ರೈತರಿಗೆ ಬಲ ತುಂಬಲು ಪ್ರಧಾನಿ ಮೋದಿ ಗೆಲ್ಲಿಸಿ

| Published : Apr 01 2024, 12:50 AM IST

ಸಾರಾಂಶ

ರಾಮನಗರ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ಇಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಹಂಚಿಕೆಯಾಗುವ ಮೊತ್ತದಲ್ಲಿಯೇ ಬೆಂಬಲ ಬೆಲೆಗೂ ಹಣ ಮೀಸಲಿಡುವ ಕೆಲಸ ಆಗಬೇಕು ಎಂದು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ರಾಮನಗರ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ಇಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಹಂಚಿಕೆಯಾಗುವ ಮೊತ್ತದಲ್ಲಿಯೇ ಬೆಂಬಲ ಬೆಲೆಗೂ ಹಣ ಮೀಸಲಿಡುವ ಕೆಲಸ ಆಗಬೇಕು ಎಂದು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವುದರಿಂದ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತಾಗುತ್ತದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 47 ಸಾವಿರ ಕೋಟಿ ಕೊಡುತ್ತಿದೆ. ಕೇಂದ್ರವು ವರ್ಷಕ್ಕೆ ರೈತರಿಗೆ ಕೊಡುತ್ತಿದ್ದ 6 ಸಾವಿರಕ್ಕೆ ರಾಜ್ಯ ಸರ್ಕಾರ 4 ಸಾವಿರ ಸೇರಿಸಿ ಕೊಡುತ್ತಿತ್ತು. ಇದರಿಂದ ರೈತರಿಗೆ ವರ್ಷಕ್ಕೆ 10 ಸಾವಿರ ಸಿಗುತ್ತಿತ್ತು. ಇತ್ತೀಚೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆ ಮೊತ್ತ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿಕ ಎಂದು ಹೇಳಿಕೊಳ್ಳಲು ಹಿಂಜರಿಕೆ ಮನೋಭಾವನೆ ಇದೆ. ಕೇವಲ 8ರಿಂದ 10 ಸಾವಿರ ವೇತನಕ್ಕಾಗಿ ನಗರಕ್ಕೆ ಬಂದು ರೈತರು ದುಡಿಯುವ ಸ್ಥಿತಿ ಬಂದಿದೆ. ಈ ಸ್ಥಿತಿ ಬದಲಾಗಬೇಕಾದರೆ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ರೈತರ ಆದಾಯ ಹೆಚ್ಚಳವಾಗಬೇಕಿದೆ ಎಂದು ಮಂಜುನಾಥ್ ತಿಳಿಸಿದರು.

ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ನಮ್ಮದು ಧರ್ಮಸಹಿಷ್ಣುತೆ ಉಳ್ಳ ದೇಶ. ನಮ್ಮತನ ಉಳಿಸಿಕೊಂಡು ಹಿಂದುತ್ವ ಉಳಿಸಿಕೊಂಡು ಬಂದಿದೆ. ಸ್ವಾತಂತ್ರ್ಯ ನಂತರದಲ್ಲಿ ನಮ್ಮತನವನ್ನು ಹಾಳು ಮಾಡಿದವರನ್ನು ಹೊಗಳಿ ಪ್ರತಿಬಿಂಬಿಸುವ ಕೆಲಸ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದೇಶಗಳಲ್ಲಿ ಭಾರತವನ್ನು ಜಾತಿವಾದಿಗಳ ದೇಶ ಎಂದು ತಿಳಿದುಕೊಂಡು ನಮ್ಮ ದೇಶದ ಗೌರವಾನ್ವಿತರಿಗೆ ಬೆಲೆ ನೀಡುವ ಕೆಲಸ ಮಾಡುತ್ತಿರಲಿಲ್ಲ. ಆದರೆ ಮೋದಿಯವರ ಸುಭದ್ರ ಆಡಳಿತದಿಂದ ಉತ್ತಮ ಆರ್ಥಿಕ ಪ್ರಗತಿ ಕಂಡಿದೆ. ಈಗ ಮೋದಿ ಅವರಿಗೆ ರತ್ನಗಂಬಳಿ ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಇದರಿಂದ ದೇಶದ ಗೌರವ ಸಂಸ್ಕೃತಿ ಹಿರಿಮೆ ಜಗತ್ತಿನಲ್ಲಿ ಹೆಚ್ಚಿದೆ ಎಂದು ಹೇಳಿದರು.

ಯಾವುದೇ ಆಸೆ ಇಟ್ಟು ಕೆಲಸ ಮಾಡಬೇಡಿ, ದೇಶಕ್ಕೋಸ್ಕರ ಕೆಲಸ ಮಾಡಿ ನಮಗೇನು ದೇಶ ಕೊಡುತ್ತದೆ ಎನ್ನುವ ಬದಲು ನಾನು ದೇಶಕ್ಕಾಗಿ ಏನು ಮಾಡುತ್ತೇನೆ ಎಂಬ ಅರಿವಿನಲ್ಲಿ ಪಕ್ಷವನ್ನು ಬೆಂಬಲಿಸಿ. ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಅವರ ವೈದ್ಯ ಸೇವೆ ಬಗ್ಗೆ ಜನರಿಗೆ ಹೇಳಿ ಜನರಿಂದ ಮತ ಪಡೆಯಿರಿ. ದೇಶ ಮತ್ತಷ್ಟು ಅಭಿವೃದ್ಧಿ ದಿಸೆಯಲ್ಲಿ ಸಾಗಬೇಕು. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ರೈತರಿಗೆ ಮತ್ತಷ್ಟು ಬಲ ತುಂಬಲು ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ರೈತ ಮೋರ್ಚಾ ಪದಾಧಿಕಾರಿಗಳಿಗೆ ನೇಮಕ ಪತ್ರ ನೀಡಲಾಯಿತು. ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ರುದ್ರೇಶ್, ಬಿಜೆಪಿ ಮುಖಂಡರಾದ ಡಾ. ಪುಣ್ಯವತಿ, ವರದರಾಜುಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ನಾಗಾನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ನಗರ ಬಿಜೆಪಿ ಅಧ್ಯಕ್ಷ ದರ್ಶನ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಕಾಳಯ್ಯ, ಸಂಜಯ್ ಯುಮೋರ್ಚಾ ಕಾರ್ಯದರ್ಶಿ ಪ್ರಶಾಂತ್, ಮುಖಂಡರಾದ ಹುಲುವಾಡಿ ದೇವರಾಜು, ಜಗನ್ನಾಥ್, ಬಿ. ಉಮೇಶ್, ಶಿವಕುಮಾರ್, ಭರತ್, ಜಯಕುಮಾರ್, ಕೆಂಪರಾಜು, ಪ್ರಭು, ವೈರಮುಡಿಗೌಡ ಉಪಸ್ಥಿತರಿದ್ದರು.ಕೋಟ್ ............

ನಾನು ರೈತ ಕುಟುಂಬದಿಂದ ಬಂದವನು. ಏಳನೇ ತರಗತಿವರೆಗೆ ಊರಲ್ಲೇ ಓದಿದ ನಾನು, ಅಪ್ಪನ ಜೊತೆ ಕೃಷಿ ಕೆಲಸಗಳನ್ನು ಮಾಡುತ್ತಿದ್ದೆ. ಬಾಳೆ ಗಿಡ ನೆಟ್ಟಿದ್ದೇನೆ, ಗದ್ದೆ ಕೆಲಸ ಮಾಡಿದ್ದೇನೆ. ಹಾಗಾಗಿ, ನನಗೆ ರೈತರೆಂದರೆ ಇಷ್ಟ. ಜಯದೇವ ಆಸ್ಪತ್ರೆಯಲ್ಲಿ 18 ವರ್ಷ ನಿರ್ದೇಶಕನಾಗಿದ್ದಾಗ ಅತಿ ಹೆಚ್ಚು ರೈತರು ಮತ್ತು ಗ್ರಾಮೀಣ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಹಣದ ಸಮಸ್ಯೆ, ದಾಖಲೆ ಸಮಸ್ಯೆ ಸೇರಿದಂತೆ ಏನೇ ತೊಂದರೆಗಳಿದ್ದರೂ ವಾಪಸ್ ಕಳಿಸದೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇನೆ. ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಆಂಜಿಯೊಪ್ಲಾಸ್ಟ್ ಮತ್ತು ಸ್ಟಂಟ್ ಅಳವಡಿಕೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ.

- ಡಾ.ಸಿ.ಎನ್. ಮಂಜುನಾಥ್ , ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ31ಕೆಆರ್ ಎಂಎನ್ 8.ಜೆಪಿಜಿ

ರಾಮನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಡಾ.ಸಿ.ಎನ್. ಮಂಜುನಾಥ್ ಮಾತನಾಡಿದರು.