ತೆರಕಣಾಂಬಿ ವಿವಿ ಘಟಕ ಕಾಲೇಜು ಮುಚ್ಚುತ್ತಾ?

| Published : Jul 02 2025, 12:19 AM IST / Updated: Jul 02 2025, 12:20 AM IST

ಸಾರಾಂಶ

ತಾಲೂಕಿನ ತೆರಕಣಾಂಬಿ ವಿವಿ ಘಟಕ ಕಾಲೇಜಿಗೆ ಮೂಲಭೂತ ಸೌಲಭ್ಯಗಳಿಲ್ಲದ ಕಾರಣಕ್ಕೋ ಹಳ್ಳೀಲಿ ಕಾಲೇಜಿಗೆ ಹೋಗಬಾರದು ಎಂದೋ ಪ್ರಸಕ್ತ ಸಾಲಿಗೆ ಕಾಲೇಜಿನ ಪ್ರವೇಶಾತಿಗೆ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಜಿಲ್ಲಾಡಳಿತ, ಸ್ಥಳೀಯ ಶಾಸಕರು ಆಸಕ್ತಿ ತೋರದೇ ಇದ್ದರೆ ಖಂಡಿತ ತೆರಕಣಾಂಬಿ ವಿವಿ ಘಟಕ ಕಾಲೇಜು ಬೀಗ ಬೀಳೋದು ಖಚಿತ!.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ತೆರಕಣಾಂಬಿ ವಿವಿ ಘಟಕ ಕಾಲೇಜಿಗೆ ಮೂಲಭೂತ ಸೌಲಭ್ಯಗಳಿಲ್ಲದ ಕಾರಣಕ್ಕೋ ಹಳ್ಳೀಲಿ ಕಾಲೇಜಿಗೆ ಹೋಗಬಾರದು ಎಂದೋ ಪ್ರಸಕ್ತ ಸಾಲಿಗೆ ಕಾಲೇಜಿನ ಪ್ರವೇಶಾತಿಗೆ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಜಿಲ್ಲಾಡಳಿತ, ಸ್ಥಳೀಯ ಶಾಸಕರು ಆಸಕ್ತಿ ತೋರದೇ ಇದ್ದರೆ ಖಂಡಿತ ತೆರಕಣಾಂಬಿ ವಿವಿ ಘಟಕ ಕಾಲೇಜು ಬೀಗ ಬೀಳೋದು ಖಚಿತ!.

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಕಳೆದ ದಶಕದ ಹಿಂದೆ ಆರಂಭವಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಳಾಂತರಗೊಂಡಿತ್ತು. ಆಗ ಗ್ರಾಮಸ್ಥರು ತೀವ್ರತರ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಬಳಿಕ ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರಗೊಂಡ ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಅದೇ ಕಟ್ಟಡದಲ್ಲಿ ಮೈಸೂರು ವಿಶ್ವ ವಿದ್ಯಾಲಯ ಘಟಕ ಕಾಲೇಜು ಆರಂಭಿಸುವ ಆದೇಶ ಹೊರ ಬಿದ್ದಿತ್ತು.

ಆದರೀಗ ಸರ್ಕಾರ ಬದಲಾಗಿವೆ, ಶಾಸಕರೂ ಬದಲಾಗಿದ್ದಾರೆ ಅದೋನೋ ಏನೋ ತೆರಕಣಾಂಬಿ ಗ್ರಾಮದಲ್ಲಿ ಕಾಲೇಜುಗಳಿಗೆ ಉಳಿಗಾಲವಿಲ್ಲ ಎಂಬ ಮತ್ತೋಮ್ಮೆ ನಿಜವಾಗುತ್ತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪ್ರಸಕ್ತ ಸಾಲಿಗೆ ವಿವಿ ಘಟಕ ಕಾಲೇಜಿಗೆ ಬಿಸಿಎ ಮತ್ತು ಬಿಕಾಂಗೆ ಪ್ರವೇಶಾತಿ ಅವಕಾಶ ಕಲ್ಪಿಸಲಾಗಿದೆ. ಆದರೆ ಇಂದಿನ ತನಕ ಓರ್ವ ವಿದ್ಯಾರ್ಥಿಯೂ ದಾಖಲಾಗಿಲ್ಲ. ನಾಲ್ವರು ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಕಾಲೇಜಿನ ವಾತಾವರಣ ಕಂಡು ವಾಪಸ್‌ ಹೋಗಿದ್ದಾರೆ.

ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿದ್ದ ಕಟ್ಟಡವಿದೆ. ಜೊತೆಗೆ ಹೆಚ್ಚುವರಿಯಾಗಿ ಹೊಸದೊಂದು ಕಟ್ಟಡ ಕೂಡ ನಿರ್ಮಾಣಗೊಂಡು ಉದ್ಘಾಟನೆಗೂ ಸಿದ್ಧವಾಗಿದೆ. ಆದರೆ ವಿವಿಗೆ ಕಟ್ಟಡ ಇನ್ನೂ ಹಸ್ತಾಂತರವಾಗಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೆಂಚ್‌ಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಕಾಲೇಜಿಗೊಂದು ಸುತ್ತುಗೋಡೆ ಇಲ್ಲ. ವಿವಿ ಘಟಕ ಕಾಲೇಜಿಗೆ ಆಕರ್ಷಕ ನಾಮಫಲಕವೂ ಇಲ್ಲ ಇಷ್ಟೆಲ್ಲ ಸಮಸ್ಯೆಗಳ ಕಂಡ ವಿದ್ಯಾರ್ಥಿಗಳು ಕಾಲೇಜಿಗೆ ಸೇರದೆ ಗುಂಡ್ಲುಪೇಟೆ, ಮೈಸೂರು ಕಾಲೇಜುಗಳತ್ತ ಮುಖ ಮಾಡಿದ್ದಾರೆ.

ತೆರಕಣಾಂಬಿ ಘಟಕ ಕಾಲೇಜಿನಲ್ಲಿ ಬಿಎಸಿಗೆ ೪೦ ಮತ್ತು ಬಿಕಾಂ ೬೦ ಮಂದಿ ಓದಲು ಅವಕಾಶವಿದೆ. ಆದರೆ ಶೇ.೫೦ ರಷ್ಟೇಕೆ, ಹತ್ತು ಮಂದಿಯೂ ಕಾಲೇಜು ಸೇರಿಲ್ಲ. ಕೇಳಿದರೆ ಈ ಕಾಲೇಜಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ನಗರ ಪ್ರದೇಶಗಳತ್ತ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ.

ಘಟಕ ಕಾಲೇಜು ಪ್ರಾಂಶುಪಾಲ ಚೇತನ್‌ ಆರ್‌ ಮಾತನಾಡಿ, ಈ ಸಾಲಿನಲ್ಲಿ ಗುಂಡ್ಲುಪೇಟೆ ಜೆಎಸ್‌ಎಸ್‌ ಹಾಗು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಮತ್ತು ಬಿಕಾಂ ಕೋರ್ಸ್‌ ಆರಂಭಿಸಿರುವ ಕಾರಣ ತೆರಕಣಾಂಬಿ ಘಟಕ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂದರು.

ಘಟಕ ಕಾಲೇಜಿಗೆ ಸೇರಬೇಕು ಎಂದು ಪ್ರಚಾರ ಹಾಗೂ ವಿದ್ಯಾರ್ಥಿಗಳ ಮನವೊಲಿಸಿದರೂ ತೆರಕಣಾಂಬಿ ಘಟಕ ಕಾಲೇಜಿನತ್ತ ವಿದ್ಯಾರ್ಥಿಗಳ ಮುಖ ಮಾಡುತ್ತಿಲ್ಲ, ಇದನ್ನು ಗಮನಿಸಿದರೆ ಕಾಲೇಜಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ಏನು ಮಾಡೋದು ಎಂಬ ಬೇಸರವಿದೆ ಎಂದರು.

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ವಿವಿ ಘಟಕ ಕಾಲೇಜಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಬಾರದ ಹಿನ್ನಲೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿ ಕೂಡ ವಿಶೇಷ ಆಸಕ್ತಿ ವಹಿಸಿ ಘಟಕ ಕಾಲೇಜು ಆರಂಭಿಸಬೇಕಿದೆ. ಕೋಟ್ಯಾಂತರ ರು.ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲಾಗಿದೆ ಹಳೇ ಕಟ್ಟಡ ಕೂಡ ಇದೆ ಆದರೂ ವಿದ್ಯಾರ್ಥಿಗಳು ಘಟಕ ಕಾಲೇಜಿಗ ಸೇರಲು ಬರದಿದ್ದರೆ ಕಟ್ಟಡಗಳು ಪಾಳು ಬೀಳುತ್ತವೆ. ಜೊತೆಗೆ ಸ್ಥಳೀಯ ಜನರ ಮಕ್ಕಳ ಭವಿಷ್ಯಕ್ಕೂ ತೊಂದರೆ ಆಗಲಿದೆ!

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ವಿವಿ ಘಟಕ ಕಾಲೇಜಿಗೆ ಪ್ರವೇಶಾತಿ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲದ ಕಾರಣ ಚಾಮರಾಜನಗರ ವಿವಿ ತೆರಕಣಾಂಬಿ ಘಟಕ ಕಾಲೇಜಿನಲ್ಲಿ ಪಿಜಿ ಕೋರ್ಸ್‌ಯೊಂದು ಆರಂಭಿಸಿದರೆ ಕಾಲೇಜು ಉಳಿಯುತ್ತದೆ ಎಂಬ ಮಾತಿದೆ. ಪ್ರಸಕ್ತ ಸಾಲಿಗೆ ವಿವಿಯಲ್ಲಿನ ಯಾವುದಾದರೂ ಒಂದು ಪಿಜಿ ಕೋರ್ಸ್‌ ಆರಂಭಿಸಿದರೆ ಕಾಲೇಜು ಉಳಿಯುತ್ತೆ ಜೊತೆಗೆ ಹೊಸ ಕಟ್ಟಡವೂ ಬಳಕೆ ಬರುತ್ತದೆ. ಆ ಕೆಲಸ ಮಾಡಲು ಜಿಲ್ಲಾಡಳಿತ ಮನಸ್ಸು ಮಾಡುತ್ತಾ? ಸ್ಥಳೀಯ ಜನಪ್ರತಿನಿಧಿಗಳು ವಿವಿ ಮೇಲೆ ಒತ್ತಡ ತರುವ ಕೆಲಸ ಮಾಡಲಿ.

ತಾಲೂಕಿನ ತೆರಕಣಾಂಬಿ ಗ್ರಾಮದ ವಿವಿ ಘಟಕ ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗಿಲ್ಲ ಎಂಬ ಮಾಹಿತಿ ನನಗೂ ಇದೆ. ಪ್ರಸಕ್ತ ಸಾಲಿಗೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ಕಾಲೇಜು ಮುಚ್ಚಬೇಕಾಗುತ್ತದೆ. ಚಾಮರಾಜನಗರ ವಿವಿ ಜೊತೆ ಮಾತನಾಡಿ ಪರ್ಯಾಯ ವ್ಯವಸ್ಥೆ ಮಾಡುತ್ತೇನೆ.

ಎಚ್.ಎಂ.ಗಣೇಶ್‌ ಪ್ರಸಾದ್‌