ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ನಮ್ಮ ಸರ್ಕಾರಕ್ಕೆ ಯಾವುದೇ ದುರುದ್ದೇಶ ಇಲ್ಲ.
ಇದು ತುಂಬಾ ಸೂಕ್ಷ್ಮ ವಿಚಾರ. ಹೀಗಾಗಿ ತನಿಖೆಯಲ್ಲಿ ಮಹಿಳೆಯರ ದೂರಿನ ನೈಜತೆ ಪರಿಶೀಲಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಇದೇ ವೇಳೆ, ‘ಮಹಿಳೆಯು ಮಾನಸಿಕ ಅಸ್ವಸ್ಥತೆ ಹೊಂದಿರುವುದಾಗಿ ಕೆಲವರು ಹೇಳಿದ್ದಾರೆ. ಜತಗೆ ಯಡಿಯೂರಪ್ಪ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು.
ಹೀಗಾಗಿ ದೂರಿನ ಉದ್ದೇಶವನ್ನು ಪರಿಶೀಲಿಸಬೇಕಿದೆ. ಉದ್ದೇಶ-ದುರುದ್ದೇಶಗಳ ಬಗ್ಗೆ ತನಿಖೆ ನಡೆಸಿದ ಬಳಿಕವೇ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯು ಕೈ ಬರಹದಲ್ಲಿ ದೂರು ನೀಡಿಲ್ಲ. ಬದಲಿಗೆ ಟೈಪ್ ಮಾಡಿರುವ ದೂರನ್ನು ತಂದು ನೀಡಿದ್ದಾರೆ.
ಕಾನೂನು ಪ್ರಕಾರ ದೂರು ನೀಡಿದ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು. ಬಳಿಕ ತನಿಖೆಯಿಂದ ಸತ್ಯಾಸತ್ಯತೆ ತಿಳಿಯಬೇಕು. ಈ ಬಗ್ಗೆ ತನಿಖೆಯಾಗಿ ಸಂಪೂರ್ಣ ಮಾಹಿತಿ ತಿಳಿದ ಬಳಿಕವೇ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ, ಅವರು ಮಾಜಿ ಮುಖ್ಯಮಂತ್ರಿಗಳು. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಏಕಾಏಕಿ ಆ ರೀತಿ ಮಾಡಲಾಗುವುದಿಲ್ಲ.
ತನಿಖೆಯಾಗಿ ಆರೋಪ ಸಾಬೀತಾದರೆ ಮಾತ್ರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ದೂರುದಾರರಿಗೆ ರಕ್ಷಣೆ ನೀಡುತ್ತೀರಾ ಎಂಬ ಪ್ರಶ್ನೆಗೆ, ಪೊಲೀಸರು ದೂರುದಾರರ ರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ.
ಸಹಜವಾಗಿಯೇ ದೂರುದಾರರು ಅಥವಾ ಅವರ ಕುಟುಂಬ ಸದಸ್ಯರಿಗೆ ಯಾವುದಾದರೂ ತೊಂದರೆ ಇದೆಯೇ ಎಂದು ಪರಿಶೀಲಿಸುತ್ತಾರೆ. ಒಂದೊಮ್ಮೆ ಅಗತ್ಯವಾದರೆ ರಕ್ಷಣೆ ಒದಗಿಸುತ್ತಾರೆ ಎಂದಷ್ಟೇ ಹೇಳಿದರು.