ಸಂತ್ರಸ್ಥರ ಸಂಕಷ್ಟ ನೀಗಿಸುವರೇ ಸಿದ್ದರಾಮಯ್ಯ?

| Published : Sep 06 2025, 02:00 AM IST

ಸಂತ್ರಸ್ಥರ ಸಂಕಷ್ಟ ನೀಗಿಸುವರೇ ಸಿದ್ದರಾಮಯ್ಯ?
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಉತ್ತರ ಕರ್ನಾಟಕ ಭಾಗದ ಜೀವನಾಡಿ, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರು ತಮ್ಮ ಭೂಮಿ, ಮನೆ- ಮಠಗಳನ್ನೆಲ್ಲ ತ್ಯಾಗ ಮಾಡಿದ್ದಾರೆ. ಇಂತಹ ತ್ಯಾಗಮಯಿ ಕುಟುಂಬಗಳು ಮಾತ್ರ ದಶಕಗಳಿಂದ ಇಂದಿಗೂ ಸಂತ್ರಸ್ಥರಾಗಿಯೇ ಉಳಿದುಕೊಂಡಿದ್ದಾರೆ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಇದೀಗ ಮತ್ತಷ್ಟು ಊರುಗಳು ಹಾಗೂ ಜಮೀನುಗಳು ಮುಳುಗಡೆಯಾಗಲಿವೆ. ಸಂತ್ರಸ್ಥರಿಗಾಗಿ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬರುವ ಸರ್ಕಾರಗಳು ಕೇವಲ ಭರವಸೆಯನ್ನೇ ನೀಡುತ್ತಿವೆಯೇ ಹೊರತು ಕೆಲಸವನ್ನು ಮಾಡುತ್ತಿಲ್ಲ ಎನ್ನುವುದೇ ಜನರ ಬೇಸರ.

ಶಶಿಕಾಂತ ಮೆಂಡೆಗಾರಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತರ ಕರ್ನಾಟಕ ಭಾಗದ ಜೀವನಾಡಿ, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರು ತಮ್ಮ ಭೂಮಿ, ಮನೆ- ಮಠಗಳನ್ನೆಲ್ಲ ತ್ಯಾಗ ಮಾಡಿದ್ದಾರೆ. ಇಂತಹ ತ್ಯಾಗಮಯಿ ಕುಟುಂಬಗಳು ಮಾತ್ರ ದಶಕಗಳಿಂದ ಇಂದಿಗೂ ಸಂತ್ರಸ್ಥರಾಗಿಯೇ ಉಳಿದುಕೊಂಡಿದ್ದಾರೆ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಇದೀಗ ಮತ್ತಷ್ಟು ಊರುಗಳು ಹಾಗೂ ಜಮೀನುಗಳು ಮುಳುಗಡೆಯಾಗಲಿವೆ. ಸಂತ್ರಸ್ಥರಿಗಾಗಿ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬರುವ ಸರ್ಕಾರಗಳು ಕೇವಲ ಭರವಸೆಯನ್ನೇ ನೀಡುತ್ತಿವೆಯೇ ಹೊರತು ಕೆಲಸವನ್ನು ಮಾಡುತ್ತಿಲ್ಲ ಎನ್ನುವುದೇ ಜನರ ಬೇಸರ.

ಕಳೆದ ಬಾರಿ ಬಾಗಿನ ಅರ್ಪಿಸಲು ಬಂದಿದ್ದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಸಂತ್ರಸ್ಥರ ಕಣ್ಣೀರೊರೆಸುವ ಭರವಸೆ ನೀಡಿದ್ದರು. ಇದೀಗ ಮತ್ತೆ ಕೃಷ್ಣೆಯ ಒಡಲು ತುಂಬಿದ್ದು, ಇಂದು ಮತ್ತೆ ಬಾಗಿನ ಅರ್ಪಣೆಗೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಮತ್ತು ಜಲ ಸಂಪನ್ಮೂಲ ಸಚಿವರಾಗಿರುವ ಡಿ.ಕೆ.ಶಿವಕುಮಾರ ಬರುತ್ತಿದ್ದಾರೆ. ಈಗಲೂ ಭರವಸೆ ನೀಡಿ ಹೋಗುತ್ತಾರೋ ಅಥವಾ ನೊಂದವರಿಗೆ ನ್ಯಾಯ ಕೊಡಿಸುತ್ತಾರೋ ಎಂದು ಸಂತ್ರಸ್ಥರು ಕಾತುರದಿಂದ ಕಾಯುತ್ತಿದ್ದಾರೆ.

ಕೃಷ್ಣಾ ಕೊಳ್ಳದ ಕುರಿತು ಕಳೇದ ಡಿಸೆಂಬರ್‌ನಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ ಅಕ್ಷತೆಯಲ್ಲಿ ರೈತರು, ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಮುಳುಗಡೆಯಾಗುವ ಜಮೀನುಗಳನ್ನು ಒಂದೇ ಹಂತದಲ್ಲಿ ಸ್ವಾಧೀನ ಮಾಡಿಕೊಳ್ಳುವುದು. ರೈತರಿಗೆ ನ್ಯಾಯಯುತ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಇದೀಗ ಮತ್ತೆ ಸೆ.3ರಂದು ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಇಲಾಖೆ ಮಂತ್ರಿಗಳು, ಶಾಸಕರು, ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ, ಪುನರ್‌ನಿರ್ಮಾಣ, ಭೂ ಪರಿಹಾರ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಭೂ ಪರಿಹಾರ ಕೋರಿ ದಾಖಲಿಸಿರುವ ಪ್ರಕರಣಗಳ ಕುರಿತು ಚರ್ಚಿಸಲಾಯಿತು.

ಬಿಜೆಪಿ ಸರ್ಕಾರದಲ್ಲಿನ ತೀರ್ಮಾನ ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ಸಂಪುಟ ಸಭೆ ಹಾಗೂ ಉಪ ಸಮಿತಿ ಸಭೆಯಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗೆ ₹ 24 ಲಕ್ಷ, ಒಣ ಭೂಮಿಗೆ ₹ 20 ಲಕ್ಷ ಎಂದು ತೀರ್ಮಾನ ಮಾಡಿದ್ದರು. ಆದರೆ, ಇದನ್ನು ಯಾವ ರೈತರೂ ಒಪ್ಪಲಿಲ್ಲ. ಬದಲಿಗೆ ಧರಣಿ ನಡೆಸಿದ್ದರು.

ಕೋಟ್:

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಸಹ ಈ ಬಗ್ಗೆ ಶೀಘ್ರದಲ್ಲೇ ಸಭೆ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ಈ ಯೋಜನೆ ಸಾಕಾರಕ್ಕೆ ಬದ್ಧವಾಗಿದೆ. ಎರಡು- ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಕೃಷ್ಣಾ ಮೇಲ್ದಂಡೆ ವಿಚಾರವಾಗಿ ರೈತರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು.ಡಿ.ಕೆ.ಶಿವಕುಮಾರ, ಡಿಸಿಎಂ, ಜಲ ಸಂಪನ್ಮೂಲ ಸಚಿವರು.ಬಾಕ್ಸ್‌ಆಗಬೇಕಾದ ಕೆಲಸಗಳೇನು...?ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ ಭೂಸ್ವಾಧೀನ, ಪುನರ್ವಸತಿ ಹಾಗೂ ಮರುನಿರ್ಮಾಣ ಆಗಬೇಕಿದೆ. ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 519.60 ಮೀ.ನಿಂದ 524.26 ಮೀ.ವರೆಗೆ ಎತ್ತರಿಸಬೇಕಿದೆ. ಅದಕ್ಕಾಗಿ ಅಂದಾಜು 1.33 ಲಕ್ಷ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಕೇವಲ 28,967 ಎಕರೆ ಸ್ವಾಧೀನವಾಗಿದೆ. ಇನ್ನೂ 1,04,963 ಎಕರೆ ಆಗಬೇಕಿದೆ. ಇನ್ನು ಜಲಾಶಯದ ಹಿನ್ನೀರಿನಿಂದ ಬಾಧಿತವಾಗಲಿರುವ 188 ಗ್ರಾಮಗಳ 73 ಸಾವಿರ ಎಕರೆ ಜಮೀನು ಕೂಡ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಯುಕೆಪಿ 3ನೇ ಹಂತಕ್ಕೆ ಒಂದೇ ಹಂತದಲ್ಲಿ ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ಒದಗಿಸಲು ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಈ ಮೂಲಕ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಹ ಯೋಚಿಸಿದೆ. ಆದರೆ ಈ ಭರವಸೆಗಳು ಅದ್ಯಾವಾಗ ಇಡೇರುತ್ತವೆ? ಎಂದು ನೊಂದ ಸಂತ್ರಸ್ಥರು ಪ್ರಶ್ನಿಸುತ್ತಲೇ ಇದ್ದಾರೆ. ಕೃಷ್ಣೆಗಾಗಿ ಜೀವನವನ್ನೇ ಅರ್ಪಿಸಿರುವ ನಮಗೆ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಮಾರ್ಗ ತೋರಿಸಿ ಎನ್ನುತ್ತಿದ್ಧಾರೆ ಸಂತ್ರಸ್ಥರು.