ತರೀಕೆರೆಪಟ್ಟಣದ ಹೃದಯ ಭಾಗದಲ್ಲಿರುವ ವೀರ ಪಾಳೆಯಗಾರರ ಕಾಲದಿಂದ ತನ್ನ ಅಸ್ತಿತ್ವ ಕಾಪಾಡಿಕೊಂಡಿರುವ ತರೀಕೆರೆ ನೆಲದ ತಿಳಿಯಾದ ಸಿಹಿ ನೀರಿಗೆ ಪ್ರಸಿದ್ಧಿಯಾಗಿ ಜನಪದರಿಂದ ವರದ ಕೆರೆ ಎಂದೇ ಖ್ಯಾತಿವೆತ್ತ ತರೀಕೆರೆ ಚಿಕ್ಕೆರೆ ನಿರ್ಲಕ್ಷ್ಯದಿಂದ ಇಂದು ಅವಸಾನದ ಅಂಚಿಗೆ ಬಂದು ನಿಂತಿದೆ. ಇದರ ಪುನರುಜ್ಜೀವನ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ಇನ್ನಾದರೂ ಆ ಗತ ವೈಭವ ಮರಳುವುದೇ ನೋಡ ಬೇಕಿದೆ.

- ನಿರ್ಲಕ್ಷ್ಯದಿಂದ ಇಂದು ಅವಸಾನದ ಅಂಚಿಗೆ ।

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ ತರೀಕೆರೆ

ಪಟ್ಟಣದ ಹೃದಯ ಭಾಗದಲ್ಲಿರುವ ವೀರ ಪಾಳೆಯಗಾರರ ಕಾಲದಿಂದ ತನ್ನ ಅಸ್ತಿತ್ವ ಕಾಪಾಡಿಕೊಂಡಿರುವ ತರೀಕೆರೆ ನೆಲದ ತಿಳಿಯಾದ ಸಿಹಿ ನೀರಿಗೆ ಪ್ರಸಿದ್ಧಿಯಾಗಿ ಜನಪದರಿಂದ ವರದ ಕೆರೆ ಎಂದೇ ಖ್ಯಾತಿವೆತ್ತ ತರೀಕೆರೆ ಚಿಕ್ಕೆರೆ ನಿರ್ಲಕ್ಷ್ಯದಿಂದ ಇಂದು ಅವಸಾನದ ಅಂಚಿಗೆ ಬಂದು ನಿಂತಿದೆ. ಇದರ ಪುನರುಜ್ಜೀವನ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ಇನ್ನಾದರೂ ಆ ಗತ ವೈಭವ ಮರಳುವುದೇ ನೋಡ ಬೇಕಿದೆ.

ಒಂದು ಕಾಲದಲ್ಲಿ ಚಿಕ್ಕೆರೆ ಇಡೀ ತರೀಕೆರೆ ಪಟ್ಟಣದ ಜನತೆಗೆ ಸಿಹಿಯಾದ ನೀರುಣಿಸುತ್ತಿತ್ತು. ವರ್ಷದ ಎಲ್ಲಾ ಋತು ಮಾನಗಳಲ್ಲೂ ಪಟ್ಟಣದ 40 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಈ ಕೆರೆಯಿಂದ ಸಿಗುತ್ತಿತ್ತು. ಹಾಗಾಗಿಯೇ ಈ ಚಿಕ್ಕೆರೆಯನ್ನು ಸಾರ್ವಜನಿಕರು ದೇವರು ನೀಡಿದ ವರ ಕೆರೆ ಎಂದೇ ಭಾವಿಸಿದ್ದರು. ಪಟ್ಟಣದ ಜನತೆ ಜತನದಿಂದ ಕಾಪಾಡಿ ಕೊಂಡಿದ್ದರು.

ಪಟ್ಟಣದ ಹೃದಯಭಾಗದ ಈ ಕೆರೆಗೆ ಮಳೆ ಗಾಲದಲ್ಲಿ ಕೋಡಿ ತುಂಬಿ ನೀರು ಹರಿದು ಕೆರೆಯ ಸುತ್ತಮುತ್ತಲೂ ಇರುವ ನೆಲ ಭಾವಿ, ತೆರೆದ ಬಾವಿ, ಕೊಳವೆ ಬಾವಿಗಳಿಗೂ ಕೊರತೆಯಾಗದಂತೆ ಅಂತರ್ಜಲ ವೃದ್ಧಿಯಾಗುತ್ತಿತ್ತು. ಆದರೆ ಈ ಕೆರೆ ಉಸ್ತುವಾರಿ ವಹಿಸಿದ್ದ ಸ್ಥಳೀಯ ಪುರಸಭೆ ಆಡಳಿತ ಗಿಡಗಳನ್ನು ಕಿತ್ತು ಸ್ವಚ್ಛಗೊಳಿಸಿ ಕೆರೆ ಬದುವಿನ ಏರಿಯನ್ನು ಆಗಾಗ್ಗೆ ದುರಸ್ತಿ ಪಡಿಸಿ ಕೆರೆಯಿಂದ ಜನರು ನೀರು ತುಂಬಿಕೊಂಡು ಹೋಗುವ ಸ್ಥಳದಲ್ಲಿ ವಿಶಾಲ ಹಾಸುಗಲ್ಲುಗಳನ್ನು ಹಾಕಿಸಿ, ಪಾಚಿ ತೆಗೆಸಿ ನೀರು ಮಲಿನವಾಗದಂತೆ ಕಾಪಾಡುತ್ತಿತ್ತು.

ಆದರೆ ಕ್ರಮೇಣ ಪುರಸಭೆ ಪಟ್ಟಣದ ಮನೆ ಮನೆಗಳಿಗೆ ಕುಡಿವ ನೀರನ್ನು ನಲ್ಲಿಗಳ ಮೂಲಕ ಸರಬರಾಜು ಮಾಡುವ ಯೋಜನೆ ಜಾರಿಗೆ ಬಂದ ಮೇಲೆ ಈ ಕೆರೆಯ ಉಪಯೋಗ ಕ್ಷೀಣಿಸಿ ಕ್ರಮೇಣ ಈ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಹೂಳು ತುಂಬಿಕೊಂಡು ಯಥೇಚ್ಚವಾಗಿ ಝಂಡು, ಗಿಡಗಳು ಬೆಳೆದು ಮೀನಿನ ಬದಲು ಹಾವು, ಹುಳು ಹುಪ್ಟಟೆ ಇತ್ಯಾದಿ ಜಲ ಚರ ಗಳ ನೆಲೆಯಾಗಿ ನೀರು ಮಲಿನವಾದಾಗ ತರೀಕೆರೆ ಪುರಸಭೆ ಕೆರೆಗೆ ಕಾಯಕಲ್ಪ ನೀಡಿ ಕೆರೆಯಲ್ಲಿ ಹೂತಿದ್ದ ನೂರಾರು ಟನ್ ಹೂಳು ಮತ್ತು ಕಸ ತೆಗೆದು ನೀರು ಶುದ್ಧೀಕರಿಸಿ ಕೆರೆಯ ಎರಡೂ ದಂಡೆಗಳನ್ನು ಅಭಿವೃದ್ಧಿ ಪಡಿಸಿ, ಕರೆಯ ಸುತ್ತ ಗ್ಯಾಲರಿ ದೊಡ್ಡ ಕಬ್ಬಿಣದ ಗೇಟ್ ಗಳನ್ನು ಅಳವಡಿಸಿದರು.

ಆದರೆ ಈ ಕೆರೆ ಇದೀಗ ಮತ್ತೆ ದುಸ್ಥಿತಿಯನ್ನೇ ತಲುಪುತ್ತಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡು ಕೆರೆ ಎರಡೂ ಬದಿಗಳ ಏರಿ ಸಾಲಿನಲ್ಲಿ ಲಾರಿಗಟ್ಟಲೆ ಕಸ ಮತ್ತು ಗಿಡಗಳು ಬೆಳೆದಿವೆ. ನೀರು ಮಲಿನ ವಾಗಿ ಪಾಚಿ ಕಟ್ಟಿದೆ ಎತ್ತರವಾದ ಜಂಡು ಗಿಡಗಳು ಬೆಳದಿವೆ, ಒಟ್ಟಾರೆ ಕೆರೆ ಅವಸಾನದ ಅಂಚಿಗೆ ಬಂದು ತಲುಪಿದೆ.

-- ಬಾಕ್ಸ್‌--

ಕೆರೆ ನೀರಿನ ವೈಶಿಷ್ಟ್ಯ:

ತಾಲೂಕಿನ ಕೆಮ್ಮಣಗುಂಡಿ, ಕಲ್ಲತ್ತಿಗಿರಿ, ಹೊಸಪೇಟೆ ತಣಿಗೇಬೈಲು ಇತ್ಯಾದಿ ಗಿರಿ ಶ್ರೇಣಿಯ ಗುಡ್ಡಬೆಟ್ಟಗಳ ಭೂಪ್ರದೇಶದ ಜಲಾನಯನ ಭಾಗದಲ್ಲಿ ಮಳೆಗಾಲದಲ್ಲಿ ಬೀಳುತ್ತಿದ್ದ ಮಳೆ ಹಳ್ಳ ಕೊಳ್ಳ, ಕೆರೆ ತೊರೆಗಳ ಮೂಲಕ ಔಷಧಯುಕ್ತ ಗಿಡ ಮೂಲಿಕೆಗಳು, ಸಸ್ಯಗಳ ಮೇಲೆ ಹರಿದು ಪ್ರಕೃತಿ ಸಹಜವಾಗಿ ಅಗತ್ಯ ಸತ್ವೊಳಗೊಂಡು ಅಮೃತಪಾನವೆನಿಸಿತ್ತು.

ಗಿರಿ ಪ್ರದೇಶದಲ್ಲಿ ಸುರಿದ ಮಳೆ ನೀರು ಭಗವತಿ ಕಟ್ಟೆ, ರಾಮನಾಯ್ಕನ ಕೆರೆ, ವಿವಿಧ ಸಂಪರ್ಕ ಕೆರೆಗಳು ತುಂಬಿ ಕೋಡಿ ಹರಿದು ಕಾಲುವೆ ಮೂಲಕ ನೀರು ತರೀಕೆರೆಯ ಚಿಕ್ಕೆರೆ ಸೇರಿದ ನೀರು ಸಿಹಿ ನೀರಾಗಿ ಪರಿವರ್ತನೆ ಆಗುತ್ತಿತ್ತು. ಡಿಸ್ಟಿಲ್ಡ್ ವಾಟರ್ ಗಿಂತಲೂ ಪರಿಶುದ್ಧವಾಗಿತ್ತು. ಈ ಕೆರೆ ನೀರನ್ನು ಕೈ ಬೊಗಸೆಯಲ್ಲಿ ಸೇವಿಸಿದರೂ ಸಾಕು, ಎಲ್ಲಾ ಆಹಾರ ಜೀರ್ಣವಾಗುವಷ್ಟು, ದೇಹಕ್ಕೆ ಶಕ್ತಿ ನೀಡುವಷ್ಟು ಜೀವಸತ್ವದಿಂದ ಕೂಡಿರುತ್ತಿತ್ತು.ಇದು ನಿಜಕ್ಕೂ ಈ ನೆಲದ ಪವಾಡವೆಂದೇ ಪರಿಗಣತವಾಗಿತ್ತು.

ಚಿಕ್ಕೆರೆ ನೀರನ್ನು ಪ್ರಮುಖವಾಗಿ ಅಡುಗೆಗೆ ಬಳಸಲಾಗುತ್ತಿತ್ತು. ಇಡೀ ತರೀಕೆರೆ ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ಏಕೈಕ ಆಸರೆ ಯಾಗಿತ್ತು. ಜನ ಮನೆಗಳಿಗೆ ಅಡ್ಡೆ, ಕೊಡಗಳಲ್ಲಿ ಸಿಹಿ ನೀರನ್ನು ತುಂಬಿಸಿಕೊಂಡುಹೋಗಿ ಸಂಗ್ರಹಿಸಿಟ್ಟು ಕೊಳ್ಳುತ್ತಿದ್ದರು. ಈ ಐತಿಹಾಸಿಕ ಕೆರೆಯನ್ನು ಕಾಪಾಡಿಕೊಂಡು ಮತ್ತೆ ಆ ಗತ ವೈಭವದಿಂದ ಕಂಗೊಳಿಸುವಂತೆ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಶಯ ಮತ್ತು ಜನ ಮೂಲಗಳ ವೃದ್ಧಿಗೆ ಅನಿವಾರ್ಯ.

-- ಕೋಟ್ಃ--

ನಗರಾಭಿವೃದ್ದಿ ಇಲಾಖೆಯಿಂದ ₹2 ಕೋಟಿ ಗಳ ಅನುದಾನದಿಂದ ಚಿಕ್ಕರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೂಳು ತೆಗೆಸಿ ಲಾನ್ ಗಳನ್ನುನಿರ್ಮಿಸಿ, ಸಾರ್ವಜನಿಕರಿಗೆ ವಾಕಿಂಗ್ ಪಾತ್ ನಿರ್ಮಿಸಲಾಗುತ್ತದೆ. ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಮತ್ತು ಚಿಕ್ಕರೆಯನ್ನು ಪ್ರವಾಸಿಧಾಮವನ್ನಾಗಿ ಅಭಿವೃದ್ಧಿಪಡಿಸಲಾಗುವುದು.

- ಜಿ.ಎಚ್.ಶ್ರೀನಿವಾಸ್ , ಶಾಸಕ

--

-- ಕೋಟ್--

ತರೀಕೆರೆ ಚಿಕ್ಕೆರೆ ಐತಿಹಾಸಿಕ ಮಹತ್ವ ಹೊಂದಿದೆ. ಪಟ್ಟಣದ ಜನಜೀವನದ ಜೊತೆ ಅವಿನಾಭಾವ ಸಂಬಂದ ಗಳಿಸಿದೆ. ತರೀಕೆರೆ ಹೃದಯಭಾಗದ ಈ ಕೆರೆಯನ್ನು ಪ್ರವಾಸಿತಾಣವನ್ನಾಗಿಸುವ ಮೂಲಕ ಸೌಂದರ್ಯ ಹೆಚ್ಚಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಟಿ.ದಾದಾಪೀರ್ ತಿಳಿಸಿದ್ದಾರೆ.

------------

5ಕೆಟಿಆರ್.ಕೆ.1ಃ ತರೀಕೆರೆ ಪಟ್ಟಣದಲ್ಲಿರುವ ಚಿಕ್ಕೆರೆ

5ಕೆಟಿಆರ್.ಕೆ.2ಃ ಶಾಸಕ ಜಿ.ಹೆಚ್.ಶ್ರೀನಿವಾಸ್

5ಕೆಟಿಆರ್.ಕೆ.3ಃ ಟಿ.ದಾದಾಪೀರ್ ಪುರಸಭೆ ಮಾಜಿ ಸದಸ್ಯರು

---------------