ಎಲ್ಲ 28 ಕ್ಷೇತ್ರದಲ್ಲೂ ಗೆಲುವು : ಕಾಂಗ್ರೆಸ್‌ ಗುರಿ

| Published : Apr 03 2024, 01:36 AM IST / Updated: Apr 03 2024, 07:36 AM IST

ಸಾರಾಂಶ

  ಇಂಡಿಯಾ ಮಿತ್ರ ಪಕ್ಷಗಳ ಕಾರ್ಯಕರ್ತರು ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವುದಾಗಿ ಸಭೆಯಲ್ಲಿ ಘೋಷಿಸಿದರು.

  ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲ ಕೋರಿ ಇಂಡಿಯಾ ಮಿತ್ರಪಕ್ಷಗಳ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಂಗಳವಾರ ಸಭೆ ನಡೆಸಿದ್ದು, ಇಂಡಿಯಾ ಮಿತ್ರ ಪಕ್ಷಗಳ ಕಾರ್ಯಕರ್ತರು ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವುದಾಗಿ ಸಭೆಯಲ್ಲಿ ಘೋಷಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ, ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳಿಗೆ ಆದಾಯ ತೆರಿಗೆ ನೋಟಿಸ್‌ ನೀಡುವ ಬಗ್ಗೆಯೂ ಚರ್ಚಿಸಿ, ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲಿಸುವುದು ಅನಿವಾರ್ಯ. ಅದಕ್ಕಾಗಿ ಎಲ್ಲ ಪಕ್ಷಗಳೂ ಒಟ್ಟಾಗಿ ಕೆಲಸ ಮಾಡಿ ರಾಜ್ಯದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ಆ ಬಗ್ಗೆ ತಮ್ಮತಮ್ಮ ಪಕ್ಷಗಳ ಕಾರ್ಯಕರ್ತರನ್ನು ಅಣಿಗೊಳಿಸುವುದಾಗಿ ಎಂದು ಎಲ್ಲ ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಕೋಮುವಾದಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವ’ ಎಂಬ ಘೋಷವಾಕ್ಯದೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಜಾಪ್ರಭುತ್ವ ಉಳಿಸಲು, ರಕ್ಷಿಸಲು ಹೋರಾಟ ಮಾಡಬೇಕಿದೆ. ಚುನಾವಣಾ ಬಾಂಡ್‌ ಕುರಿತಂತೆ ಚಕಾರವೆತ್ತದ ಆದಾಯ ತೆರಿಗೆ ಇಲಾಖೆ, ವಿರೋಧ ಪಕ್ಷಗಳಿಗೆ ನೋಟಿಸ್‌ ನೀಡಿ ಕಿರುಕುಳ ನೀಡುವ ಯತ್ನ ಮಾಡುತ್ತಿದೆ. ಇದೆಲ್ಲದರ ವಿರುದ್ಧ ಇಂಡಿಯಾ ಮಿತ್ರಪಕ್ಷಗಳು ಒಟ್ಟಾಗಿ ಹೋರಾಡಬೇಕಿದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು.

ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಇಂಡಿಯಾ ಮಿತ್ರಪಕ್ಷಗಳು ಏಕ ಸಿದ್ಧಾಂತವನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿವೆ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುತ್ತದೆ. ಬೂತ್‌ ಮಟ್ಟದಿಂದ ರಾಜ್ಯಮಟ್ಟದವರೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವ ಉಳಿವಿಗಾಗಿ ನಾವೆಲ್ಲರೂ ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಕೇಜ್ರಿವಾಲ್‌ ಬಂಧನ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಶ್ವಸಂಸ್ಥೆಯೂ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಎನ್‌ಸಿಪಿ ರಾಜ್ಯಾಧ್ಯಕ್ಷ ಸಿ.ಎಸ್‌.ಇನಾಂದಾರ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ಬಸವರಾಜು, ರಾಷ್ಟ್ರೀಯ ಜನತಾದಳ ರಾಜ್ಯಾಧ್ಯಕ್ಷ ಯಾಕೂಬ್‌ ಗುಲ್ವಾಡಿ, ಫಾರ್ವರ್ಡ್‌ ಬ್ಲಾಕ್‌ ರಾಜ್ಯಾಧ್ಯಕ್ಷ ಶಿವಶಂಕರ್‌, ಸಿಪಿಐ (ಎಂಎಲ್‌) ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್‌ ಡಿ ರೋಜೆರಿಯೋ ಇತರರಿದ್ದರು.