ರಾಣಿಬೆನ್ನೂರಿನಲ್ಲಿ ಜೀವಂತ ರತಿ- ಮನ್ಮಥರ ನಗಿಸಿ ₹6.50 ಲಕ್ಷ ಬಹುಮಾನ ಗೆಲ್ಲಿ!

| Published : Mar 13 2025, 12:50 AM IST

ರಾಣಿಬೆನ್ನೂರಿನಲ್ಲಿ ಜೀವಂತ ರತಿ- ಮನ್ಮಥರ ನಗಿಸಿ ₹6.50 ಲಕ್ಷ ಬಹುಮಾನ ಗೆಲ್ಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಮಾ. 14ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ಜೀವಂತ ರತಿ -ಮನ್ಮಥರನ್ನು ಕುಳ್ಳರಿಸಲಾಗುತ್ತದೆ. ರತಿ ಮನ್ಮಥರನ್ನು ನಗಿಸಲು ಜನರು ನಾನಾ ವಿಧದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಅವರ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆಯೇ ಹೊರತು ನಗಿಸಲು ಸಾಧ್ಯವಾಗುವುದಿಲ್ಲ.

ಬಸವರಾಜ ಸರೂರ

ರಾಣಿಬೆನ್ನೂರು: ನಗು ಮನುಷ್ಯನ ಒತ್ತಡ ದೂರ ಮಾಡಿ ಮನಸ್ಸಿಗೆ ಶಾಂತಿ ನೆಮ್ಮದಿ ಒದಗಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಂದಿನ ಒತ್ತಡದ ಜೀವನ ಶೈಲಿಯಿಂದಾಗಿ ಜನರಲ್ಲಿ ನಗುವೆಂಬುದೇ ಮಾಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ನಗರದಲ್ಲಿ ಹೋಳಿ ಹಬ್ಬದ ಮುನ್ನಾದಿನ ಜೀವಂತ ರತಿ- ಮನ್ಮಥರ ನಗಿಸುವ ಕಾರ್ಯಕ್ರಮ ಬಹುವೈಶಿಷ್ಟಪೂರ್ಣವಾಗಿದ್ದು, ಅದನ್ನೊಮ್ಮೆ ಕಣ್ಣಾರೆ ನೋಡಿದಾಗಲೇ ಅದರ ಸ್ವಾರಸ್ಯ ಅರಿವಿಗೆ ಬರುತ್ತದೆ. ಈ ಬಾರಿ ಮಾ. 14ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ಜೀವಂತ ರತಿ -ಮನ್ಮಥರನ್ನು ಕುಳ್ಳರಿಸಲಾಗುತ್ತದೆ. ರತಿ ಮನ್ಮಥರನ್ನು ನಗಿಸಲು ಜನರು ನಾನಾ ವಿಧದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಅವರ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆಯೇ ಹೊರತು ನಗಿಸಲು ಸಾಧ್ಯವಾಗುವುದಿಲ್ಲ. ಸ್ವಲ್ಪ ನಗಪ್ಪಾ ಕಾಮಣ್ಣಾ, ಮಗ್ಗಲ್ದಾಗ ಅಷ್ಟ್ ಚಂದನ್ನ ರತಿ ಇರ‍್ಬೇಕಾದ್ರ ಬ್ಯಾಸರ್ ಮಾಡ್ಕೋಬೇಡಪಾ, ಕಿಲಕಿಲ ಅಂತಾ ನಗ್ತಿರಬೇಕಪಾ, ಯವ್ವಾ ರತಿದೇವಿ ನೀನರ್ ಸ್ವಲ್ಪ ನಕ್ಕರ ನಗು, ಬಹುಮಾನದ ಹಣ ಪೂರಾ ನಿಮಗೆ ಕೊಡ್ತೇವಿ? ಸುಮ್ನಾ ಗಂಟುಮೋರೆ ಹಾಕ್ಕೊಂಡ ಯಾಕ್ ಕುಂದರಿತಿ? ಎಂಬ ತರಹೇವಾರಿ ಮಾತುಗಳು ಇಲ್ಲಿಗೆ ಆಗಮಿಸುವ ಜನರಿಂದ ಕೇಳಿ ಬರುತ್ತವೆ.

ನಗೆಪಾಟಲಿಗೆ ಈಡಾಗುವ ಜನ: ರತಿ -ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿಗೆ ಬರುವ ಜನ ತಾವೇ ನಗೆಪಾಟಲಿಗಿಡಾಗುವ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. ಕೆಲವರು ವಿಚಿತ್ರ ಹಾವಭಾವ ಕೂಡ ಪ್ರದರ್ಶಿಸುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಬಹುಮಾನ ಗೆಲ್ಲಲು ಪ್ರಯತ್ನ ಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಏಕೆಂದರೆ ರತಿ ಮನ್ಮಥರು ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತದೇಕಚಿತ್ತದಿಂದ ಗಂಭೀರವದನರಾಗಿ ಕುಳಿತುಕೊಂಡಿರುತ್ತಾರೆ. ಜಾತ್ರೆಯ ಅನುಭವ: ವಿವಿಧ ಪ್ರದೇಶಗಳ ಯುವಕರು ಹಲಗೆ ಬಾರಿಸುತ್ತ ಇಲ್ಲಿಗೆ ಬಂದು ಹೋಗುವುದನ್ನು ಕಂಡರೆ ಇಲ್ಲಿ ಒಂದು ಜಾತ್ರೆ ನಡೆದಿದೆಯೇನೋ ಎಂದೆನೆಸುತ್ತದೆ. ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ರತಿ ಮನ್ಮಥರನ್ನು ವೀಕ್ಷಿಸುವ ಸಲುವಾಗಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ನಗಿಸಿದವರಿಗೆ ವಿವಿಧ ಸಂಘ ಸಂಸ್ಥೆಗಳು ಸುಮಾರು ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡುವುದಾಗಿ ತಿಳಿಸಿದರೂ ಕಳೆದ 67 ವರ್ಷಗಳಿಂದ ಯಾರೊಬ್ಬರೂ ಜೀವಂತ ರತಿ -ಕಾಮಣ್ಣರನ್ನು ನಗಿಸಿದ ಉದಾಹರಣೆಗಳಿಲ್ಲ. (ಈ ಬಾರಿ ಬಹುಮಾನದ ಮೊತ್ತ ₹6.50 ಲಕ್ಷ: ಅಜ್ಜಪ್ಪ ಜಂಬಗಿ ಮೂರು ಲಕ್ಷ, ಅನಿಲ ಸಿದ್ದಾಳಿ ಒಂದು ಲಕ್ಷ, ಎಸ್.ಆರ್. ಕರ್ಜಗಿಮಠ ಕುಟುಂಬ, ಮಹೇಶ ಕುದರಿಹಾಳ, ಕೊಟ್ರೇಶ ಕೆಂಚಪ್ಪನವರ, ಸಿದ್ದು ಚಿಕ್ಕಬಿದರಿ, ಬಸವರಾಜ ರೊಡ್ಡನವರ ತಲಾ ಐವತ್ತು ಸಾವಿರ ರು. ಲಕ್ಷ) ನಿಜಕ್ಕೂ ಇದೊಂದು ದಾಖಲೆಯಾಗಿ ಮುಂದುವರಿದಿದೆ. ಇದರ ಮರ್ಮವನ್ನು ಅರಿಯಲು ಸ್ಥಳೀಯ ಜನತೆ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಜನ ಇಲ್ಲಿಗೆ ಆಗಮಿಸಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ. ಅಚ್ಚರಿಯ ಸಂಗತಿ: ಕಳೆದ 26 ವರ್ಷಗಳಿಂದ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ 35 ವರ್ಷಗಳಿಂದ ರತಿ ವೇಷವನ್ನು ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿರುತ್ತಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿದ್ದು, ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ಗಂಭೀರ ವದನರಾಗಿ ಕುಳಿತುಕೊಳ್ಳುವ ಪರಿ ಸಾರ್ವಜನಿಕರಿಗೆ ಕುತೂಹಲದ ಜತೆಗೆ ಅಚ್ಚರಿ ಉಂಟು ಮಾಡುತ್ತದೆ. ಇದರ ನಿಗೂಢತೆ ರಹಸ್ಯವಾಗಿಯೇ ಉಳಿದಿದ್ದು, ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಬೇರೆ ಊರುಗಳಲ್ಲಿ ಪ್ರದರ್ಶನ: ಇವರು ನಗರದಲ್ಲಿ ಮಾತ್ರವಲ್ಲದೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿದ್ದರು. ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಇವರ ಪ್ರತಿಭೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಲ್ಲದೆ ಧಾರವಾಡ ಆಕಾಶವಾಣಿಯಲ್ಲಿ ಇವರ ಸಂದರ್ಶನ ಪ್ರಸಾರವಾಗಿತ್ತು.