ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ಫೆ.10ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಹಲಗೂರು ಹೋಬಳಿಯಿಂದ ಶಿವಣ್ಣ, ಸುಂದರಮ್ಮ, ರೇವಣ್ಣ, ಕಸಬಾ ಹೋಬಳಿಯಿಂದ ಜವರೇಗೌಡ, ದೊಡ್ಡ ಮಾದೇಗೌಡ, ಪ್ರಸನ್ನಕುಮಾರ್, ಬಿಜಿಪುರ ಹೋಬಳಿಯಿಂದ ಎನ್‌ಡಿಎ ಅಭ್ಯರ್ಥಿ ಶಿವಣ್ಣ, ಮಂಚನಪುರ ಶಿವಣ್ಣ, ಕಿರುಗಾವಲು ಹೋಬಳಿಯಿಂದ ಶಿವಮಾದಪ್ಪ, ವಿರೇಶ್‌ಗೌಡ, ಹನುಮಂತು, ಪಟ್ಟಣದಿಂದ ನಂದಿನಿ, ಸಾಲಗಾರರಲ್ಲದ ಕ್ಷೇತ್ರದಿಂದ ವಿದ್ಯಾ ಮಾಯಣ್ಣ ಅವರನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದರು.
ಕಳೆದ ಅವಧಿಯಲ್ಲಿ ಜೆಡಿಎಸ್ ಬೆಂಬಲಿತ ಆಡಳಿತ ಮಂಡಳಿ ಯಾವುದೇ ಲೋಪವಿಲ್ಲದಂತೆ ರೈತರ ಪರವಾಗಿ ಉತ್ತಮವಾಗಿ ಆಡಳಿತ ನಡೆಸಿದೆ. ಮತ್ತೊಂದು ಭಾರಿ ಜೆಡಿಎಸ್ ಪಕ್ಷದ ಬೆಂಬಲರಿಗೆ ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ, ಕೆಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವುದರ ಮೂಲಕ ಅಧಿಕಾರ ನೀಡಬೇಕೆಂದು ಕೋರಿದರು.ಶಾಸಕರಿಂದ ಅಧಿಕಾರಿಗಳ ದುರುಪಯೋಗ:
ಕಾಂಗ್ರೆಸ್ ಶಾಸಕರು ಸಹಕಾರ ಸಂಘಗಳ ಚುನಾವಣೆಯಲ್ಲಿ ನೇರವಾಗಿ ಗೆಲ್ಲಲು ಸಾಧ್ಯವಾಗದೇ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಮನ್ಮುಲ್ ಚುನಾವಣೆ ಮತ ಎಣಿಕೆಯಲ್ಲಿ ಒಂದು ಮತ ಶೇ.80 ರಷ್ಟು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಸೇರಬೇಕಿತ್ತು. ಶಾಸಕರ ಒತ್ತಾಯದ ಮೇರೆಗೆ ಸಹಕಾರ ಸಂಘದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಅಸಿಂಧುಗೊಳಿಸುವುದರ ಮೂಲಕ ಅಕ್ರಮ ಎಸಗಿದ್ದಾರೆಂದು ಆರೋಪಿಸಿದರು.ಫೆ.2ರಂದು ನಡೆದ ಮನ್ಮುಲ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವಿಶ್ವನಾಥ್ ಅವರನ್ನು ಸೋಲಿಸುವ ಹುನ್ನಾರದಲ್ಲಿ ವಡ್ಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಚುನಾವಣೆಯನ್ನು ಶಾಸಕರು ಅಧಿಕಾರಿಗಳಿಗೆ ಒತ್ತಾಯ ಹಾಕಿ ಫೆ.1ರಂದು ದಿನಾಂಕ ನಿಗಧಿಪಡಿಸಿಕೊಂಡರು ಎಂದು ದೂರಿದರು.
ಶಾಸಕರು ಸಹಕಾರ ಸಂಘದ ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ಪೂರಿಗಾಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ತಮಗೆ ಇಷ್ಟಬಂದಂತೆ ನಡೆಸಿದ್ದಾರೆ ಎಂದು ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಕಂಸಾಗರ ರವಿ, ಮುಖಂಡರಾದ ಮಲ್ಲೇಗೌಡ, ಹನುಮಂತು, ಮಾಯಣ್ಣ, ಜವರೇಗೌಡ, ದೊಡ್ಡಮಾದೇಗೌಡ, ಶಿವಮಾದಪ್ಪ, ವೀರೇಶ್‌ಗೌಡ, ಪ್ರಸನ್ನಕುಮಾರ್, ಶಿವಣ್ಣ, ರೇವಣ್ಣ ಸೇರಿದಂತೆ ಇತರರು ಇದ್ದರು.