ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಬಸವಂತಪ್ಪ ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಹಂಪಿ ಉತ್ಸವ ಆಚರಣೆ ಕುರಿತು ಚರ್ಚಿಸಿ ದಿನಾಂಕ ನಿಗದಿಪಡಿಸಿ ಹಂಪಿ ಉತ್ಸವ ಆಚರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸಿ.ಕೆ. ನಾಗರಾಜ ಹೊಸಪೇಟೆ

ನಾಡ ಹಬ್ಬ ಮೈಸೂರು ದಸರಾ ಆಚರಣೆಗೆ ಹಂಪಿ ಪ್ರೇರಣೆಯಾಗಿದ್ದು, ಮೈಸೂರ ದಸರಾ ಆಚರಣೆಗೆ ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ಸಿಕ್ಕ ಪ್ರೋತ್ಸಾಹ ಐತಿಹಾಸಿಕ ಹಂಪಿ ಉತ್ಸವ ಆಚರಣೆಗೆ ಸಿಗದಿರುವುದು ವಿಪರ್ಯಾಸದ ಸಂಗತಿ.

ಮೈಸೂರು ದಸರಾ ಆಚರಣೆ ಮಾದರಿಯಲ್ಲಿ ಹಂಪಿ ಉತ್ಸವ ಆಚರಣೆಗೂ ನಿರ್ದಿಷ್ಟ ದಿನಾಂಕ ನಿಗದಿ ಪಡಿಸಿ ಅದೇ ದಿನಾಂಕದಂದು ಹಂಪಿ ಉತ್ಸವ ಆಚರಣೆ ಮಾಡಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಈ ವರ್ಷದಿಂದ ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ತಪ್ಪದೇ ಆಚರಣೆ ಮಾಡಬೇಕು ಎಂದು ಕಲಾಭಿಮಾನಿಗಳ ಅಭಿಪ್ರಾಯವಾಗಿದೆ.

ಪ್ರತಿ ವರ್ಷ ನವೆಂಬರ್‌ 3, 4 ಮತ್ತು 5ರಂದು ಹಂಪಿ ಉತ್ಸವ ಆಚರಿಸಬೇಕು ಎನ್ನುವ ಒತ್ತಾಯವಾಗಿದ್ದರಿಂದ ಕಳೆದ ಬಾರಿ ಹಂಪಿ ಉತ್ಸವ ಉದ್ಘಾಟನೆಗೆ ಆಗಮಿಸಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಾರಿಯೂ ಹಂಪಿ ಉತ್ಸವವನ್ನು ನವೆಂಬರ್‌ 3, 4 ಮತ್ತು 5 ರಂದು ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಬಸವಂತಪ್ಪ ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಹಂಪಿ ಉತ್ಸವ ಆಚರಣೆ ಕುರಿತು ಚರ್ಚಿಸಿ ದಿನಾಂಕ ನಿಗದಿಪಡಿಸಿ ಹಂಪಿ ಉತ್ಸವ ಆಚರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ನವೆಂಬರ್‌ ತಿಂಗಳು ಸಮೀಪಿಸುತ್ತಿದ್ದರೂ ಈವರೆಗೆ ವಿಜಯನಗರ ಜಿಲ್ಲೆಯಲ್ಲಿ ಹಂಪಿ ಉತ್ಸವದ ಮಾತುಗಳು ಕೇಳಿ ಬರುತ್ತಿಲ್ಲ.ಈ ಬಾರಿಯೂ ಬರಗಾಲ ಸೇರಿದಂತೆ ನಾನಾ ನೆಪವೊಡ್ಡಿ ಬೇರೆ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆ ಮಾಡಬಹುದು ಎನ್ನುವ ಆತಂಕ ಸ್ಥಳೀಯ ಕಲಾವಿದರು, ಸಾರ್ವಜನಿಕರಲ್ಲಿ ಎದುರಾಗಿದೆ.

ವಿಜಯನಗರದ ಗತ ವೈಭವ ಮರುಕಳಿಸುವಂತೆ ಹಂಪಿಯಲ್ಲಿನ ಸ್ಮಾರಕಗಳ ಶೈಲಿಯಲ್ಲಿ ಹಂಪಿ ಉತ್ಸವದ ವೇದಿಕೆ ನಿರ್ಮಿಸುವ ಮೂಲಕ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಇದುವರೆಗೂ ಹಂಪಿ ಉತ್ಸವ ಕುರಿತು ಧ್ವನಿ ಎತ್ತದೇ ಮೌನವಾಗಿರುವುದು ನೋಡಿದರೆ ಹಂಪಿ ಉತ್ಸವ ಆಚರಣೆ ನವಂಬರ್‌ನಲ್ಲಿ ನಡೆಯುವುದು ಅನುಮಾನ ಮೂಡಿಸುತ್ತಿದೆ. ಹಿಂದಿನಂತೆ ಜನವರಿ ಅಥವಾ ಫೆಬ್ರವರಿಯಲ್ಲಿ ಕಾಟಾಚಾರಕ್ಕೆ ಹಂಪಿ ಉತ್ಸವ ನಡೆಸುವ ಲಕ್ಷಣಗಳು ಗೋಚರಿಸುತ್ತಿವೆ.

ನವೆಂಬರ್‌ ತಿಂಗಳಲ್ಲಿ ಹಂಪಿ ಉತ್ಸವ ನಡೆಯಬಹುದು ಎಂದು ಈಗಾಗಲೇ ಕಲಾವಿದರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಕಲಾಪ್ರಕಾರಗಳೊಂದಿಗೆ ನಿರಂತರ ರಂಗ ತಾಲೀಮಿನಲ್ಲಿ ಕಲಾವಿದರು ತೊಡಗಿದ್ದಾರೆ.

ಹಂಪಿ ಉತ್ಸವ ಆಚರಣೆಗೆ ತಿಂಗಳ ಮೊದಲೇ ಹಂಪಿ ಸೇರಿದಂತೆ ಜಿಲ್ಲೆಯಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತಿತ್ತು. ಕಲಾವಿದರ ಆಯ್ಕೆ, ವೇದಿಕೆ ನಿರ್ಮಾಣಕ್ಕೆ ಸಿದ್ಧತೆ ಸೇರಿದಂತೆ ಉತ್ಸವಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳು ಚುರುಕುಗೊಳ್ಳುತ್ತಿದ್ದವು. ಹಂಪಿ ಉತ್ಸವ ಆಚರಣೆಗೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಹಂಪಿ ಉತ್ಸವ ಆಚರಣೆಗಾಗಿ ಕಲಾವಿದರು, ಸಂಘ-ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಲಿದೆ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಂಪಿ ಉತ್ಸವ ಆಚರಣೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಆದೇಶ ಬಂದ ತಕ್ಷಣವೇ ಹಂಪಿ ಉತ್ಸವ ಬಗ್ಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳಲಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದ್ದಾರೆ.

ರಾಜಕೀಯ ಮುತ್ಸದ್ಧಿ ದಿ.ಎಂ.ಪಿ.ಪ್ರಕಾಶ್‌ ಅವರು ಇರುವಾಗ ಹಂಪಿ ಉತ್ಸವಕ್ಕೆ ಸಾಕಷ್ಟು ಮಾನ್ಯತೆ ಸಿಗುತ್ತಿತ್ತು. ಎಂ.ಪಿ.ಪ್ರಕಾಶ್‌ ಹಂಪಿ ಉತ್ಸವವನ್ನು ನಾಡ ಹಬ್ಬವನ್ನಾಗಿ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುತ್ತಿದ್ದರು. ಎಂ.ಪಿ.ಪ್ರಕಾಶ್‌ ನಂತರ ಹಂಪಿ ಉತ್ಸವದ ಸ್ವರೂಪವೇ ಬದಲಾಗುತ್ತಿರುವುದು ಬೇಸರದ ಸಂಗತಿ ಎಂದು ಮರಿಯಮ್ಮನಹಳ್ಳಿ ರಂಗ ಕಲಾವಿದ ಕೊಟ್ಗಿ ಮಲ್ಲನಗೌಡ ತಿಳಿಸಿದ್ದಾರೆ.