ಪ್ರಯಾಣಿಕರಿಗೆ ಸಿಬಿಟಿ ಮುಕ್ತವಾಗೋದು ಎಂದು?

| Published : Jul 19 2025, 01:00 AM IST

ಸಾರಾಂಶ

ಈ ಹಿಂದೆ ಗ್ರಾಮೀಣ ಬಸ್‌ ನಿಲ್ದಾಣದ ಕಾಮಗಾರಿ ಸಹ ನಾಲ್ಕು ವರ್ಷಗಳ ಕಾಲ ತಡ ಮಾಡಿದ್ದು, ಸಾರ್ವಜನಿಕರ ಕೋಪಕ್ಕೆ ಕಾರಣವಾಗಿತ್ತು

ಬಸವರಾಜ ಹಿರೇಮಠ ಧಾರವಾಡ

ಒಂದೂವರೆ ವರ್ಷದಿಂದ ನಡೆಯುತ್ತಿರುವ ಇಲ್ಲಿಯ ನಗರ ಸಾರಿಗೆ ಬಸ್‌ ನಿಲ್ದಾಣದ (ಸಿಬಿಟಿ) ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿದ್ದು, ಸಾರ್ವಜನಿಕರಿಗೆ ಈ ನಿಲ್ದಾಣ ಯಾವಾಗ ಮುಕ್ತ ಆಗಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಬಸ್ಸು, ಕಾರುಗಳ ಸಂಚಾರ, ಅತ್ಯಧಿಕ ಸಂಖ್ಯೆಯಲ್ಲಿನ ಆಟೋಗಳು, ಬೈಕ್‌ ಹಾಗೂ ಜನದಟ್ಟಣೆಯಿಂದ ಕೂಡಿದ ಪ್ರದೇಶವಿದು. ಸಿಬಿಟಿ ಹಾಗೂ ಸುತ್ತಲಿನ ಮಾರುಕಟ್ಟೆ ಪ್ರದೇಶ ಬೆಳಗ್ಗೆ 6 ರಿಂದ ರಾತ್ರಿ 12ರ ವರೆಗೆ ಸಿಕ್ಕಾಪಟ್ಟೆ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಇದೀಗ ಸಿಬಿಟಿ ಕಾಮಗಾರಿ, ಎದುರು ಸಿಮೆಂಟ್‌ ರಸ್ತೆ ಕಾಮಗಾರಿ ಸಾರ್ವಜನಿಕರು ತೀವ್ರ ಪರಿತಪಿಸುವಂತಾಗಿದೆ. 2024ರ ಜನವರಿಯಿಂದ ಸಿಬಿಟಿಯ ಪುನರ್‌ ನಿರ್ಮಾಣ ಕಾಮಗಾರಿ ಶುರುವಾಗಿದ್ದು ಒಂದು ವರ್ಷದ ಅವಧಿಯಲ್ಲಿ ಮುಗಿಯಬೇಕಿತ್ತು. ಆದರೆ, ನಿಧಾನಗತಿಯ ಕಾಮಗಾರಿ ಹಾಗೂ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮೇಲ್ವಿಚಾರಣೆ ಇಲ್ಲದ ಹಿನ್ನೆಲೆಯಲ್ಲಿ ಒಂದೂವರೆ ವರ್ಷವಾದರೂ ಕಟ್ಟಡ ಕಾಮಗಾರಿ ಮಾತ್ರ ಅಷ್ಟಕಷ್ಟೇ.

ಈ ಹಿಂದೆ ಗ್ರಾಮೀಣ ಬಸ್‌ ನಿಲ್ದಾಣದ ಕಾಮಗಾರಿ ಸಹ ನಾಲ್ಕು ವರ್ಷಗಳ ಕಾಲ ತಡ ಮಾಡಿದ್ದು, ಸಾರ್ವಜನಿಕರ ಕೋಪಕ್ಕೆ ಕಾರಣವಾಗಿತ್ತು. ಈಗಲೂ ಸಹ ಸಿಬಿಟಿ ಕಾಮಗಾರಿಯಲ್ಲೂ ವಿಳಂಬವಾಗುತ್ತಿದ್ದು, ಕಾಮಗಾರಿ ಮುಕ್ತಾಯದ ಗಡುವಿಗೆ ಬೆಲೆಯೇ ಇಲ್ಲದಾಗಿದೆ. ಸದ್ಯ ಸಿಬಿಟಿಯಲ್ಲಿ ನಿಲ್ಲಬೇಕಿದ್ದ ಬಸ್ಸುಗಳು ನಗರದ ವಿವಿಧೆಡೆ ಹರಿದು ಹಂಚಿ ಹೋಗಿವೆ.ಎಲ್‌ಇಎ ಕ್ಯಾಂಟೀನ್‌ ಬಳಿ, ಕಿಟೆಲ್‌ ಕಾಲೇಜು, ಲೋಕಾಯುಕ್ತ ಕಚೇರಿ ಬಳಿ ತಾತ್ಕಾಲಿಕ ನಿಲ್ದಾಣಗಳನ್ನಾಗಿ ಮಾಡಿಕೊಂಡು ಸಂಚರಿಸುತ್ತಿವೆ. ಈ ಎಲ್ಲ ಪ್ರದೇಶಗಳಲ್ಲಿ ತೀವ್ರ ಬಸ್ಸುಗಳ ಸಂಚಾರದಿಂದ ದಟ್ಟಣೆಯಾಗುತ್ತಿದೆ. ಜತೆಗೆ ಇದರ ಲಾಭ ಆಟೋಗಳು ಪಡೆದುಕೊಳ್ಳುತ್ತಿದ್ದು ದುಬಾರಿ ಬೆಲೆಯನ್ನು ಪ್ರಯಾಣಿಕರು ತೆರಬೇಕಿದೆ.

ಧಾರವಾಡ ನಗರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದು, ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ನಿತ್ಯ 50 ಸಾವಿರ ಪ್ರಯಾಣಿಕರು ನಗರ ಸಾರಿಗೆಯಲ್ಲಿಯೇ ಸಂಚರಿಸುತ್ತಾರೆ. ಇಷ್ಟಾಗಿಯೂ ತಾತ್ಕಾಲಿಕ ಬಸ್‌ ನಿಲ್ದಾಣಗಳಲ್ಲಿ ಆಸನ ವ್ಯವಸ್ಥೆ ಇಲ್ಲ, ಫಲಕವಿಲ್ಲ, ಶೌಚಾಲಯವೂ ಇಲ್ಲ. ಪರ ಊರಿನ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಬಸ್‌ಗಳು ಎಲ್ಲಿ ನಿಲ್ಲುತ್ತವೆ ಎಂಬುದು ಗೊತ್ತಾಗದೇ ಆಟೋ ಹಾಗೂ ಟಂಟಂ ಹತ್ತುವ ಸ್ಥಿತಿ ಉಂಟಾಗಿದೆ ಎಂದು ಸ್ಥಳೀಯ ನಿವಾಸಿ ಗುರುರಾಜ ಪಿಸೆ ಬೇಸರ ವ್ಯಕ್ತಪಡಿಸಿದರು.

ಒಟ್ಟಾರೆ, ಸಿಬಿಟಿ ಕಾಮಗಾರಿ ಸದ್ಯ ಶೇ. 70ರಷ್ಟು ಮುಗಿದಿದ್ದು, ಇನ್ನಾದರೂ ಜೋರು ಪಡೆದುಕೊಂಡು ಆದಷ್ಟು ಶೀಘ್ರ ಮುಕ್ತಾಯಗೊಂಡು ಬಸ್‌ ನಿಲ್ದಾಣವು ಮುಕ್ತವಾದರೆ ಮಾತ್ರ ಸಂಚಾರ ದಟ್ಟಣೆ, ಆಟೋಗಳ ಕಿರಿಕಿರಿ, ಟ್ರಾಫಿಕ್‌ ಸಮಸ್ಯೆಗಳಿಗೆಲ್ಲವೂ ಪರಿಹಾರ ದೊರೆಯಲಿದೆ.

ಏನೇನಿವೆ ನಿಲ್ದಾಣದಲ್ಲಿ?

ಈ ನಗರ ಬಸ್‌ ನಿಲ್ದಾಣದಲ್ಲಿ ಮುಖ್ಯ ಕಟ್ಟಡ, ವಿಶ್ರಾಂತಿ ಕೊಠಡಿ, ಸಂಚಾರ ನಿಯಂತ್ರಣಾ ಕೊಠಡಿ, ನಿಲುಗಡೆಯ ನಾಲ್ಕು ಅಂಕಣಗಳು, ಆಸನ ವ್ಯವಸ್ಥೆ, ಮೇಲಿನ ಅಂತಸ್ತುಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಉಪಾಹಾರ ಗೃಹ, ಪ್ರತ್ಯೇಕ ಶೌಚಾಲಯಗಳು ಬರಲಿವೆ. ಒಟ್ಟಾರೆ ಈ ಕಾಮಗಾರಿ ₹ 13.11 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ.