ಮಗಳ ಹುಚ್ಚು ಬಿಡುವ ವರೆಗೂ ಆಕೆಯನ್ನು ಬಿಡುವುದಿಲ್ಲ!

| Published : Sep 24 2025, 01:00 AM IST

ಮಗಳ ಹುಚ್ಚು ಬಿಡುವ ವರೆಗೂ ಆಕೆಯನ್ನು ಬಿಡುವುದಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಮೋಸ ಮಾಡಿ ಮಗಳನ್ನು ಕರೆದೊಯ್ದು ಮದುವೆ ಮಾಡಿಕೊಳ್ಳಲಾಗಿದೆ ಎಂದು ಖ್ವಾಜಾ ಮೇಲೆ ಆಕೆಯ ಪಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ಖ್ವಾಜಾ ಪತ್ನಿ ಗಾಯತ್ರಿಯನ್ನು ಕರೆಯಿಸಿ ಹೇಳಿಕೆ ದಾಖಲಿಸಿಕೊಂಡು ಹುಬ್ಬಳ್ಳಿಯ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ.

ಧಾರವಾಡ:

ಉತ್ತರ ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್‌ ಖ್ವಾಜಾ ಶಿರಹಟ್ಟಿ ಉರ್ಫ್‌ ಮುಕಳೆಪ್ಪನ ಮದುವೆ ಗಲಾಟೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ದಿನಕ್ಕೊಂದು ಬೆಳವಣಿಗೆ ಅಗುತ್ತಿದ್ದು, ಮಂಗಳವಾರ ಬೆಳಗ್ಗೆ ಇಲ್ಲಿಯ ಸಾಂತ್ವನ ಕೇಂದ್ರದಲ್ಲಿ ಇರುವ ಖ್ವಾಜಾನ ಪತ್ನಿ ಗಾಯತ್ರಿ ಜಾಲಿಹಾಳ ಅವಳನ್ನು ಆಕೆಯ ಪೋಷಕರು ಭೇಟಿಯಾಗಿ ಮಾತುಕತೆ ನಡೆಸಿದರು.

ನಮಗೆ ಮೋಸ ಮಾಡಿ ಮಗಳನ್ನು ಕರೆದೊಯ್ದು ಮದುವೆ ಮಾಡಿಕೊಳ್ಳಲಾಗಿದೆ ಎಂದು ಖ್ವಾಜಾ ಮೇಲೆ ಆಕೆಯ ಪಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ಖ್ವಾಜಾ ಪತ್ನಿ ಗಾಯತ್ರಿಯನ್ನು ಕರೆಯಿಸಿ ಹೇಳಿಕೆ ದಾಖಲಿಸಿಕೊಂಡು ಹುಬ್ಬಳ್ಳಿಯ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ.

ಹೇಳಿಕೆ ದಾಖಲೆ:

ಮಧ್ಯಾಹ್ನ 3ರ ನಂತರ ಸಾಂತ್ವನ ಕೇಂದ್ರದಿಂದ ಉಪನಗರ ಪೊಲೀಸರು ಗಾಯತ್ರಿಯನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ಈ ವೇಳೆ "ನನ್ನ ಗಂಡ ಯಾರಿಗೂ ಜೀವ ಬೆದರಿಕೆ ಹಾಕಿ ನನ್ನ ಮದುವೆಯಾಗಿಲ್ಲ. ನಾನು ಸ್ವ-ಇಚ್ಛೆಯಿಂದ ಖ್ವಾಜಾನನ್ನು ಮದುವೆಯಾಗಿದ್ದೇನೆ. ನನ್ನ ಪತಿ ಮೇಲೆ ಸುಳ್ಳು ದೂರು ದಾಖಲಾಗಿದೆ. ನಮ್ಮಿಬ್ಬರಿಗೂ ಜೀವ ಬೆದರಿಕೆ ಇದ್ದು ರಕ್ಷಣೆ ಕೊಡಿ " ಎಂದು ನ್ಯಾಯಾಧೀಶರ ಎದುರು ಗಾಯತ್ರಿ ಹೇಳಿಕೆ ದಾಖಲಿಸಿದರು. ನ್ಯಾಯಾಧೀಶರ ಆದೇಶದಂತೆ ಆಕೆಯನ್ನು ಮರಳಿ ಹುಬ್ಬಳ್ಳಿ ಸಾಂತ್ವನ ಕೇಂದ್ರಕ್ಕೆ ಪೊಲೀಸರು ಕರೆದೊಯ್ದರು.

ಮಗಳಿಗೆ ಹುಚ್ಚು ಹಿಡಿದಿದೆ..

ಈ ಮಧ್ಯೆ ಸುದ್ದಿಗಾರರ ಜತೆ ಮಾತನಾಡಿದ ಗಾಯತ್ರಿ ತಾಯಿ ಶಿವಕ್ಕ ಜಾಲಿಹಾಳ, "ನನ್ನ ಮಗಳು ಮೊದಲಿನಂತಿಲ್ಲ. ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾಳೆ. ಮನೆಗೆ ಬರಲು ಒಪ್ಪುತ್ತಿಲ್ಲ. ಮುಕುಳೆಪ್ಪ ಆಕೆಯ ತಲೆ ಕೆಡಿಸಿದ್ದು ಹುಚ್ಚಿಯಂತೆ ಆಡುತ್ತಿದ್ದಾಳೆ. ಮುಖ ಕೊಟ್ಟು ಮಾತನಾಡುತ್ತಿಲ್ಲ. ಆಕೆಯ ಹುಚ್ಚು ಬಿಡುವ ವರೆಗೂ ಆಕೆಯನ್ನು ನಾವು ಮಾತ್ರ ಬಿಡುವುದಿಲ್ಲ " ಎಂದರು. ಎಲ್ಲಿದ್ದಾನೆ ಮುಕಳೆಪ್ಪ?

ಮುಕಳೆಪ್ಪನ ಮದುವೆ ಪ್ರಸಂಗ ಕಳೆದ ವಾರದಿಂದ ಎಲ್ಲೆಡೆ ಚರ್ಚೆಯಾಗುತ್ತಿದೆ. ಇಡೀ ಪ್ರಕರಣದಲ್ಲಿ ಆತನ ಪತ್ನಿ ಗಾಯತ್ರಿ ಹಾಗೂ ಆಕೆಯ ಪಾಲಕರ ಮಧ್ಯೆ ಮಾತಿನ ಘರ್ಷಣೆಗಳು ನಡೆಯುತ್ತಿವೆ. ಎಲ್ಲಿಯೂ ಖ್ವಾಜಾ ಹಾಗೂ ಆತನ ಕುಟುಂಬ ಕಾಣಿಸಿಕೊಂಡಿಲ್ಲ. ಮೇಲಾಗಿ ಆತ ತನ್ನ ಹೇಳಿಕೆಯನ್ನು ದಾಖಲಿಸಿಲ್ಲ. ಈ ಬಗ್ಗೆ ಮಾಧ್ಯಮಗಳು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಜತೆಗೆ ಆತನ ಕುಟುಂಬಸ್ಥರು ಸಹ ಸಂಪರ್ಕಕ್ಕೆ ಸಿಗದೇ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.

ಧಾರವಾಡದ ಹೆಬ್ಬಳ್ಳಿ ಅಗಸಿಯ ನಿವಾಸಿಯಾಗಿರುವ ಖ್ವಾಜಾ, ತನ್ನ ಮೇಲಿರುವ ಆರೋಪಗಳ ಬಗ್ಗೆ ಎಲ್ಲಿಯೂ ಬಾಯಿ ಬಿಡುತ್ತಿಲ್ಲ. ಗಾಯತ್ರಿ ಎರಡು ಬಾರಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾಳೆ. ಆದರೆ, ಮುಕಳೆಪ್ಪ ಇನ್ನೂ ಮೌನ ಮುರಿಯದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.