ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯ ಸರ್ಕಾರ ಸೆ. 22ರಿಂದ ಅಕ್ಟೋಬರ್ 7ರ ವರೆಗೆ ನಡೆಸಲು ಉದ್ದೇಶಿಸಿರುವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಕುರಿತಂತೆ ರಾಜ್ಯದಲ್ಲಿ ಅತಿ ಹೆಚ್ಚು ಗೊಂದಲಕ್ಕೊಳಗಾಗಿರುವ ಸಮುದಾಯವೆಂದರೆ ಲಿಂಗಾಯತ. ಧರ್ಮ ಹಾಗೂ ಜಾತಿಯ ಕಾಲಂ ಬಗ್ಗೆ ವಿವಿಧ ಮಠಾಧೀಶರು, ಸಂಘಟಕರು ತಮ್ಮದೇ ಆದ ಬಗೆಯಲ್ಲಿ ವಾದ ಮಂಡಿಸುತ್ತಿದ್ದು, ಅಕ್ಷರಶಃ ಏನು ತಿಳಿಯದೇ ಇಡೀ ಲಿಂಗಾಯತ ಸಮುದಾಯವೇ ಕಂಗೆಟ್ಟಿದೆ.ಜತೆಗೆ ಸಮೀಕ್ಷೆಯೂ ಪ್ರತ್ಯೇಕ ಧರ್ಮದ ಹೋರಾಟದ ಕಿಚ್ಚು ಮತ್ತೆ ಹೊತ್ತಿಕೊಳ್ಳುವ ಲಕ್ಷಣಗಳು ದಟ್ಟವಾಗಿ ಕಾಣಿಸಲಾರಂಭಿಸಿವೆ. ಈ ನಡುವೆ ಹುಬ್ಬಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದವರು ಸೆ.19ರಂದು ನಡೆಸುತ್ತಿರುವ ಏಕತಾ ಸಮಾವೇಶ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದೇ? ಎನ್ನುವ ಜಿಜ್ಞಾಸೆ ಶುರುವಾಗಿದೆ.
ವಾದ- ಪ್ರತಿವಾದ: ಅತ್ತ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ಘೋಷಿಸುತ್ತಿದ್ದಂತೆ, ಇತ್ತ ಲಿಂಗಾಯತ ಮಠಾಧೀಶರು, ಮುಖಂಡರು, ರಾಜಕಾರಣಿಗಳು ಎಚ್ಚೆತ್ತರು. ತಮ್ಮ ತಮ್ಮ ಸಮುದಾಯದ ಜನ ಏನೆಂದು ನಮೂದಿಸಬೇಕೆಂದು ಒಂದೊಂದು ಬಗೆಯಲ್ಲಿ ತಿಳಿಸಲಾರಂಭಿಸಿದರು.ವೀರಶೈವ- ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ ಲಿಂಗಾಯತ ಧರ್ಮದ ಬೇಡಿಕೆಯ ಹೋರಾಟ ನಿಂತಿಲ್ಲ. ನಾವು ಹಿಂದೂಗಳಲ್ಲ. ವೀರಶೈವ ಲಿಂಗಾಯತ ಎರಡು ಒಂದೇ. ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಯಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಲೆಂದು ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭೆ ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶವನ್ನು ಏರ್ಪಡಿಸಿದೆ.
ಇನ್ನು ಇದಕ್ಕೆ ಸಡ್ಡು ಹೊಡೆದಿರುವ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ -ಲಿಂಗಾಯತ ಎರಡು ಒಂದೇ ಅಲ್ಲ. ವೀರಶೈವ ಎನ್ನುವುದು ಲಿಂಗಾಯತದಲ್ಲಿ ಒಂದು ಒಳಪಂಗಡ ಅಷ್ಟೇ ಎಂದು ಪ್ರತಿಪಾದಿಸುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮವೇ ಆಗಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡಿರುವ ಬಸವ ಸಂಸ್ಕೃತಿ ಹೆಸರಲ್ಲಿ ರಾಜ್ಯಾದ್ಯಂತ ಯಾತ್ರೆ ನಡೆಸುತ್ತಾ ಜಾಗೃತಿ ಮೂಡಿಸುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಪಡೆಯುವುದೇ ನಮ್ಮ ಗುರಿ ಎಂದು ಘೋಷಿಸಿದೆ. ಜತೆಗೆ ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಬೇಕು. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಬೇಕು ಎಂದು ಹೇಳಿಕೊಳ್ಳುತ್ತಿದೆ.ಈ ನಡುವೆ ಪಂಚಮಸಾಲಿ ಸಮುದಾಯದ ಪೀಠಾಧ್ಯಕ್ಷರುಗಳಿಬ್ಬರು (ಕೂಡಲಸಂಗಮ, ಹರಿಹರ) ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಿ. ಜಾತಿಯ ಕಾಲಂನಲ್ಲಿ ಲಿಂಗಾಯತ ಹಾಗೂ ಉಪಪಂಗಡ ಎಂದು ಬರೆಯಿಸಬೇಕು ಎಂದು ಹೇಳಿಕೊಳ್ಳುತ್ತಾ ಸಾಗುತ್ತಿದ್ದಾರೆ.
ಈ ನಡುವೆ ಕೆಲ ಜನಪ್ರತಿನಿಧಿಗಳು, ಜನಗಣತಿಯಲ್ಲಿ ಏಳು ಧರ್ಮಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಬೌದ್ಧ, ಜೈನ್ ಸೇರಿದಂತೆ ಏಳು ಧರ್ಮಗಳು ಹಾಗೂ ಇನ್ನೊಂದು ಇತರೆ ಎಂಬುದು ಉಲ್ಲೇಖವಿದೆ. ಅಲ್ಲಿ ಲಿಂಗಾಯತ ಆಗಲಿ, ವೀರಶೈವ- ಲಿಂಗಾಯತ ಎಂಬುದಾಗಲಿ ಇಲ್ಲ. ಹೀಗಾಗಿ ಹಿಂದೂ ಎಂಬುದನ್ನೇ ನಮೂದಿಸಬೇಕು. ಇತರೆ ಎಂದು ನಮೂದಿಸಿದರೆ ಅದು ಲೆಕ್ಕಕ್ಕೆ ಬರಲ್ಲ ಎಂದು ವಾದಿಸುತ್ತಿದ್ದಾರೆ.ಅಗತ್ಯವೇ ಇರಲಿಲ್ಲ: ಇನ್ನು ಒಂದು ಬಣವಂತೂ ಸಮೀಕ್ಷೆ ಹೆಸರಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಹುನ್ನಾರ. ಜಾತಿ ಗಣತಿ ಆಗಲಿ, ಜನಗಣತಿಯಾಗಲಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರ ಸಮೀಕ್ಷೆ ಹೆಸರಲ್ಲಿ ಸುಖಾ ಸುಮ್ಮನೆ ಗೊಂದಲ ಹುಟ್ಟುಹಾಕಲು, ಲಿಂಗಾಯತರ ಜನಸಂಖ್ಯೆ ಕಡಿಮೆ ತೋರಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಸಹಜವಾಗಿವೆ. ಜತೆಗೆ ಸಮೀಕ್ಷೆ ಬರೀ 15 ದಿನಗಳಲ್ಲಿ ನಡೆಸುವುದು ಅಸಾಧ್ಯದ ಮಾತು. ಕನಿಷ್ಠವೆಂದರೂ 6 ತಿಂಗಳಾದರೂ ಬೇಕಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಹುನ್ನಾರ ಎಂದು ಅವರದೇ ಪಕ್ಷದ ಕೆಲ ಹಿರಿಯ ಮುಖಂಡರು ಆರೋಪಿಸುತ್ತಾರೆ.
ಏನೇ ಆಗಲಿ, ಒಟ್ಟಿನಲ್ಲಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವುದಂತೂ ಸತ್ಯ. ಈ ಎಲ್ಲದರ ನಡುವೆ ಲಿಂಗಾಯತ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಹುಬ್ಬಳ್ಳಿಯಲ್ಲಿನ ಏಕತಾ ಸಮಾವೇಶ ಯಶಸ್ವಿಯಾಗುತ್ತದೆಯೇ? ಸಮುದಾಯದಲ್ಲಿ ಒಗ್ಗಟ್ಟು ಸಾಧಿಸುವಂತಹ ಸಂದೇಶ ಹೊರಹೊಮ್ಮುವುದೇ ಎಂಬ ಪ್ರಶ್ನೆಯೂ ಕಾಡುತ್ತಿರುವುದು ಸುಳ್ಳಲ್ಲ.