಪ್ರಶ್ನೆ ಬರುವುದಿಲ್ಲ. ಜವಾಬ್ದಾರಿ ಯಾವಾಗ ಯಾರಿಗೆ ಕೊಡಬೇಕು ಎಂದು ವರಿಷ್ಠರು ತೀರ್ಮಾನಿಸುತ್ತಾರೆ. ನಾವು ತಂಡವಾಗಿ ಕೆಲಸ ಮಾಡುತ್ತೇವೆ, ಚರ್ಚೆ ಮಾಡಲು ಬಯಸುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

* ಶ್ಯಾಡೋ ಸಿಎಂ ಗುಟ್ಟಲ್ಲ

ರಾಜ್ಯದಲ್ಲಿ ಯತೀಂದ್ರ ಶಾಡೋ ಸಿಎಂ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ವೈಎಸ್‌ಟಿ ಟ್ಯಾಕ್ಸ್ ಜಾರಿಯಲ್ಲಿದೆ ಎಂಬ ಆರೋಪ ಕೇಳಿ ಬಂದಿತ್ತು, ಈಗ ಈ ಬಗ್ಗೆ ಆಡಿಯೋ ವಿಡಿಯೋ ರಿಲೀಸ್ ಆಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ತಮ್ಮ ಮಗ ಯತೀಂದ್ರನ ಮಾತಿಗೆ ಹೆಚ್ಚು ಬೆಲೆ, ಮನ್ನಣೆ ಕೊಡುತ್ತಿದ್ದಾರೆ ಎಂದು ಹೇಳಿದರು.

ಅಪರಾಧಿ ತಪ್ಪಿಸಿಕೊಳ್ಳುವಂತಾಗಬಾರದು

ಉಡುಪಿ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಿ.ಟಿ.ರವಿ, ಉಡುಪಿಯಂತ ಸಾತ್ವಿಕರ, ಸುಸಂಸ್ಕೃತ ನಾಗರಿಕರ ಜಿಲ್ಲೆಯಲ್ಲಿ ಇದಾಗಬಾರದಿತ್ತು ಎಂದು ಸಿ.ಟಿ. ರವಿ ವಿಷಾದಿಸಿದರು.

ತ್ವರಿತ ಗತಿಯಲ್ಲಿ ಈ ಘಟನೆಯ ಆರೋಪಿಯನ್ನು ಪತ್ತೆ ಹಚ್ಚಿರುವುದು ಪೊಲೀಸರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲವಾದರೆ ನೂರಾರು ಊಹಾಪೋಹಾ ಹಬ್ಬಿ ಸಮಸ್ಯೆ ಎದುರಿಸಬೇಕಾಗಿತ್ತು. ಮುಂದೆ ಸಮರ್ಥವಾಗಿ ಸಾಕ್ಷಾಧಾರ ಸಂಗ್ರಹಿಸಿ ಆರೋಪಿ ನ್ಯಾಯಾಲಯದಲ್ಲಿ ತಪ್ಪಿಸಿಕೊಳ್ಳದೇ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಸ್ವೀಕರ್ ಅನ್ನುವುದು ಮೌಲ್ವಿಯ ಹುದ್ದೆ ಅಲ್ಲ: ಸಿ.ಟಿ.ರವಿಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ, ಬಿಜೆಪಿ ನಾಯಕರು ಸ್ವೀಕರ್ ಯು.ಟಿ.ಖಾದರ್ ಅವರಿಗೆ ಎದ್ದು ನಿಂತು ನಮಸ್ಕಾರ ಎನ್ನುವಂತಾಗಿದೆ ಎಂಬ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ.ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಬಗ್ಗೆ ಅರ್ಥ ಆಗದ ಜಮೀರ್‌ನಂತಹವರು ಸಚಿವರಾದರೆ ಹೀಗೆ ಆಗೋದು ಎಂದವರು ತಿರುಗೇಟು ನೀಡಿದ್ದಾರೆ.ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವೀಕರ್ ಸ್ಥಾನ ಅನ್ನುವುದು ಮಸೀದಿಯ ಮೌಲ್ವಿಯ ಹುದ್ದೆ ಅಲ್ಲ, ನಾವು ಸ್ವೀಕರ್‌ಗೆ ಗೌರವ ಕೊಡುತ್ತೇವೆ, ಹೊರತು ಮೌಲ್ವಿಗೆ ಜೀ ಹುಜೂರ್ ಎನ್ನುತ್ತಿಲ್ಲ ಎಂದರು.

ಸ್ಪೀಕರ್ ಸ್ಥಾನ ಸಾಂವಿಧಾನಿಕ ಹುದ್ದೆಯೇ ಹೊರತು ಅದು ಮಸೀದಿಯ ಮೌಲ್ವಿಗೆ ಹುದ್ದೆಯಲ್ಲ, ಆ ಹುದ್ದೆಗೆ ಸಿಗುವ ಗೌರವ ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ, ಖಾದರ್ ಅವರ ಘನತೆಯನ್ನು ಹಾಳು ಮಾಡಬೇಡಿ ಎಂದು ಸಲಹೆ ಮಾಡಿದರು.