ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಸಾಧಿಸುವ ಛಲ, ದೂರದೃಷ್ಟಿ ಮತ್ತು ದೃಢ ಸಂಕಲ್ಪ ಯಶಸ್ಸಿನ ಮೂರು ಮುಖ್ಯ ಸೂತ್ರಗಳು. ಇವುಗಳನ್ನು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ಮತ್ತು ಗುರಿ ನಿಮಗೆ ಸ್ಪಷ್ಟವಾಗಿರಬೇಕು. ಹಾಗಾದರೆ ಮಾತ್ರ ನೀವು ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಹೇಳಿದರು.ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಎರಡು ದಿನದ ದೀಕ್ಷಾರಂಭ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ವಿದ್ಯಾಭ್ಯಾಸಕ್ಕಾಗಿ ಈ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಸೂಕ್ತ. ಗ್ರಾಮೀಣ ಪ್ರದೇಶಗಳಿಂದ ಅನೇಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿಯಲು ಬಂದಿದ್ದೀರಿ. ಸಮಯ ಮತ್ತು ಅವಕಾಶ ಯಾರಿಗೂ ಕಾಯುವುದಿಲ್ಲ. ಆದ್ದರಿಂದ ನೀವೇನಾಗಬೇಕು ಎಂಬುದನ್ನು ಇಂದೇ ನಿಶ್ಚಯಿಸಿಕೊಳ್ಳಬೇಕು. ನೀವು ಅದೃಷ್ಟವಂತರು. ಏಕೆಂದರೆ ಎಷ್ಟೋ ವಿದ್ಯಾರ್ಥಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ಉನ್ನತ ಶಿಕ್ಷಣ ಪಡೆಯುವ ಅವಕಾಶವೇ ಇರುವುದಿಲ್ಲ ಎಂದರು.ನಿಮ್ಮ ಬದುಕಿನ ಹೊಸ್ತಿಲಲ್ಲಿ ಇದ್ದೀರಿ. ಈ ವಯಸ್ಸು ಬದಲಾವಣೆಯ ಕಾಲ. ಇಲ್ಲಿಂದ 5-6 ವರ್ಷಗಳು ನೀವು ಆಸಕ್ತಿಯಿಂದ ಕಲಿಕೆ ಮಾಡಿದರೆ ನಿಮ್ಮ ಭವಿಷ್ಯ ಸುಭದ್ರವಾಗುತ್ತದೆ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕನಸಾದ ಸೂಪರ್ ಪವರ್ ಇಂಡಿಯಾ ನನಸು ಮಾಡಲು ವಿದ್ಯಾರ್ಥಿಗಳು ಪಣ ತೊಡಬೇಕು. ಶಿಕ್ಷಣ ಎಂದರೆ ಕೇವಲ ಪದವಿ ಪಡೆಯುವುದಲ್ಲ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಾಗಿರುತ್ತದೆ.
ಇಂದು ಯುವಕರು ಸ್ಪಷ್ಟ ಗುರಿಗಳಿಲ್ಲದೆ ದಾರಿ ತಪ್ಪುತ್ತಿದ್ದಾರೆ. ಜೀವನವೆಂಬ ಸಾವಿರ ಮೈಲಿಗಳ ಯಾನ ಆರಂಭವಾಗುವುದು ಒಂದು ಹೆಜ್ಜೆಯಿಂದ. ಆ ಒಂದು ಹೆಜ್ಜೆ ನಿಮ್ಮ ಮುಂದಿನ ಬಹು ದೊಡ್ಡ ಜೀವನಕ್ಕೆ ನಾಂದಿಯಾಗುತ್ತದೆ. ಪ್ರೇರಣೆ ಯಾರಿಂದಲೋ ಪಡೆಯುವುದಲ್ಲ: ನಿಮ್ಮೊಳಗೇ ಹುಟ್ಟಬೇಕು. ನಿಶ್ಚಿತ ಗುರಿ ಸಮಯಪಾಲನೆ, ಶಿಸ್ತು, ಪ್ರಶ್ನಿಸುವ ಗುಣ, ಕುತೂಹಲ, ಆಳವಾದ ದೃಷ್ಟಿಕೋನ, ಪೂರ್ವಸಿದ್ಧತೆ, ಭವಿಷ್ಯದ ಕನಸು ಇವುಗಳನ್ನು ಉತ್ತಮ ವಿದ್ಯಾರ್ಥಿಯು ಮೈಗೂಡಿಸಿಕೊಳ್ಳಬೇಕು. ಇಂದು ಪದವಿಗಿಂತ ಪದವೀಧರರಿಗೆ ಮೌಲ್ಯವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಕಾಲೇಜಿನ ಕಿರು ಪರಿಚಯವನ್ನು ಮಾಡಿಕೊಟ್ಟು ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯುಜಿಸಿಯ ನಿಯಮಕ್ಕನುಸಾರವಾಗಿ ದೀಕ್ಷಾರಂಭ ಕಾರ್ಯಕ್ರಮವನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಗುರುಗಳು ಮತ್ತು ವಿದ್ಯಾರ್ಥಿಗಳ ಸಂಬಂಧವನ್ನು ಗಟ್ಟಿಗೊಳಿಸಲು, ಕಾಲೇಜಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಿರುವ ವಿಚಾರಗಳ ಮೇಲೆ ಬೆಳಕು ಚೆಲ್ಲುವುದು ಈ ಕಾರ್ಯಕ್ರಮದ ಉದ್ದೇಶ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಈ ಕಾಲೇಜು ಉತ್ತಮ ವೇದಿಕೆಯಾಗಲಿ. ನಿಮ್ಮ ಅಗತ್ಯ ಮತ್ತು ಸಮಾಜದ ಅಗತ್ಯವನ್ನು ಪೂರೈಸಲು ನಮ್ಮ ಕಾಲೇಜು ಸದಾ ಶ್ರಮಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ನಡೆಯೊಂದಿಗೆ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ತಂದೆ-ತಾಯಿಗಳ ಆಸೆ ಮತ್ತು ಕನಸಿನೊಂದಿಗೆ ಮುನ್ನಡೆಯಿರಿ. ಸಮಾಜದ ನಿಷ್ಠಾವಂತ ನಾಗರಿಕರಾಗಿ ರೂಪುಗೊಳ್ಳಿ ಎಂದು ಅವರು ಹಾರೈಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು.
ಡಾ.ಎಲ್. ವಿನಯ್ ಕುಮಾರ್ ನಿರೂಪಿಸಿದರು. ಅದಿತಿ ಹೆಗಡೆ ಮತ್ತು ಚಿನ್ಮಯಿ ಪ್ರಾರ್ಥಿಸಿದರು. ಡಾ.ಎನ್. ರಾಜೇಂದ್ರಪ್ರಸಾದ್ ವಂದಿಸಿದರು. ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ. ಪ್ರಭುಸ್ವಾಮಿ ಇದ್ದರು.ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ 900ಕ್ಕೂ ಅಧಿಕ ಸಂಖ್ಯೆಯ ಪ್ರಥಮ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.