ಸಾರಾಂಶ
ಕಾಂಗ್ರೆಸ್ಸಿನವರಿಂದಲೇ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಗೌರವ ಸಿಕ್ಕಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಭಟ್ಕಳ: ದೇಶದ ಅಭಿವೃದ್ಧಿ, ಸುಭದ್ರತೆಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲೇ ಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಬಗ್ಗೆ ಕಾಂಗ್ರೆಸ್ಅ ಪಪ್ರಚಾರ ಮಾಡುತ್ತಿದೆ. ಬಿಜೆಪಿ ಸಂವಿಧಾನ ಬದಲಾಯಿಸಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡರು ಎಲ್ಲ ಕಡೆ ಬೊಬ್ಬೆ ಹೊಡೆಯುತ್ತಿದ್ದಾರೆ. ಅಂಬೇಡ್ಕರ್ ಅವರಿಂದ ರಚಿತವಾದ ದೇಶದ ಸಂವಿಧಾನದ ಮೇಲೆ ಅತ್ಯಂತ ಗೌರವ ಭಾವನೆ ಹೊಂದಿ ಬಿಜೆಪಿ ಶಕ್ತಿ ತುಂಬವ ಕೆಲಸ ಮಾಡುತ್ತಿದೆಯೇ ಹೊರತು ಕಾಂಗ್ರೆಸ್ ಆರೋಪಿಸಿದಂತೆ ಬಿಜೆಪಿ ಸಂವಿಧಾನವನ್ನು ಯಾವತ್ತೂ ಬದಲಾಯಿಸುವುದಿಲ್ಲ. ಕಾಂಗ್ರೆಸ್ಸಿನವರಿಂದಲೇ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಗೌರವ ಸಿಕ್ಕಿಲ್ಲ ಎಂದು ಆರೋಪಿಸಿದ ಅವರು, ಮೀಸಲಾತಿಯನ್ನು ಹೆಚ್ಚಿಸಿದ್ದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ₹23 ಸಾವಿರ ಕೋಟಿ ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ 10 ಕೆಜಿ ಅಕ್ಕಿ ವಿತರಿಸುತ್ತೇನೆಂದ ಕಾಂಗ್ರೆಸ್ ಒಂದು ಕೆಜಿ ಅಕ್ಕಿಯನ್ನೂ ವಿತರಿಸಿಲ್ಲ. ಪಡಿತರ ಅಂಗಡಿಯಲ್ಲಿ 5 ಕೆಜಿ ಅಕ್ಕಿ ವಿತರಿಸುತ್ತಿರುವುದು ಕೇಂದ್ರ ಸರ್ಕಾರದಿಂದ ಎಂದ ಅವರು, ಕಾಂಗ್ರೆಸ್ಸಿನವರ ಗ್ಯಾರಂಟಿ ಹಳಿ ತಪ್ಪಿದೆ. ಶೇ. 60ರಷ್ಟು ಜನರಿಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆ ತಲುಪಿಲ್ಲ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾ ಸಂಚಾಲಕ ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಪ್ರಮುಖರಾದ ರಾಜೇಶ ನಾಯ್ಕ, ಮೋಹನ ನಾಯ್ಕ, ಭಾಸ್ಕರ ದೈಮನೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ ಮುಂತಾದವರಿದ್ದರು.