ಮರ್ಡರ್‌ ಮಾಡಿ ಏನೂ ಗೊತ್ತಿಲ್ಲದಂಗೇ ನಿಲ್ಲುತ್ತೀರಾ: ರೌಡಿಶೀಟರ್‌ಗಳಿಗೆ ಎಸ್ಪಿ ಫುಲ್‌ ಕ್ಲಾಸ್‌

| Published : May 13 2025, 01:25 AM IST

ಮರ್ಡರ್‌ ಮಾಡಿ ಏನೂ ಗೊತ್ತಿಲ್ಲದಂಗೇ ನಿಲ್ಲುತ್ತೀರಾ: ರೌಡಿಶೀಟರ್‌ಗಳಿಗೆ ಎಸ್ಪಿ ಫುಲ್‌ ಕ್ಲಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಇವರಿಗೆಲ್ಲ ಜೀವದ ಬೆಲೆ, ಕಾನೂನು ಏನು ಎಂಬುದನ್ನು ತೋರಿಸಬೇಕು ಎಂದು ವಿಜಯನಗರ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಇಲ್ಲಿನ ಪಟ್ಟಣ ಠಾಣೆ ಆವರಣದಲ್ಲಿ ಭಾನುವಾರ ನಡೆದ ರೌಡಿಶೀಟರ್‌ಗಳ ಪರೇಡ್‌ ವೇಳೆ ಖಡಕ್ಕಾಗಿ ವಾರ್ನಿಂಗ್‌ ನೀಡಿದರು.

ಹೊಸಪೇಟೆಯಲ್ಲಿ 134 ರೌಡಿಶೀಟರ್‌ಗಳ ಚಳಿ ಬಿಡಿಸಿದ ಎಸ್ಪಿ ಶ್ರೀಹರಿಬಾಬು

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪೊಲೀಸರು ಎಂದರೇ ಭಯನಾ ಇಲ್ಲವಾ? ಜಾತ್ರೆಯಲ್ಲಿ ಮಹಿಳೆಯರು ಬಂದರೇ ಪೀಪೀ ಊದುತ್ತೀಯಾ? ಹಾಕಿ ರುಬ್ಬೀದರೆ ಗೊತ್ತಾಗುತ್ತೆ? ಮರ್ಡರ್‌ ಮಾಡಿ ಏನೂ ಗೊತ್ತಿಲ್ಲದಂಗೇ ನಿಲ್ಲುತ್ತೀರಾ? ಇವರಿಗೆಲ್ಲ ಜೀವದ ಬೆಲೆ, ಕಾನೂನು ಏನು ಎಂಬುದನ್ನು ತೋರಿಸಬೇಕು ಎಂದು ವಿಜಯನಗರ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಇಲ್ಲಿನ ಪಟ್ಟಣ ಠಾಣೆ ಆವರಣದಲ್ಲಿ ಭಾನುವಾರ ನಡೆದ ರೌಡಿಶೀಟರ್‌ಗಳ ಪರೇಡ್‌ ವೇಳೆ ಖಡಕ್ಕಾಗಿ ವಾರ್ನಿಂಗ್‌ ನೀಡಿದರು.

ನಗರದ ಪೊಲೀಸ್‌ ಉಪ ವಿಭಾಗ ವ್ಯಾಪ್ತಿಯ ಪಟ್ಟಣ ಠಾಣೆ, ಚಿತ್ತವಾಡ್ಗಿ, ಬಡಾವಣೆ, ಗ್ರಾಮೀಣ ಠಾಣೆ, ಟಿಬಿಡ್ಯಾಂ ಠಾಣೆ, ಹಂಪಿ, ಕಮಲಾಪುರ ಠಾಣೆಗಳ 134 ರೌಡಿ ಶೀಟರ್‌ಗಳಿಗೆ ಕ್ಲಾಸ್‌ ತೆಗೆದುಕೊಂಡರು.

ಪಟ್ಟಣ ಠಾಣೆ ಆವರಣದಲ್ಲಿ ಸಾಲಾಗಿ ನಿಲ್ಲಿಸಿ ರೌಡಿಶೀಟರ್‌ಗಳಿಗೆ ವಾರ್ನಿಂಗ್‌ ನೀಡಿದ ಅವರು, ಸರಿಯಾಗಿ ತೂಕ ಮಾಡಿದರೆ ಕಾಲ್ಕೇಜಿ ಮಾಂಸ ಇಲ್ಲ, ನೀನು ಎಲ್ಲರನ್ನೂ ಹೆದರಸ್ತೀಯಾ? ಎಂದು ರೌಡಿ ಶೀಟರ್‌ಗೆ ಗದರಿದ ಎಸ್ಪಿ, ಇಂತಹವರ ಮೇಲೆ ಪೊಲೀಸರು ಕಣ್ಣಿಡಬೇಕು ಎಂದರು.

ಬೆಂಗಳೂರು, ದಾವಣಗೆರೆಯಲ್ಲೂ ಹವಾ ಮಾಡ್ತೀರಾ? ಅಲ್ಲಿ ದುಡಿಯಲು ಹೋಗುತ್ತೇವೆ ಎಂದು ಇಲ್ಲಿ ಬಂದು ಗಲಾಟೆ ಮಾಡೋದು, ಏನೂ ಇದೆಲ್ಲ. ಮೈಸೂರಿನಲ್ಲಿ ಕಬ್ಬು ಕಟಾವು ಮಾಡಲು ಹೋಗ್ತೇವೆ ಎಂದು ಹೇಳೋದು ಇಲ್ಲಿ ಬಂದು ದಾಂಧಲೇ ಮಾಡೋದು, ಇಂಥವರ ಮೇಲೆ ಕಣ್ಣಿಡಬೇಕು. ಇವರ ಹಿಸ್ಟರಿ ನೋಡ್ರೀ ಎಂದು ಪಿಐಗಳಿಗೆ ಸೂಚಿಸಿದರು.

ನೀನು ಹಾಡು ನೋಡೋಣ:

ಏನೋ ಬಾಲಿವುಡ್‌ ಗಾಯಕ ಕೈಲಾಶ್ ಕೇರ್‌ಗೆ ಹಾಡು ಹಾಡು ಅಂತ ಬಾಟಲ್ ಎಸೇತಿಯಾ,ನನ್ನ ಮುಂದೆ ನೀನು ಹಾಡು ನೋಡೋಣ. ಮೊದಲು ನೆಟ್ಟಗಿರೋದ್‌ ಕಲಿತ್ಕೋ, ಗಾಯಕರ ಮೇಲೆ ಬಾಟಲಿ ಎಸೆಯೆದೋ, ರೌಡಿಸಂ ಮಾಡೋದು ಬಿಟ್ಟು ನೆಟ್ಟಗಿರೋದನ್ನ ಕಲಿತ್ಕೊ ಎಂದು ರೌಡಿ ಶೀಟರ್‌ ಓರ್ವನಿಗೆ ಗದರಿಸಿದರು.

ಹೇರ್‌ ಸ್ಟೈಲ್‌ ನೋಡಿ:

ಇವರ ಸ್ಟೈಲ್, ಲುಕ್‌, ಹೇರ್‌ ಸ್ಟೈಲ್‌ ನೋಡ್ರಿ, ಹೇಂಗ್‌ ಬರ್ತಾರೆ. ಏನ್ರೋ, ನೀಟಾಗಿ ಇರಲು ಆಗಲ್ವಾ? ಉಗುರು ನೋಡ್ರಿ, ಇನ್ನೊಬ್ಬರಿಗೆ ಪರಿಚಿದರೆ ಜೀವ ಹೋಗಬೇಕು ಅಂತ ಉಗುರು ಬಿಟ್ಟುಕೊಂಡಿದಾ? ಕಟಿಂಗ್‌ ಮಾಡಿಸಿಕೊಂಡು, ಉಗುರು ಕತ್ತರಿಸಿಕೊಂಡು ನೀಟಾಗಿ ಇರೋದ್‌ ಬೇಡ್ವಾ ಎಂದು ರೌಡಿಶೀಟರ್‌ಗಳಿಗೆ ಗದರಿಸಿದರು.

ತಂದೆ, ತಾಯಿ ನೋಡಿಕೊಳ್ರೋ:

ಮೊದಲು ದುಡಿದು ತಂದೆ, ತಾಯಿ ನಾ ನೋಡಿಕೋಳ್ರೋ, ಜಾತ್ರೆಯಲ್ಲಿ ಮಹಿಳೆಯರು ಬಂದರೆ ಪೀಪೀ ಊದುತ್ತೀಯಾ? ತಾಯಿಗೆ ದುಡಿದು ಸೀರೆ ಕೊಡಿಸಿದೀಯಾ? ಇವರ ಮನೆಗೆ ಫೋನ್‌ ಮಾಡಿ, ತಾಯಿಗೆ ಸೀರೆ ಕೊಡಿಸಿದಾನಾ ಕೇಳಿ? ಮೊದಲು ದುಡಿದು ತಂದೆ, ತಾಯಿಗಳನ್ನು ಸಾಕೋದು ಕಲಿಯಿರಿ. ಸಮಾಜದಲ್ಲಿ ಉತ್ತಮವಾಗಿ ಬಾಳೋದು ಕಲಿಯಿರಿ. ಅದನ್ನು ಬಿಟ್ಟು ರೌಡಿಸಂ ಮಾಡ್ತೀರಾ ಎಂದು ರೌಡಿಶೀಟರ್‌ಗಳಿಗೆ ಖಡಕ್ಕಾಗಿ ಎಚ್ಚರಿಸಿದರು.

ಡಿವೈಎಸ್ಪಿ ಮಂಜುನಾಥ ತಳವಾರ, ಪಿಐಗಳಾದ ಬಟಗುರ್ಕಿ, ಮಸಗುಪ್ಪಿ, ಕಟ್ಟಿಮನಿ, ಹುಲುಗಪ್ಪ ಮತ್ತು ಪಿಎಸ್‌ಐಗಳು ಮತ್ತು ಪೊಲೀಸರು ಇದ್ದರು.