ವಿವಿ ಸಾಗರ ಜಲಾಶಯ ಮತ್ತೊಮ್ಮೆ ಕೋಡಿ ಬೀಳಲಿದೆಯೇ?

| Published : Sep 03 2024, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯ ಮತ್ತೊಮ್ಮೆ ತುಂಬಿ ಹರಿಯಲಿದೆ ಎಂಬ ಆಶಾಭಾವನೆ ತಾಲೂಕಿನ ರೈತರಲ್ಲಿ ಮೂಡುತ್ತಿದೆ. ಭದ್ರಾ ಜಲಾಶಯದಿಂದ ಬರುವ 700 ಕ್ಯೂಸೆಕ್ ನೀರಿನ ಜತೆಗೆ ಎತ್ತಿನಹೊಳೆಯಿಂದ ಬರಲಿರುವ 1500 ಕ್ಯೂಸೆಕ್ ನೀರು ಸೇರಿ ಮಳೆರಾಯನ ಕೃಪಾಕಟಾಕ್ಷವೂ ದೊರೆತರೆ ಜಲಾಶಯ ಮತ್ತೊಮ್ಮೆ ಕೋಡಿ ಬೀಳುವುದರಲ್ಲಿ ಸಂಶಯವಿಲ್ಲ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯ ಮತ್ತೊಮ್ಮೆ ತುಂಬಿ ಹರಿಯಲಿದೆ ಎಂಬ ಆಶಾಭಾವನೆ ತಾಲೂಕಿನ ರೈತರಲ್ಲಿ ಮೂಡುತ್ತಿದೆ. ಭದ್ರಾ ಜಲಾಶಯದಿಂದ ಬರುವ 700 ಕ್ಯೂಸೆಕ್ ನೀರಿನ ಜತೆಗೆ ಎತ್ತಿನಹೊಳೆಯಿಂದ ಬರಲಿರುವ 1500 ಕ್ಯೂಸೆಕ್ ನೀರು ಸೇರಿ ಮಳೆರಾಯನ ಕೃಪಾಕಟಾಕ್ಷವೂ ದೊರೆತರೆ ಜಲಾಶಯ ಮತ್ತೊಮ್ಮೆ ಕೋಡಿ ಬೀಳುವುದರಲ್ಲಿ ಸಂಶಯವಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.6 ರ ಗೌರಿಹಬ್ಬದಂದು ಎತ್ತಿನ ಹೊಳೆ ನೀರು ಮೇಲೆತ್ತುವ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. 48 ಕಿಮೀ ತೆರೆದ ಕಾಲುವೆಯಲ್ಲಿ ವೇದ ವ್ಯಾಲಿ ಮೂಲಕ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತದೆ. ಹಾಗಾಗಿ ತಾಲೂಕಿನ ಮತ್ತು ಜಿಲ್ಲೆಯ ಜನರು ವಿವಿ ಸಾಗರ ಕೋಡಿ ಬೀಳುವ ದೃಶ್ಯವನ್ನು ಆದಷ್ಟು ಶೀಘ್ರ ಕಣ್ತುಂಬಿಕೊಳ್ಳುವ ತವಕದಲ್ಲಿದ್ದಾರೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 118.08 ರಷ್ಟಿದ್ದು, ಜುಲೈ ತಿಂಗಳ ಅಂತ್ಯದಲ್ಲಿ 113.50 ಅಡಿಯಷ್ಟಿದ್ದ ನೀರಿನ ಮಟ್ಟ ಈಗ 118.08 ಕ್ಕೇರಿದೆ.

ಒಂದೂವರೆ ತಿಂಗಳ ಅಂತರದಲ್ಲಿ ಸುಮಾರು 5 ಅಡಿಯಷ್ಟು ನೀರು ಶೇಖರಣೆಯಾಗಿದ್ದು, ಭದ್ರಾದ 700 ಕ್ಯೂಸೆಕ್ ನೀರಿನ ಜತೆಗೆ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿತ್ತು. ಬರಗಾಲದ ಪ್ರದೇಶ ಎಂದು ಕರೆಸಿಕೊಳ್ಳುವ ಈ ಭಾಗದಲ್ಲಿ ವಿವಿ ಸಾಗರ ಜಲಾಶಯವೇ ನೀರಿಗೆ ಆಧಾರ ಸ್ಥoಭವಾಗಿದೆ.

ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ವ್ಯಾಪ್ತಿಯ ಜನರ ಕುಡಿಯುವ ನೀರಿನ ಬವಣೆ ನೀಗಿಸಿದೆ.ಈಗ ಎತ್ತಿನಹೊಳೆಯ 1500 ಕ್ಯೂಸೆಕ್ಸ್ ನೀರು, ಭದ್ರಾದ 700 ಕ್ಯೂಸೆಕ್ ನೀರು ಸೇರಿ ಮತ್ತೆ ಮಳೆಯೇನಾದರೂ ಒಲಿದರೆ ಜಿಲ್ಲೆಯ ಜನ ಕೇವಲ ಎರಡೇ ವರ್ಷದಲ್ಲಿ ಕೆರೆ ಕೋಡಿ ಬೀಳುವ ಸುಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

1933 ರಲ್ಲಿ ಕೋಡಿ ಬಿದ್ದಿದ್ದ ಕೆರೆಯು ಆನಂತರ 89 ವರ್ಷಗಳ ನಂತರ 2022 ರಲ್ಲಿ ಕೋಡಿ ಹರಿದಿತ್ತು. ಈಗಾಗಲೇ ಭದ್ರಾ ಜಲಾಶಯವು ತುಂಬಿದ್ದು 2 ಟಿಎಂಸಿ ನೀರು ಬಿಡಲಾಗುತ್ತದೆ ಎನ್ನಲಾಗಿದ್ದು, ದಿನವೂ 700 ಕ್ಯೂಸೆಕ್ ನಂತೆ ಇನ್ನೂ ಒಂದು ತಿಂಗಳ ಕಾಲ ಭದ್ರೆ ವಿವಿ ಸಾಗರಕ್ಕೆ ಹರಿಯಲಿದ್ದಾಳೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಯಾವ ಮೂಲದಿಂದಲಾದರೂ ವಿವಿ ಸಾಗರದ ಒಡಲು ತುಂಬಲಿ ಎಂದು ರೈತರು ಕಾಯುತ್ತಿದ್ದಾರೆ.

ಜಲಾಶಯದ ಬಗ್ಗೆ ಒಂದಿಷ್ಟು....

ತಾಲೂಕಿನಿಂದ 20 ಕಿಮೀ ದೂರವಿರುವ ವಿವಿ ಸಾಗರ ಜಲಾಶಯ ಜಿಲ್ಲೆಯ ಜೀವನಾಡಿ ಕೆರೆಯಾಗಿದೆ. 135 ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿರುವ ಜಲಾಶಯ 50 ಮೀ ಎತ್ತರವಿದೆ. ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಆಗುತ್ತದೆ. ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ಎದ್ದು ನಿಂತ ಜಲಾಶಯ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲೂಕುಗಳಿಗೆ ಕುಡಿವ ನೀರು ಒದಗಿಸುತ್ತದೆ. ಸಿಮೆಂಟ್ ಬಳಸದೆ ಕೇವಲ ಗಾರೆಯಿಂದಲೇ ನಿರ್ಮಾಣವಾದ ಜಲಾಶಯವನ್ನು ಕಳೆದ ವರ್ಷ ಭೇಟಿ ನೀಡಿ ಪರಿಶೀಲಿಸಿದ ತಜ್ಞರು ಸುಭದ್ರವಾಗಿದೆ ಎಂದಿದ್ದರು. 1932 ರಲ್ಲಿ 125.50 ಅಡಿ, 1933 ರಲ್ಲಿ 135.25 ಅಡಿ, 1934 ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಿಸಿತ್ತು. ತದನಂತರ 1956 ರಲ್ಲಿ 125 ಅಡಿ, 1957 ರಲ್ಲಿ 125.05 ಅಡಿ, 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಇದಾದ ಬಳಿಕ 2000 ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. 2022 ರಲ್ಲಿ 130 ಅಡಿ ತುಂಬಿ ಕೋಡಿ ಬಿದ್ದು ಹೊಸ ದಾಖಲೆಯನ್ನು ನಿರ್ಮಿಸಿತ್ತು.