ಫೆ.10ರಂದು ಕುಡಿಯುವ ನೀರಿನ ಜವಾಬ್ದಾರಿ ಹೊತ್ತಿರುವ ಎಲ್ ಆ್ಯಂಡ್ ಟಿ ಹಾಗೂ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಜತೆಗೆ ಮಹಾನಗರ ಪಾಲಿಕೆ ಆಡಳಿತ ಮಂಡಳಿ ನಡೆಸಿದ ಸಭೆಯಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಸಲಾಗುವುದು ಎಂದು ವಾಗ್ದಾನ ಮಾಡಿತ್ತು.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಮಾರ್ಚ್ ಅಂತ್ಯಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಪ್ರತಿ ವಾರ್ಡ್‌ಗೆ (ನಿರಂತರ ನೀರು ಪೂರೈಕೆ ವಾರ್ಡ್ ಬಿಟ್ಟು) 3 ದಿನಗಳಿಗೊಮ್ಮೆ ನೀರು ಕೊಡಲು ಸಾಧ್ಯವೇ?.
ಇಂಥ ಪ್ರಶ್ನೆ ಇದೀಗ ಮಹಾನಗರ ನಿವಾಸಿಗಳಲ್ಲಿ ಹುಟ್ಟುಕೊಂಡಿದೆ. ಫೆ.10ರಂದು ಕುಡಿಯುವ ನೀರಿನ ಜವಾಬ್ದಾರಿ ಹೊತ್ತಿರುವ ಎಲ್ ಆ್ಯಂಡ್ ಟಿ ಹಾಗೂ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಜತೆಗೆ ಮಹಾನಗರ ಪಾಲಿಕೆ ಆಡಳಿತ ಮಂಡಳಿ ನಡೆಸಿದ ಸಭೆಯಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಸಲಾಗುವುದು ಎಂದು ವಾಗ್ದಾನ ಮಾಡಿತ್ತು. ಹೀಗಾಗಿ ಈ ಪ್ರಶ್ನೆ ಹುಟ್ಟುಕೊಂಡಿದೆ.ಸದ್ಯ ಏನಿದೆ ಪರಿಸ್ಥಿತಿ?:
ಮಹಾನಗರದಲ್ಲಿ 82 ವಾರ್ಡ್‌ಗಳಿದ್ದು 13 ವಾರ್ಡ್‌ಗಳಲ್ಲಿ 24/7, 25 ವಾರ್ಡ್‌ಗಳಿಗೆ ನಿತ್ಯ ನೀರು ಪೂರೈಕೆಯಾಗುತ್ತಿದೆ. ಇನ್ನುಳಿದಂತೆ 8 ವಾರ್ಡ್‌ಗಳಿಗೆ 3 ದಿನ, 9 ವಾರ್ಡ್‌ಗಳಿಗೆ 4 ದಿನ, 8 ವಾರ್ಡ್‌ಗೆ 5 ದಿನ, 9 ವಾರ್ಡ್‌ಗೆ 6 ದಿನ, 10 ವಾರ್ಡ್‌ಗೆ 7 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದು ಕೆಯುಐಡಿಎಫ್‌ಸಿ ತಿಳಿಸುತ್ತದೆ. ಆದರೆ, ಕೆಲವು ವಾರ್ಡ್‌ಗಳಿಗೆ ಕೆಲ ಸಲ 9ರಿಂದ10 ದಿನಗಳಾದರೂ ನೀರು ಬರುವುದಿಲ್ಲ. ಅದಕ್ಕೆ ಇವರು ಕೊಡುವ ಉತ್ತರ ವಿದ್ಯುತ್ ಸಮಸ್ಯೆ, ತುರ್ತು ನಿರ್ವಹಣೆ ಕೆಲಸ ಎಂಬುದು.ಈಗ ಎಷ್ಟು ಬೇಕು?:
ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಸದ್ಯ ಮಲಪ್ರಭಾ ನದಿಯಿಂದ 200 ಎಂಎಲ್‌ಡಿ (ಮಿಲಿಯನ್ ಲೀಟರ್ಸ್ ಪರ್ ಡೇ), ನೀರಸಾಗರದಿಂದ 20 ಎಂಎಲ್‌ಡಿ ಲಭ್ಯವಾಗುತ್ತದೆ. ಇದರಲ್ಲಿ ಸದ್ಯ ನಿರ್ವಹಿಸಲಾಗುತ್ತಿದೆ. ಇದೀಗ ಮಲಪ್ರಭಾದಿಂದ 43 ಎಂಎಲ್‌ಡಿ ನೀರು ಹೆಚ್ಚುವರಿ ತೆಗೆದುಕೊಳ್ಳುತ್ತಿದೆ. ಈ ನೀರು ಬಂದರೆ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ಕೊಡಲು ಯಾವುದೇ ಸಮಸ್ಯೆಯಿಲ್ಲ. ಈ ನೀರು ಪಡೆಯಲೆಂದೇ ಅಮ್ಮಿನಬಾವಿಯಲ್ಲಿ ನೀರು ಶುದ್ಧೀಕರಣ ಘಟಕ ಮಾಡಲಾಗಿದೆ. ಇದರ ಎಲೆಕ್ಟ್ರಿಕಲ್ ಕೆಲಸ ನಡೆಯುತ್ತಿದೆ ಅಷ್ಟೇ. ಸವದತ್ತಿಯಿಂದ ಅಮ್ಮಿನಬಾವಿ ವರೆಗಿನ 29.51 ಕಿಮೀ, ಅಮ್ಮಿನಬಾವಿಯಿಂದ ರಾಯಾಪುರ ವರೆಗಿನ 17.9 ಕಿಮೀ ಪೈಪ್‌ಲೈನ್ ಅಳವಡಿಸಲಾಗಿದೆ. ಅಲ್ಪಸ್ವಲ್ಪ ಕೆಲಸಗಳು ಬಾಕಿ ಉಳಿದಿವೆ. ಅವು ಈ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿವೆ. ಹೀಗಾಗಿ 3-4 ದಿನಗಳಿಗೊಮ್ಮೆ ನೀರು ಪೂರೈಕೆ ಕಷ್ಟವಾಗಲ್ಲ. ಪ್ರಾಯೋಗಿಕವಾಗಿ ಆರಂಭಿಸಿ ಒಂದೆರಡು ಸಲ ನೀರು ಪೂರೈಸುವುದು ಯಶಸ್ವಿಯಾದರೆ ಮುಂದೆ ಸಮಸ್ಯೆಯಾಗದು. ಏಪ್ರಿಲ್ ಮೊದಲ ಅಥವಾ 2ನೆಯ ವಾರದಲ್ಲಿ 3 ಅಥವಾ 4 ದಿನಕ್ಕೊಮ್ಮೆ ನೀರು ಪೂರೈಕೆ ಖಚಿತ ಎಂಬ ವಿಶ್ವಾಸ ಪಾಲಿಕೆ, ಕೆಯುಐಡಿಎಫ್‌ಸಿದ್ದು.ನಾಗರಿಕರ ಆಕ್ರೋಶ:
ಪಾಲಿಕೆ ಹೇಳುವುದು ಸುಳ್ಳು. ಪ್ರತಿ ವರ್ಷ ಹೀಗೆ ಹೇಳುತ್ತಲೇ ಬೇಸಿಗೆ ಕಳೆಯುತ್ತದೆ. ಈಗ ಕೆಲವು ವಾರ್ಡ್‌ಗಳಲ್ಲಿ 8-10 ದಿನಗಳಾದರೂ ನೀರು ಬರುವುದಿಲ್ಲ. ಇಲ್ಲದ ಕಥೆ ಹೇಳ್ತಾರೆ. ಇದೆಲ್ಲ ಬಿಟ್ಟು 5 ದಿನಗಳಿಗಾದರೂ ನೀರು ಬಿಡುವಂತಾಗಬೇಕು ಎಂಬುವುದು ಸಾರ್ವಜನಿಕರ ಆಗ್ರಹ.ಒಟ್ಟಿನಲ್ಲಿ ಮಾರ್ಚ್ ಅಂತ್ಯಕ್ಕೆ 3 ದಿನಗಳಿಗೊಮ್ಮೆ ನೀರು ಬರುವುದು ಅನುಮಾನ. ಆದರೂ ಏಪ್ರಿಲ್ ಮೊದಲ ಅಥವಾ 2ನೇ ವಾರದಲ್ಲಾದರೂ ಬರುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ನಿರಂತರ ನೀರು ಬರುವುದು ಯಾವಾಗ?
ಇನ್ನು 3-4 ದಿನಗಳ ನೀರು ಏಪ್ರಿಲ್‌ನಿಂದ ಬರುತ್ತದೆ ಎಂಬ ವಿಶ್ವಾಸವನ್ನೇನೋ ಪಾಲಿಕೆ ವ್ಯಕ್ತಪಡಿಸುತ್ತದೆ. ಹಾಗಾದರೆ ಎಲ್ಲ ವಾರ್ಡ್‌ಗಳಿಗೆ 24/7 ನೀರು ಬರುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಅದಕ್ಕೆ ಎಲ್ ಆ್ಯಂಡ್ ಟಿ ಅವಧಿಯನ್ನು 2027ರ ವರೆಗೆ ಸರ್ಕಾರ ವಿಸ್ತರಿಸಿದೆ. ಅಷ್ಟರೊಳಗೆ ಕೊಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತದೆ. ನಗರದೊಳಗೆ 1,688 ಕಿಮೀ ಪೈಕಿ ಈ ವರೆಗೆ 1,102 ಕಿಮೀ ಪೈಪ್‌ಲೈನ್ ಅಳವಡಿಸಲಾಗಿದೆ. 1,20,586 ಮನೆಗಳಿಗೆ ನಳ ಅಳವಡಿಸಬೇಕಿತ್ತು. ಈ ಪೈಕಿ 45,198 ಮನೆಗಳಿಗೆ ನಳ ಅಳವಡಿಸಲಾಗಿದೆ. ಇನ್ನು 23 ಒವರ್‌ಹೆಡ್ ಟ್ಯಾಂಕ್ ಪೈಕಿ 22 ಪೂರ್ಣವಾಗಿವೆ. ಈ ಎಲ್ಲ ಕೆಲಸಗಳು ಇನ್ನಾರು ತಿಂಗಳಲ್ಲಿ ಪೂರ್ಣವಾಗಲಿವೆ. ಅದಾದ ಬಳಿಕ ದಿನದ 24 ಗಂಟೆ ನೀರು ಎಲ್ಲ ವಾರ್ಡ್‌ಗಳಿಗೆ ಪೂರೈಕೆ ಮಾಡಬಹುದಾಗಿದೆ ಎಂಬ ವಿಶ್ವಾಸ ಎಲ್ ಆ್ಯಂಡ್ ಟಿಯದ್ದು.ಮಹಾನಗರಕ್ಕೆ 3 ದಿನಗಳಿಗೊಮ್ಮೆ ನೀರು ಪೂರೈಸುವ ಕೆಲಸವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಎಲ್ಲ ಕೆಲಸ ಪೂರ್ಣವಾಗಲಿದ್ದು ತಿಂಗಳ ಅಂತ್ಯಕ್ಕೆ ನೀರು ಪೂರೈಕೆ ಖಚಿತ. ಒಂದು ವೇಳೆ ಆಗದಿದ್ದರೂ ಏಪ್ರಿಲ್ ಮೊದಲ ವಾರದಲ್ಲಿ 3-4 ದಿನಗಳಿಗೊಮ್ಮೆ ಪೂರೈಕೆ ಮಾಡುವುದು ಗ್ಯಾರಂಟಿ.
ಜ್ಯೋತಿ ಪಾಟೀಲ, ಮೇಯರ್