ರಾಜ್ಯ ಬಿಜೆಪಿಗೂ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌.ಈಶ್ವರಪ್ಪ

| Published : Mar 22 2024, 01:00 AM IST / Updated: Mar 22 2024, 01:04 PM IST

ರಾಜ್ಯ ಬಿಜೆಪಿಗೂ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಯತ್ನಾಳ್, ಸಿ.ಟಿ.ರವಿ ಯಾರೂ ಇವರಿಗೆ ಲೆಕ್ಕಕ್ಕೇ ಇಲ್ಲವಾಗಿದೆ. ನಿಮಗೆ ಹಿಂದುತ್ವ ಬೇಕು, ಆದರೆ ಹಿಂದುತ್ವದ ಪರ ಇರುವವರು ಬೇಡ. ಹೀಗೆ ಹಿಂದುತ್ವದ ನಾಯಕರ ತುಳಿಯುತ್ತಾ ಹೋದರೆ ಪಕ್ಷ ಉಳಿಯುತ್ತಾ ಎಂದು  ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯತ್ನಾಳ್, ಸಿ.ಟಿ.ರವಿ ಯಾರೂ ಇವರಿಗೆ ಲೆಕ್ಕಕ್ಕೇ ಇಲ್ಲವಾಗಿದೆ. ನಿಮಗೆ ಹಿಂದುತ್ವ ಬೇಕು, ಆದರೆ ಹಿಂದುತ್ವದ ಪರ ಇರುವವರು ಬೇಡ. ಹೀಗೆ ಹಿಂದುತ್ವದ ನಾಯಕರ ತುಳಿಯುತ್ತಾ ಹೋದರೆ ಪಕ್ಷ ಉಳಿಯುತ್ತಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬದ ರಾಜಕಾರಣದ ವಿರುದ್ಧ ಇದ್ದರು. 

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನನಗೆ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಚುನಾವಣೆಗೆ ಸ್ಪರ್ಧಿಸಬೇಡಿ ಅಂದರು. ನಾನು ಒಪ್ಪಿ ಹಿಂದೆ ಸರಿದೆ. ಆದರೆ, ಯಡಿಯೂರಪ್ಪ ಕುಟುಂಬದಲ್ಲಿ ಒಬ್ಬರು ಸಂಸದ ಇದ್ದಾಗ್ಯೂ ಆದರೂ ಅವರ ಮತ್ತೊಬ್ಬ ಮಗನಿಗೆ ಶಾಸಕ ಸ್ಥಾನ ಕೊಡಿಸಿದರು.

ಇದಾದ ಬಳಿಕ ಶಾಸಕ ಸ್ಥಾನದ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದರು. 108 ಸ್ಥಾನವಿದ್ದ ಬಿಜೆಪಿ ಇಂದು 66ಕ್ಕೆ ಇಳಿಯಿತು. ಸಂಘಟನೆ ಮಾಡಿದ್ದ ಪಕ್ಷದ ಕಾರ್ಯಕರ್ತರಿಗೆ ನೋವಾಯಿತು. ಕಾಂಗ್ರೆಸ್ ಪಕ್ಷದ ಸಂಸ್ಕೃತಿ ರಾಜ್ಯದಲ್ಲಿ ಬಿಜೆಪಿಗೆ ಬಂದಿದೆ ಎಂದು ಹರಿಹಾಯ್ದರು.

ಈ ಹಿಂದೆ ಏನೇ ತೀರ್ಮಾನ ಮಾಡೋದಾದರೂ ಕೋರ್ ಕಮಿಟಿ ಸಭೆ ಮಾಡ್ತಿದ್ವಿ, ವಿಧಾನಸಭಾ ಟಿಕೆಟ್‌ ಗೆ ತಾಲೂಕು ಸಮಿತಿ, ಜಿಲ್ಲಾ ಸಮಿತಿ ಜೊತೆ ಚರ್ಚೆ ಮಾಡಿ ರಾಜ್ಯ ಸಮಿತಿಗೆ ಪಟ್ಟಿ ಕೊಡಲಾಗುತ್ತಿತ್ತು. 

ರಾಜ್ಯ ಸಮಿತಿ ಕೇಂದ್ರ ಸಮಿತಿಗೆ ಪಟ್ಟಿ ಕೊಡುತ್ತಿತ್ತು. ರಾಜ್ಯ ಸಮಿತಿ ಕೊಟ್ಟ ಪಟ್ಟಿಗೆ ಕೇಂದ್ರ ಸಮಿತಿ ಕಣ್ಣು ಮುಚ್ಚಿಕೊಂಡು ಸಹಿ ಮಾಡುತ್ತಿತ್ತು. ಈಗ ಆ ಸಂಸ್ಕೃತಿ ಇಲ್ಲದಂತೆ ಯಡಿಯೂರಪ್ಪ ಮಾಡಿದ್ದಾರೆ. 

ಯಾರು ಯಾರೋ ಟಿಕೆಟ್‌ ತಗೊಂಡು ಬರುತ್ತಿದ್ದಾರೆ. ಅವರು ಯಾರು ಏನು ಗೊತ್ತೇ ಇರಲ್ಲ. ಗೆದ್ದ ಮೇಲೆ ನೀನು‌ ನಮ್ಮ ಪಕ್ಷ ಏನಪ್ಪ ಅಂತಾ ಕೇಳುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಸಂಘಟನೆಗೆ ಕೇಂದ್ರದ ನಾಯಕರು ಗೌರವ ಕೊಡ್ತಿದ್ದರು. ಯಾರಿಗೆ ಟಿಕೆಟ್ ಅಂತ ತೀರ್ಮಾನ ಆಗುವ ಮುನ್ನವೇ ಎಂದರೆ ತಿಂಗಳ ಹಿಂದೆಯೇ ಯಡಿಯೂರಪ್ಪ ಚಿಕ್ಕಮಗಳೂರಿಗೆ ಬಂದಾಗ ಶೋಭಾರನ್ನು ನಿಲ್ಲಿಸುತ್ತೇವೆ, ಗೆಲ್ಲಿಸಬೇಕು ಅಂದ್ರು. ಆದರೆ, ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಗೋಬ್ಯಾಕ್ ಶೋಭಾ ಅಂದ್ರು. 

ಅದಕ್ಕೆ ಬೇರೆ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್‌ ಕೊಡಿಸಿದರು. ಆದರೆ, ಪ್ರತಾಪ್‌ ಸಿಂಹನಿಗೆ ಯಾಕೆ ಬೇರೆ ಕ್ಷೇತ್ರ ಕೊಡಿಸಲಿಲ್ಲ? ಸಿ.ಟಿ.ರವಿಗೆ ಯಾಕೆ ಕೊಡಿಸಲಿಲ್ಲ? ಎಂದು ಪ್ರಶ್ನೆ ಮಾಡಿದ ಅವರು ಕೋರ್ ಕಮಿಟಿಯ 114 ಮಂದಿಯಲ್ಲಿ 84 ಮಂದಿ ಪ್ರತಾಪ್‌ ಗೆ ಟಿಕೆಟ್‌ ನೀಡಬೇಕು ಎಂದರೂ ತಪ್ಪಿಸಲಾಯಿತು ಎಂದು ಕಿಡಿ ಕಾರಿದರು.

ಸಭೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್‌ ಸೇರಿ ಹಲವರು ಉಪಸ್ಥಿತರಿದ್ದರು.

ಹಿಂದುತ್ವ ಹೆಸರಿನಲ್ಲಿ ಈಶ್ವರಪ್ಪ ನಮಗೆ ಪ್ರೇರಣೆ: ಗೂಳಿಹಟ್ಟಿ ಶೇಖರ್

ಶಿವಮೊಗ್ಗ: ಈಶ್ವರಪ್ಪ ಎಲ್ಲರಿಗೂ ಬೇಕಾದ ರಾಜಕಾರಣಿ. ಈಶ್ವರಪ್ಪ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿದರು. 

ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈಶ್ವರಪ್ಪ ಇಂದಿನ ಯುವಜನತೆಗೆ ಸರಿಯಾದ ರಾಜಕಾರಣಿ. ಈಶ್ವರಪ್ಪ ಅವರನ್ನು ‌ಒಪ್ಪುವಂತಹ ಅಭಿಮಾನಿ ಬಳಗವೇ ಇದೆ. ಇವರು ಎಲ್ಲಾ ಸಮಾಜಕ್ಕೂ ಬೇಕಾದ ವ್ಯಕ್ತಿ. 

ಹಿಂದುತ್ವ, ಧರ್ಮದ ಹೆಸರಿನಲ್ಲಿ ಈಶ್ವರಪ್ಪ ನಮಗೆ ಪ್ರೇರಣೆ ಎಂದರು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಾಗಿದೆ. 

ಇವರನ್ನು ಇಲ್ಲಿ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು. ನಾನು ಚುನಾವಣೆ ಮುಗಿಯುವವರೆಗೆ ಇಲ್ಲಿಯೇ ಇರುತ್ತೇನೆ. ಪ್ರತಿ ಕ್ಷೇತ್ರಕ್ಕೂ ತೆರಳಿ ಮತಯಾಚನೆ ನಡೆಸುತ್ತೇನೆ ಎಂದು ತಿಳಿಸಿದರು.