ಬಿಎಸ್‌ವೈ ಕುಟುಂಬ ಹೊರಬರೋವರೆಗೂ ಬಿಜೆಪಿ ಸೇರಲ್ಲ

| Published : Apr 08 2025, 12:30 AM IST

ಸಾರಾಂಶ

ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹೊರ ಬರುವವರೆಗೂ ನಾವು ಬಿಜೆಪಿಗೆ ಬರಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಬರಬೇಕಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹೊರ ಬರುವವರೆಗೂ ನಾವು ಬಿಜೆಪಿಗೆ ಬರಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಬರಬೇಕಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಚನ್ನಮ್ಮನ ಸಮಾಧಿಗೆ ಹೂವು ಮಾಲೆ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ದುಬೈಗೆ ಯಾಕೆ ಹೋಗುತ್ತಾರೆ ಅಪ್ಪಾ ಮಕ್ಕಳು? ವಿದೇಶದಲ್ಲಿ ಆಸ್ತಿ ಮಾಡಿದವರಿಗೆ ನೈತಿಕತೆ ಇಲ್ಲ. ವಿದೇಶದಲ್ಲಿ ಆಸ್ತಿ ಇಲ್ಲ ಅಂತಾ ಡಿಕ್ಲೇರ್ ಮಾಡಲಿ. ಯಡಿಯೂರು ಸಿದ್ದಲಿಂಗೇಶ್ಬರ ಬಳಿ ಹೋಗಿ ಆಣೆ ಮಾಡಲಿ ಎಂದು ಅವರು ಸವಾಲು ಹಾಕಿದರು.‌

ಚನ್ನಮ್ಮನ ನಾಡು ಬೆಳಗಾವಿ. ಇಲ್ಲಿಂದಲೇ ಕ್ರಾಂತಿ ಪ್ರಾರಂಭವಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರು ನಮಗೆ ಆದರ್ಶ. ಅಕ್ಬರ್‌ ನಮಗೆ ಆದರ್ಶ ಅಲ್ಲಾ. ಹೈಕಮಾಂಡ್ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ತಲೆ ಮೇಲೆ ಕೂಡಿಸಿಕೊಂಡಿರಬಹುದು. ಚುನಾವಣೆ ಬರಲಿ ಆಗ ಮಾತನಾಡುತ್ತೇನೆ ಎಂದು ಗುಡುಗಿದರು.

ಕಾಶಪ್ಪನವರ ವಿರುದ್ಧ ಗುಡುಗು:

ಮಂತ್ರಿ ಮಾಡಿ ಎಂದು ಕೂಡಲಸಂಗಮ ಸ್ವಾಮೀಜಿ ಅವರನ್ನು ಯಾರು, ಯಾರು ದಿಲ್ಲಿಗೆ ಕರೆದುಕೊಂಡು ಹೋಗಿದ್ದರು ಗೊತ್ತಿದೆ. ನಾನು ಒಮ್ಮೆಯೂ ಮಂತ್ರಿ ಮಾಡಿ ಅಂತಾ ಕರೆದುಕೊಂಡು ಹೋಗಿಲ್ಲ. ನನ್ನ ರಾಜಕೀಯ ಭವಿಷ್ಯದಲ್ಲಿ ಕೂಡಲಸಂಗಮ ಸ್ವಾಮೀಜಿ ಉಪಯೋಗ ಮಾಡಿಕೊಂಡಿಲ್ಲ. ನಮ್ಮದು ಕೂಡಲ ಸಂಗಮ ಸ್ವಾಮೀಜಿದು ಮೀಸಲಾತಿಗಾಗಿ ಸಂಬಂಧ. ಲಕ್ಷ್ಮೀ ಹೆಬ್ಬಾಳ್ಕರ್, ಕುಲಕರ್ಣಿ ಕೂಡ ಉಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಕೂಡಲಸಂಗಮ ಸ್ವಾಮೀಜಿ ಬದಲಾವಣೆ ಮಾಡುತ್ತೇನೆ ಎಂಬ ಕಾಶಪ್ಪನವರ ಹೇಳಿಕೆಗೆ ಗರಂ ಆದ ಯತ್ನಾಳ, ವಿಜಯೇಂದ್ರ ಹೇಳಿ ಕಳಿಸಿದ್ದಾನಾ? ಹಂದಿಗಳ ಬಗ್ಗೆ ಯಾಕೆ ಕೇಳ್ತಿರಿ? ಹಂದಿಗಳ ಪ್ರಶ್ನೆಗೆ ಉತ್ತರ ಹೇಳಲ್ಲಾ. ಎಲ್ಲಾ ಸಮುದಾಯದ ಪರವಾಗಿ ನಾನು ಕೆಲಸ ಮಾಡಿದ್ದೇನೆ. ಹಾಲುಮತ, ತಳವಾರ, ಅಂಬಿಗರ ಪರ ಮಾತಾಡಿದ್ದೇನೆ. ಹಿಂದೂಪರ ದನಿ ಆಗುವಂತೆ ಕೂಗಿದೆ. ಈಗಾಗಲೇ ಬಹಳ ಜನ ಆರ್ಥಿಕವಾಗಿ ಬೆಂಬಲ ಕೊಡುತ್ತೇನೆ ಎನ್ನುತ್ತಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಎಲ್ಲಾ ಕಡೆಯಿಂದ ಬೆಂಬಲ ಬರುತ್ತಿದೆ. ಪಕ್ಷ ಕಟ್ಟಿದರೆ ಕಾಂಗ್ರೆಸ್‌ಗೆ ಅನುಕೂಲ ಆಗುತ್ತದೆ. ಹೀಗಾಗಿ ಯೋಚನೆ ಮಾಡುತ್ತಿದ್ದೇವೆ. ನಾಳೆ ಪಕ್ಷ ಕಟ್ಟಿದ ಮೇಲೆ ಕಾಂಗ್ರೆಸ್ ಕಡೆ ಹಣ ಪಡೆದು ಕಟ್ಟಿದ್ದಾನೆ ಅಂತಾರೆ. ಬಿಜೆಪಿ ಕಟ್ಟಿದವರು ನಾವೇ ಇದ್ದೇವೆ‌. ಚಲುವಾದಿ ನಾರಾಯಣಸ್ವಾಮಿ ಕಟ್ಟಿದ್ದಾರಾ? ವಿಜಯೇಂದ್ರನ ವೃತವನ್ನು ಪಿ.ರಾಜೀವ್ ಓದುತ್ತಿದ್ದಾನೆ. ಅವನ ಭಾಷಣ ನಾವು ಕೇಳಬೇಕು. ಎಂತಾ ದುರ್ದೈವ. ವಿಜಯೇಂದ್ರ ಸುತ್ತಮುತ್ತ ಎಂತ ನಾಯಕರು ಇದ್ದಾರೆ. ಪ್ರೀತಮ್ ಗೌಡ ಯಾವಾಗ ಕಾಂಗ್ರೆಸ್ ಹೋಗ್ತಾನೆ ಗೊತ್ತಿಲ್ಲ. ಹೈಕಮಾಂಡ್‌ಗೆ ತಲೆ ಬಾಗಿದ್ದೇವೆ ಅನ್ನೋ ಡೈಲಾಗ್ ಕಾಮನ್ ಇದೆ. ಟಿಕೆಟ್ ಸಿಗದಿದ್ರೆ ಬೇರೆ ಪಕ್ಷಕ್ಕೆ ಹೋಗ್ತಾರೆ‌ ಎಂದು ಕಿಡಿಕಾರಿದರು.

ಅವರ ಮೆದುಳು ಯಾರ ಬಳಿ ಇದೆಯೋ ಗೊತ್ತಿಲ್ಲ:

ಯತ್ನಾಳ್ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಮೆದುಳು ಯಾರ ಬಳಿ ಇದೆಯೋ ಗೊತ್ತಿಲ್ಲ. ಹೃದಯ ಯಾರ ಬಳಿ ಇದೆಯೋ ಗೊತ್ತಿಲ್ಲ. ಇನ್ನೇನಾದ್ರೂ ಬಾಯಿ ಬಿಟ್ರೇ ಇನ್ನೂ ಬಹಳ ಮುಂದಕ್ಕೆ ಹೋಗುತ್ತೇನೆ. ತಮ್ಮ ಇತಿಮಿತಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಇರಲಿ. ಗೋಕಾಕ್‌ದಲ್ಲಿ ಮೀಸಲಾತಿ ಕೊಡದಿದ್ರೆ ರಾಜೀನಾಮೆ ಕೊಡುತ್ತೇನೆ ಅಂದರು. ಬೆಳಗಾವಿಯ ಹೋರಾಟದಲ್ಲಿ ಲಿಂಗಾಯತರನ್ನು ಹೊಡೆಸಿದರು. ಲಾಠಿ ಚಾರ್ಜ್ ಈಗ ನ್ಯಾಯಾಂಗ ತನಿಖೆಯಾಗುತ್ತಿದೆ. ಎಡಿಜಿಪಿ ಹಿತೇಂದ್ರಗೆ ಮನುಷ್ಯತ್ವ ಇಲ್ಲ ಎಂದು ಹೇಳಿದರು.

ಕೂಡಲಸಂಗಮ ಸ್ವಾಮೀಜಿ ಯತ್ನಾಳ ಪರ ನಿಂತಿದ್ದು ನೋವಾಗಿದೆ ಎಂಬ ಹೆಬ್ಬಾಳ್ಕರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ನೋವಿಗೆ ನಾನೇನು ಮಾಡಲಿ‌? ಅಮೃತಾಂಜನ್ ಕೊಡ್ಲಾ, ಜಂಡುಬಾಂಬ್‌ ಕೊಡ್ಲಾ? ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಸ್ವಾಮೀಜಿ ನಿಂತಿಲ್ವಾ? ಅವರು ಸಮಾಜಕ್ಕೆ ಮೋಸ ಮಾಡಿದರೂ ಈಗ ಬ್ಯಾನಿ ಆಗುತ್ತಿದೆ. ನಾವು 2ಡಿ ಆದರೂ ಕೊಟ್ಟಿದ್ದೇವೆ ನೀವೆನು ಕೊಟ್ಟಿದೀರಿ? ನಮಗೆ ಸಂವಿಧಾನ ವಿರೋಧಿ ಅಂತಾರೆ ಮುಸ್ಲಿಮರಿಗೆ ಹೇಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದಿರಿ? ಅಲ್ಪಸಂಖ್ಯಾತರು ಅಂದ್ರೇ ಬರೀ ಮುಸ್ಲಿಮರಿದ್ದಾರಾ? ನಾನು ಜಮೀರ್ ಕಚೇರಿಗೆ ಹೋಗಿದ್ದಕ್ಕೆ ದೊಡ್ಡದು ಮಾಡಿದ್ರು. ಈಗ ಮಾಡ್ತಿರೋ ಜನಾಕ್ರೋಶ ಕಾರ್ಯಕ್ರಮ ಡಿಕೆಶಿ ಮನೆಯಲ್ಲಿ ಫಿಕ್ಸ್ ಆಗಿದೆ. ರಾತ್ರಿ ಡಿಕೆಶಿ ಅವರ ಮನೆಯಲ್ಲಿ ಹೋಗಿ ಅವರ ಪ್ರಕಾರ ನಕಾಶೆ ಒಳಗೆ ಟೂರ್ ಫಿಕ್ಸ್ ಮಾಡಿಕೊಂಡು ಬರ್ತಾರೆ. ಇವರು ನಾವು ಬಹಳ ಸಾಚಾ ಇದ್ದೇವೆ ಅಂತಾ ಹೇಳ್ತಾರೆ ಎಂದು ಹೇಳಿದರು.

ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರು ಲಿಂಗಾಯತ ಪಂಚಮಸಾಲಿ ಸಮಾಜದ ಬಹು ದೊಡ್ಡ ಶಕ್ತಿ. ಆ ಶಕ್ತಿ ಹತ್ತಿಕ್ಕಲು ಯಾರಿಂದಲೂ ಆಗದು. ಕೇಂದ್ರ ಬಿಜೆಪಿ ನಾಯಕರು ಕೂಡಲೇ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಮೇ 11ಕ್ಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟಕ್ಕೆ ಸಮಾಜದ ಎಲ್ಲ ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಮುಖಂಡರಾದ ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ಶಂಕರ ಮಾಡಲಗಿ, ಎಂ.ವೈ.ಸೋಮಣ್ಣವರ, ಶಿವಾನಂದ ಬೆಳಗಾವಿ, ರಾಜು ನರಸನ್ಮವರ, ಗಂಗಪ್ಪ ಗುಗ್ಗರಿ, ಬಾಳನಗೌಡ ಪಾಟೀಲ, ಅನೇಕರು ಇದ್ದರು.