ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಭಟನೆ ನಡೆಸುತ್ತೇನೆ: ಸಿ.ಎನ್. ಮಂಜೇಗೌಡ

| Published : Jun 20 2024, 01:04 AM IST

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಭಟನೆ ನಡೆಸುತ್ತೇನೆ: ಸಿ.ಎನ್. ಮಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಡಿ. ರವಿಶಂಕರ್ ಅವರು ವಜಾಗೊಂಡಿರುವ ಹೊರ ಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳದಿದ್ದಲ್ಲಿ ಜೂ.26 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಭಟನೆ ನಡೆಸುತ್ತೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಶಾಸಕ ಡಿ. ರವಿಶಂಕರ್ ಅವರು ವಜಾಗೊಂಡಿರುವ ಹೊರ ಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳದಿದ್ದಲ್ಲಿ ಜೂ. 26 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.

ಕೆ.ಆರ್. ಪಟ್ಟಣದ ಆಡಳಿತ ಸೌಧದ ಮುಂದೆ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಎಸ್. ನಂಜಪ್ಪ, ಎಚ್. ವಿಶ್ವನಾಥ್, ಮಂಚನಹಳ್ಳಿ ಮಹದೇವು ಮತ್ತು ಸಾ.ರಾ. ಮಹೇಶ್ ಅವರು ಉದ್ಯೋಗ ಸೃಷ್ಟಿ ಮಾಡಿ ಬಡವರಿಗೆ ಕೆಲಸ ನೀಡುವುದರ ಜೊತೆಗೆ ಹೊರ ಗುತ್ತಿಗೆ ನೌಕರರನ್ನು ತೆಗೆಯುವ ಕೆಲಸ ಮಾಡಿರಲಿಲ್ಲ, ಆದರೆ ಈಗಿನ ಶಾಸಕರು ಇಂತಹ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಟೀಕಿಸಿದರು.

ಶಾಸಕರಾದವರು ತಮ್ಮನ್ನು ವಿರೋಧಿಸಿದ ಜನರನ್ನು ವಿಶ್ವಾಸದಿಂದ ತಮ್ಮತ್ತ ಸೆಳೆದುಕೊಳ್ಳುವ ಆರೋಗ್ಯಕರ ರಾಜಕಾರಣ ಮಾಡುವುದನ್ನು ಬಿಟ್ಟು ಹೀಗೆ ಬೇರೆ ಪಕ್ಷದ ಬೆಂಬಲಿಗರಾಗಿರುವವರನ್ನು ಗುರಿಯಾಗಿಸಿಕೊಂಡು ಕೆಲಸದಿಂದ ತೆಗೆಯುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ ಎಂದು ಅವರು ಜರಿದರು.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಕೆಲಸದಿಂದ ತೆಗೆಯುವ ಮೊದಲು ಅವರಿಗೆ ಯಾವುದೇ ಸೂಚನೆ ನೀಡದೆ ಏಕಾಏಕಿ ಈ ರೀತಿ ಮಾಡುತ್ತಿರುವುದು ಶಾಸಕರ ಆಡಳಿತ ವೈಫಲ್ಯವಾಗಿದ್ದು, ಇದು ಭವಿಷ್ಯದಲ್ಲಿ ಪರಸ್ಪರ ದ್ವೇಷ ಮತ್ತು ಮನಸ್ತಾಪವನ್ನು ಉಂಟುಮಾಡುತ್ತದೆ ಎಂದರು.

ಚುನಾವಣೆ ಸಂದರ್ಭದಲ್ಲಿ ಜನತೆಗೆ ಭರವಸೆಯಾಗಿ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಲೋಕಸಭೆ ಚುನಾವಣೆ ಕಳೆದ ನಂತರ ಮುಂದುವರಿಸಲು ತಿಣಕಾಡುತ್ತಿರುವ ಕಾಂಗ್ರೆಸ್ ನವರು ತಮ್ಮ ಪಕ್ಷದ ಶಾಸಕರು ಮತ್ತು ಮುಖಂಡರಿಂದಲೇ ಅದನ್ನು ರದ್ದು ಪಡಿಸುವ ಹೇಳಿಕೆ ಕೊಡಿಸುತ್ತಿದ್ದು, ನಾಚಿಕೆಗೇಡಿನ ಸಂಗತಿ ಎಂದು ಅವರು ತಿಳಿಸಿದರು.