ಬಮೂಲ್ ಚುನಾವಣೆಯಲ್ಲಿ ಜಿಲ್ಲೆಯ ಆರು ಸ್ಥಾನಗಳಲ್ಲಿ ಗೆಲ್ಲಿಸಿ: ಮಾಜಿ ಸಂಸದ ಡಿಕೆ ಸುರೇಶ್

| Published : May 07 2025, 12:50 AM IST

ಬಮೂಲ್ ಚುನಾವಣೆಯಲ್ಲಿ ಜಿಲ್ಲೆಯ ಆರು ಸ್ಥಾನಗಳಲ್ಲಿ ಗೆಲ್ಲಿಸಿ: ಮಾಜಿ ಸಂಸದ ಡಿಕೆ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಎರಡು ಬಾರಿ ಬಮೂಲ್ ನಿರ್ದೇಶಕನಾಗಿ ಆಯ್ಕೆಯಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಎರಡು ಬಾರಿ ಸೋಲನ್ನು ಅನುಭವಿಸಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ, ರೈತರ ಹಿತ ಕಾಯುವ ಕೆಲಸ ಮಾಡುತ್ತೇನೆ .

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಈ ಬಾರಿ ಬಮೂಲ್ ಚುನಾವಣೆಯಲ್ಲಿ ಜಿಲ್ಲೆಯ ಹೈನುಗಾರರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಆರು ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರ ನೀಡಿ. ಸರ್ಕಾರದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಏನು ಸಹಕಾರ ಬೇಕು ಅದನ್ನು ನಾವು ಮಾಡುತ್ತೇವೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.

ತಾಲೂಕಿನ ಕೆಂಗಲ್ ಬಳಿ ಇರುವ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಅವರು ಹಣ ನೀಡುತ್ತಾರೆ ಎಂದು ಅವರನ್ನು ಬೆಂಬಲಿಸಿದರೆ, ಮುಂದೆ ನೀವೇ ರೈತರನ್ನು ಸಂಕಷ್ಟಕ್ಕೆ ದೂಡುತ್ತೀರಾ. ಆದ್ದರಿಂದ ಈ ಬಾರಿ ಬಮೂಲ್ ಚುನಾವಣೆಯಲ್ಲಿ ಯಾವುದೇ ಆಮೀಷಕ್ಕೂ ಒಳಗಾಗದೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಎಸ್.ಲಿಂಗೇಶ್ ಕುಮಾರ್ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ಇಂದು ಸಹಕಾರ ಚುನಾವಣೆ ಸಹ ಪಕ್ಷಗಳ ಆಧಾರದ ಮೇಲೆ ನಡೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಂದೆ ಸಹಕಾರ ಸಂಘಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಲೆ ಹಾಕುತ್ತಿರಲಿಲ್ಲ. ಈಗ ಘಟಾನುಘಟಿ ನಾಯಕರೇ ನಿಂತು ಬೆಂಬಲ ನೀಡುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ನಾವು ಇಂದು ಬೆಂಬಲ ಕೋರುತ್ತಿದ್ದೇವೆ ಎಂದರು.

ಹಾಲು ಬೆಲೆ ಹೆಚ್ಚಿಸಿದ್ದ ಕೈಸರ್ಕಾರ:

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಲಿಗೆ ೩ ರು. ಸಬ್ಸಿಡಿ ನೀಡುವ ಜತೆಗೆ ೨ ರು. ಬೆಲೆ ಹೆಚ್ಚಿಸಿತ್ತು. ಆದರೆ ನಂತರ ಬಂದ ಸರ್ಕಾರಗಳು ರೈತರು ಪೂರೈಕೆ ಮಾಡುವ ಹಾಲಿಗೆ ದರ ಹೆಚ್ಚಿಸಲಿಲ್ಲ. ಜೆಡಿಎಸ್ - ಬಿಜೆಪಿಯವರು ರೈತರ ಹೆಸರು ಹೇಳಿ ಮತ ಪಡೆಯುತ್ತಾರೆ. ಅದರೆ ರೈತರಿಗೆ ಸಂಕಷ್ಟಕ್ಕೆ ಮಿಡಿಯಲಿಲ್ಲ ಎಂದು ಆರೋಪಿಸಿದರು.

ಚನ್ನಪಟ್ಟಣ ಉಪಚುನಾವಣೆ ವೇಳೆ ಹಾಲಿನ ದರ ಹೆಚ್ಚಳಕ್ಕೆ ಜನ ಒತ್ತಾಯಿಸಿದರು. ಈಗ ಒಂದು ತಿಂಗಳ ಹಿಂದೆ ಮತ್ತೆ ೪ ರು. ಹಾಲಿನ ದರ ಹೆಚ್ಚಿಸಲಾಗಿದೆ. ಇದು ಆಗಿದ್ದು ಕಾಂಗ್ರೆಸ್ ಅವಧಿಯಲ್ಲೇ. ಹಾಲಿನ ಬೆಲೆ ಹೆಚ್ಚಿಸಿದಾಗ ಆ ಎರಡು ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಆದರೆ ಹೆಚ್ಚಿಸಿದ ಬೆಲೆಯ ಹಣವನ್ನು ರೈತರಿಗೆ ನೀಡಲಾಗಿದೆ. ರೈತರಿಗೆ ಅನುಕೂಲ ಮಾಡಿದರೆ ಅದು ಅನ್ಯಾಯನಾ?. ಇದನ್ನು ವಿರೋಧಿಸಿದ ಪಕ್ಷಗಳ ಅಭ್ಯರ್ಥಿಗೆ ಬೆಂಬಲ ನೀಡಬೇಕಾ ನಿರ್ಧರಿಸಿ ಎಂದರು.

ಇಂದು ರಾಮನಗರದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಸೊಸೈಟಿಗಳಲ್ಲಿ ರೈತರಿಗೆ ಅನ್ಯಾಯವಾಗಿದ್ದು, ಅಕ್ರಮವಾಗಿದೆ ಎಂದು ತನಿಖೆಗೆ ಒಳಗಾಗಿವೆ. ಯಾರು ರೈತರ ಹಣ ಲಪಟಾಯಿಸಿದ್ದಾರೋ ಅವರ ಪರ ಇವರು ಕೆಲಸ ಮಾಡುತ್ತಾರೆ ಎಂದರೆ ಇವರಿಗೆ ರೈತರ ಬಗ್ಗೆ ಕಾಳಜಿ ಇದೆಯೇ. ಹೋರಾಟ ಮಾಡುವುದು ತಪ್ಪಲ್ಲ. ಯಾರ ಪರ ಯಾರ ವಿರೋಧ ಮಾಡುತ್ತಿದ್ದೀರಾ ಎಂಬುದು ಮುಖ್ಯ ಎಂದು ಜೆಡಿಎಸ್ ಪ್ರತಿಭಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸತ್ತೇಗಾಲದಿಂದ ನೀರು ತರುವ ಕೆಲಸ ಈ ವರ್ಷದಲ್ಲೇ ಮುಗಿಸಲು ಗಡುವು ನೀಡಲಾಗಿದೆ. ಈ ಯೋಜನೆ ಪೂರ್ಣಗೊಂಡರೆ, ಇಲ್ಲಿ ನೀರಾವರಿ ಸಮಸ್ಯೆ ನೀಗಲಿದೆ. ಯಾವುದೇ ಸಂದರ್ಭದಲ್ಲಿ ಇಲ್ಲಿನ ಕೆರೆಗಳು ತುಂಬಿರಲಿವೆ. ನೀವು ಕೃಷಿಯನ್ನು ಸಮೃದ್ಧವಾಗಿ ಮಾಡಬಹುದಾಗಿದೆ ಎಂದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಂಗನಾಥ್, ಮುಖಂಡರಾದ ಮಲುವೇಗೌಡ, ಕೆ.ಟಿ.ಲಕ್ಷ್ಮಮ್ಮ, ಹನುಮಂತಯ್ಯ ಇತರರು ಇದ್ದರು.

--------------------

ಕೆಎಂಫ್‌ನಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ: ಸಿಪಿವೈ

ಚನ್ನಪಟ್ಟಣ: ಸಹಕಾರ ಕ್ಷೇತ್ರದಿಂದ ಇಷ್ಟು ವರ್ಷ ದೂರವಿದ್ದ ನಾನು ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಈ ಬಾರಿ ನೇರವಾಗಿ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಕೆಎಂಎಫ್ ಹಾಗೂ ಬಮೂಲ್‌ನಲ್ಲಿ ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಕೆಂಗಲ್ ಬಳಿ ಇರುವ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಪೂರೈಕೆ ಮಾಡುವ ಹಾಲಿಗೆ ಲೀಟರ್‌ಗೆ ೫೦ ರು. ನೀಡಿದರೂ ಅದು ಕಡಿಮೆಯೇ.

ಹಾಲೂ ಉತ್ಪಾದಕರ ಪ್ರಾಮಾಣಿಕ ದುಡಿಗೆ ನ್ಯಾಯಯುತವಾದ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ಒಬ್ಬ ಉತ್ತಮ ನಿರ್ದೇಶಕನನ್ನು ಬಮೂಲ್‌ಗೆ ಗೆಲ್ಲಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಕಳೆದ ಬಾರಿ ಬಮೂಲ್ ಚುನಾವಣೆಯಲ್ಲಿ ಹಣ ಹಾಗೂ ತೋಳ್ಬಲದಿಂದ ಚುನಾವಣೆ ನಡೆಸಲಾಯಿತು. ಈ ಬಾರಿ ಅಂಥದ್ದಕ್ಕೆಲ್ಲ ಅವಕಾಶ ನೀಡದೇ ಲಿಂಗೇಶ್ ಕುಮಾರ್ ಅವರನ್ನು ಬೆಂಬಲಿಸಿ. ಕಾಂಗ್ರೆಸ್ ಸರ್ಕಾರ ರೈತರ ಪರ ಇದೆ. ನಮ್ಮ ಅಭ್ಯರ್ಥಿ ಗೆದ್ದರೆ ರೈತರಿಗೆ ಅನುಕೂಲ ಕಲ್ಪಿಸಲು ಅನುಕೂಲ ಆಗಲಿದೆ. ಕಾಲಕ್ಕೆ ತಕ್ಕಂತೆ ಹೈನುಗಾರಿಯಲ್ಲಿ ನಾವು ಸಹ ಅಪ್‌ಡೇಟ್ ಆಗಬೇಕಿದೆ ಎಂದರು.

ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ಈ ಹಿಂದೆ ಎರಡು ಬಾರಿ ಬಮೂಲ್ ನಿರ್ದೇಶಕನಾಗಿ ಆಯ್ಕೆಯಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಎರಡು ಬಾರಿ ಸೋಲನ್ನು ಅನುಭವಿಸಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ, ರೈತರ ಹಿತ ಕಾಯುವ ಕೆಲಸ ಮಾಡುತ್ತೇನೆ ಎಂದರು.

---------

ಪೊಟೋ೬ಸಿಪಿಟಿ೩: ತಾಲೂಕಿನ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಭೆಯನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು.