ಗಡಿಜಿಲ್ಲೆ ಚಾ.ನಗರದ ಅಭಿವೃದ್ಧಿ ಬಾಗಿಲು ತೆರೆಯುವುದೇ?

| Published : Apr 24 2025, 12:03 AM IST

ಸಾರಾಂಶ

ಆಡಳಿತ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಕೇಂದ್ರಿಕೃತವಾಗಿರಬಾರದು, ರಾಜ್ಯದ ಗಡಿ ಮತ್ತು ಕಾಡಂಚಿನ ಪ್ರದೇಶಕ್ಕೂ ತಲುಪಬೇಕು ಎಂಬ ಮಹತ್ವಾಕಾಂಕ್ಷೆಯಿಂದ ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣವಾದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ.

ದೇವರಾಜು ಕಪ್ಪಸೋಗೆಕನ್ನಡಪ್ರಭ ವಾರ್ತೆ ಚಾಮರಾಜನಗರಆಡಳಿತ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಕೇಂದ್ರಿಕೃತವಾಗಿರಬಾರದು, ರಾಜ್ಯದ ಗಡಿ ಮತ್ತು ಕಾಡಂಚಿನ ಪ್ರದೇಶಕ್ಕೂ ತಲುಪಬೇಕು ಎಂಬ ಮಹತ್ವಾಕಾಂಕ್ಷೆಯಿಂದ ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣವಾದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ.

ಗಡಿ ಜಿಲ್ಲೆಯ ಜನತೆಯ ಬಹು ನಿರೀಕ್ಷಿತ 2025ನೇ ಸಾಲಿನ 9ನೇ ಸಚಿವ ಸಂಪುಟ ಸಭೆ ನಡೆಸಲು ಜರ್ಮನ್‌ ಟೆಂಟ್‌ ಹಾಕಿ ಸಿದ್ಧತೆ ನಡೆಸಲಾಗಿದ್ದು, ಮಹದೇಶ್ವರ ಬೆಟ್ಟಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ನವವಧುವಿನಂತೆ ಸಜ್ಜಾಗಿ ಕಂಗೊಳಿಸುತ್ತಿದೆ. ರಾಜಧಾನಿಯಿಂದ ಅಧಿಕಾರಿ ವರ್ಗ ಮತ್ತು ಕೆಲ ಸಚಿವರು ದೌಡಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.ಚಾಮರಾಜನಗರದಲ್ಲಿ ಜಿಲ್ಲೆಗೆ ಚಾಲನೆ ನೀಡಿದ್ದ ಸಿದ್ದು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರಿನಷ್ಟೇ ಚಾಮರಾಜನರ ಜಿಲ್ಲೆಯ ಬಗ್ಗೆ ಒಲವು ಹೊಂದಿದ್ದು, ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಬರಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲೇ 1997ರಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ತಾವೇ ಚಾಮರಾಜನಗರದಲ್ಲೇ ನೂತನ ಜಿಲ್ಲೆಗೆ ಚಾಲನೆ ನೀಡಿದ್ದರು. ಇದೀಗ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಿದ್ದು, ಇದರ ಮೂಲಕ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಬಾಗಿಲು ತೆರೆಯಲಿದೆ ಎಂಬ ನಿರೀಕ್ಷೆಯನ್ನು ಜಿಲ್ಲೆಯ ಜನತೆ ಹೊಂದಿದ್ದಾರೆ.

ಬಿಳಿಗಿರಂಗನಬೆಟ್ಟದಲ್ಲೂ ನಡೆದಿತ್ತು ಸಚಿವ ಸಂಪುಟ ಸಭೆ:ಈ ಹಿಂದೆ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬಿಳಿಗಿರಿರಂಗನಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಆರಾಧ್ಯ ದೈವ ಮಲೆಮಹದೇಶ್ವರ ಬೆಟ್ಟದ ಪ್ರಕೃತಿ ಮಡಿಲಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಮಹದೇಶ್ವರ ಬೆಟ್ಟದ ಸುತ್ತಲಿನ ಕಾಡಿನಲ್ಲಿ ವಾಸಿಸುವ ಮಾದಪ್ಪನನ್ನು ಪೂಜಿಸುವುದನ್ನೇ ಕಾಯಕ ಮಾಡಿಕೊಂಡಿರುವ ಬೇಡಗಂಪಣರು ಮತ್ತು ಬುಡಕಟ್ಟು ಸೋಲಿಗ ಜನರಿಗೆ ವಿಶೇಷ ಪ್ಯಾಕೇಜ್‌ ಘೋಷಣೆಯ ನಿರೀಕ್ಷೆ ಹೊಂದಲಾಗಿದೆ.

ನೀರಾವರಿ ಸೌಲಭ್ಯದಿಂದ ವಂಚಿತವಾಗಿ ಬಹುತೇಕ ಮಳೆಯಾಶ್ರಿತ ಪ್ರದೇಶವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯ ಎಲ್ಲಾ ಭಾಗದ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಜೊತೆಗೆ ಎಲ್ಲಾ ಚಾನಲ್‌ಗಳ ಆಧುನೀಕರಣಕ್ಕೆ ವಿಶೇಷ ನೆರವಿನ ನಿರೀಕ್ಷೆ ಮಾಡಲಾಗಿದೆ.ಮ್ಯೂಸಿಯಂಗೆ ಚಾಲನೆ:

ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಮಹದೇಶ್ವರ ಸ್ವಾಮಿಯ ಚರಿತ್ರೆಯನ್ನೊಳಗೊಂಡ ಮ್ಯೂಸಿಯಂಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಇದಲ್ಲದೇ ವಜ್ರಮಲೆ ಭವನ ವಸತಿ ಗೃಹ (೩೭೬ ಕೊಠಡಿ), ಸಮಗ್ರ ಒಳಚರಂಡಿ ಯೋಜನೆ, ಒಂದು ಮೆಗಾ ವ್ಯಾಟ್ ಸೋಲಾರ್ ಪವರ್‌ಪ್ಲಾಂಟ್, ದೊಡ್ಡಕೆರೆ (ತೆಪ್ಪೋತ್ಸವ ಕಲ್ಯಾಣಿ) ಜೀರ್ಣೋದ್ದಾರ, ವಜ್ರಮಲೆ ಭವನ ವಸತಿ ಗೃಹದ ರಸ್ತೆ ತಡೆಗೋಡೆ, ಶ್ರೀ ಮಲೆಮಹದೇಶ್ವರಸ್ವಾಮಿ ಪ್ರತಿಮೆಯವರೆಗೆ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ, ಪ್ರಾಧಿಕಾರದ ವತಿಯಿಂದ ನಿರ್ಮಿಸಿದ ಶ್ರೀ ಸಾಲೂರು ಮಠದ ವೇದಾಗಮ ಪಾಠಶಾಲೆಗೂ ಚಾಲನೆ ಸಿಗಲಿದೆ.ಅತ್ಯಾಧುನಿಕ ದಾಸೋಹ ಭವನಕ್ಕೂ ಶಂಕು:ಮಹದೇಶ್ವರ ಬೆಟ್ಟದಲ್ಲಿ ಸುಮಾರು 4 ಸಾವಿರ ಜನರು ಕುಳಿತುಕೊಳ್ಳುವಂತಹ ಅತ್ಯಾಧುನಿಕ ದಾಸೋಹ ಭವನ ನಿರ್ಮಾಣ, ರಾಜಗೋಪುರದ ಎದುರು ತಂಗುದಾಣ, ಸ್ವಾಗತ ಕಮಾನು, ಆಲಂಬಾಡಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಡಾರ್ಮಿಟರಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಎರಡು ದಿನ ಜಿಲ್ಲಾ ಪ್ರವಾಸ: ಮುಖ್ಯಮಂತ್ರಿ ಸಿದ್ದರಾಮಯ್ಯ ಏ.೨೪, ೨೫ ರಂದು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಏ.೨೪ರಂದು ಬೆಳಗ್ಗೆ ೧೧.೩೦ ಗಂಟೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ, ಮಧ್ಯಾಹ್ನ ೧೨ ಗಂಟೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ೨೦೨೫ನೇ ಸಾಲಿನ ೯ನೇ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ ೩ ಗಂಟೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸುವರು. ಬಳಿಕ ಮಲೆಮಹದೇಶ್ವರ ಬೆಟ್ಟದಲ್ಲಿಯೇ ವಾಸ್ತವ್ಯ ಹೂಡುವರು. ಏ.೨೫ರಂದು ಬೆಳಗ್ಗೆ ೯ ಗಂಟೆಗೆ ಮಲೆ ಮಹದೇಶ್ವರ ಬೆಟ್ಟದ ಸುತ್ತೂರು ಮಠಕ್ಕೆ ಭೇಟಿ ನೀಡುವರು. ಬೆಳಗ್ಗೆ ೧೦.೩೦ ಗಂಟೆಗೆ ಹನೂರು ಪಟ್ಟಣದಲ್ಲಿ ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆ ನೇರವೇರಿಸುವರು. ಬಳಿಕ ೧೧.೩೦ ಗಂಟೆಗೆ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ಜಿಲ್ಲಾ ಕನಕ ಸಮುದಾಯ ಭವನದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ ೧೨.೧೫ ಗಂಟೆಗೆ ಚಾಮರಾಜನಗರ ಪಟ್ಟಣಕ್ಕೆ ಆಗಮಿಸಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ಶ್ರೀ ಬಸವೇಶ್ವರ ಪುತ್ಥಳಿ ಉದ್ಘಾಟನೆ ಮತ್ತು ಶ್ರೀ ಭಗೀರಥ ಮಹರ್ಷಿ, ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ಶ್ರೀ ಕನಕದಾಸರ ಪುತ್ಥಳಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ೩ ಗಂಟೆಗೆ ಮೈಸೂರಿಗೆ ತೆರಳುವರು.