ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ವಿರುದ್ಧ ಮಾತನಾಡಿರುವುದನ್ನು ಸಹಿಸುವುದಿಲ್ಲ. ಶ್ರೀಗಳ ವಿರುದ್ಧ ಮಾತನಾಡುವುದು ಜಿಲ್ಲೆಯ ಜನರಿಗೆ ಮಾಡಿದ ಅಪಮಾನ ಎಂದು ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ವಿರುದ್ಧ ಮಾತನಾಡಿರುವುದನ್ನು ಸಹಿಸುವುದಿಲ್ಲ. ಶ್ರೀಗಳು ಸಮಾಜಕ್ಕೆ ಮಾಡಿರುವ ಕಾರ್ಯಗಳನ್ನು ಮೊದಲು ತಿಳಿದುಕೊಳ್ಳಬೇಕು. ಶ್ರೀಗಳ ವಿರುದ್ಧ ಮಾತನಾಡುವುದು ಜಿಲ್ಲೆಯ ಜನರಿಗೆ ಮಾಡಿದ ಅಪಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಖಡಕ್ ಎಚ್ಚರಿಕೆ ನೀಡಿದರು.
ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕಾರ್ಖಾನೆಯ ವಿರುದ್ಧ ಸರ್ಕಾರದ ಮಟ್ಟದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಈಗಾಗಲೇ ಕ್ರಮಕ್ಕೆ ಮುಂದಾಗಿದ್ದೇವೆ. ಆದರೆ ಹೋರಾಟದ ನೆಪದಲ್ಲಿ ಜಿಲ್ಲೆಯ ಗವಿಮಠದ ಸ್ವಾಮೀಜಿಗಳ ವಿರುದ್ಧ ಮಾತನಾಡುವುದು ಸರಿಯಲ್ಲ. ಹೊರಗಿನಿಂದ ಬಂದವರು ಜಿಲ್ಲೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದನ್ನು ಸಹಿಸುವುದಿಲ್ಲ. ಗವಿಮಠ ನಮ್ಮ ಜಿಲ್ಲೆಯ ಮಠ, ಶ್ರೀಗಳ ಸೇವೆ ಮತ್ತು ಕೊಡುಗೆ ಅಪಾರವಾಗಿದೆ ಎಂದರು.ಹೋರಾಟ ಮಾಡುವುದು ಅವರ ಹಕ್ಕು. ಆದರೆ ಮಾತನಾಡುವಾಗ ಸಹನೆ ಮತ್ತು ಸಂಯಮ ಇರಬೇಕು. ರಾಜಕೀಯ ದೃಷ್ಟಿಯಿಂದ ಶ್ರೀಗಳ ಬಗ್ಗೆ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಗವಿಮಠ ಶ್ರೀಗಳ ಕುರಿತು ಮಾತನಾಡುವ ಮುನ್ನ ಅವರು ಮಾಡಿರುವ ಕಾರ್ಯಗಳನ್ನೊಮ್ಮೆ ನೋಡಿ ಬರಲಿ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕುರಿತು ಯಾರಾದರೂ ಮಾತನಾಡಿದರೆ ನಾನಂತೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸಿದರು.ಮೈಸೂರು ದಸರಾ ನಾಡಿನ ಹೆಮ್ಮೆ. ಅದನ್ನು ಗವಿಮಠ ಸ್ವಾಮೀಜಿ ಉದ್ಘಾಟಿಸಿರುವುದು ಉತ್ತರ ಕರ್ನಾಟಕದ ಹೆಮ್ಮೆಯಾಗಿದೆ. ಈ ಕುರಿತು ಹೇಳುವುದು ಸರಿಯಲ್ಲ ಎಂದರು.
ಎಲ್ಲ ಜಿಲ್ಲೆ, ಸಮುದಾಯಕ್ಕೆ ಆದ್ಯತೆ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಎಲ್ಲ ಸಮುದಾಯ ಮತ್ತು ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಕನ್ನಡಪರ ಕೆಲಸಕ್ಕಾಗಿ ಪ್ರಶಸ್ತಿ ನೀಡುತ್ತಿರುವುದು ನಾಲ್ಕನೇ ಬಾರಿ ಎಂದು ತಿಳಿಸಿದರು.ಜನಪದ ಕಲಾಲೋಕಕ್ಕೆ ಹೊಸ ಜಾಗ: ಕೊಪ್ಪಳದಲ್ಲಿ ಜನಪದ ಕಲಾಲೋಕ ನಿರ್ಮಾಣಕ್ಕೆ ಗುರುತಿಸಿದ್ದ ಜಮೀನು ಸೂಕ್ತವಲ್ಲ ಎಂಬ ವರದಿ ಬಂದಿದೆ. ಹೀಗಾಗಿ ಬೇರೆ ಸ್ಥಳದಲ್ಲಿ ಜಮೀನು ಗುರುತಿಸಿ ಯೋಜನೆ ಆರಂಭಿಸಲಾಗುವುದು ಎಂದರು.
ತುಂಗಭದ್ರೆಯಿಂದ ನ. 20ರ ವರೆಗೆ ನೀರು: ತುಂಗಭದ್ರಾ ಜಲಾಶಯದಿಂದ ಕರ್ನಾಟಕದ ಪಾಲಿನ 14 ಟಿಎಂಸಿ ನೀರು ಲಭ್ಯವಿದೆ. ನ. 20ರ ವರೆಗೆ ಕಾಲುವೆಗಳಿಗೆ ನೀರು ಹರಿಸಲು ಅವಕಾಶವಿದೆ. ನಂತರದ ಅವಧಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ನೀರು ಕೇಳಲಾಗಿದೆ. ಆದರೆ ಈ ವರೆಗೆ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು.ಹಾಲಿನ ದರ ಹೆಚ್ಚಳದ ಹಣ ರೈತರಿಗೆ: ಹಾಲಿನ ದರ ಹೆಚ್ಚಳದಿಂದ ದೊರೆಯುವ ಹಣವನ್ನು ರೈತರಿಗೆ ನೀಡಲಾಗುವುದು. ಈಗಾಗಲೇ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಹಾಲಿನ ದರ ಹೆಚ್ಚಳ ಸರ್ಕಾರಕ್ಕೆ ದೊಡ್ಡ ಹೊರೆಯಾಗುವುದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದರು.
ವಿವಿಗೆ 50 ಎಕರೆ ಜಮೀನು: ಕೊಪ್ಪಳ ವಿಶ್ವವಿದ್ಯಾಲಯದ ಆರಂಭಕ್ಕೆ 50 ಎಕರೆ ಜಮೀನು ಗುರುತಿಸಲಾಗಿದೆ. ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆ ಶೀಘ್ರ ಆರಂಭವಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.ಅಂಜನಾದ್ರಿ ಅಭಿವೃದ್ಧಿಗೆ ಹೊಸ ರೂಪ: ಅಂಜನಾದ್ರಿ ಪರ್ವತದ ಗುಡ್ಡದ ಮಾಲೀಕತ್ವ ವಿದ್ಯಾದಾಸ ಬಾಬಾ ಅವರಿಗೆ ಸೇರಿದ್ದಲ್ಲ. ಅವರಿಗೆ ಪೂಜೆ ಸಲ್ಲಿಸುವ ಹಕ್ಕು ಮಾತ್ರ ಇದೆ. ಈ ಕುರಿತು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಹೊಸ ರೂಪ ನೀಡಲಾಗುವುದು. ನ್ಯಾಯಾಲಯದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಾತ್ರ ಆದೇಶವಿದೆಯೇ ಹೊರತು ಇಡೀ ಗುಡ್ಡದ ಬಗ್ಗೆ ಆದೇಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.