ಸರ್ವ ಜನಾಂಗದವರ ಹಿತ ಕಾಯುವ ಕಾಂಗ್ರೆಸ್‌ ಗೆಲ್ಲಿಸಿ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ

| Published : Apr 26 2024, 12:51 AM IST

ಸರ್ವ ಜನಾಂಗದವರ ಹಿತ ಕಾಯುವ ಕಾಂಗ್ರೆಸ್‌ ಗೆಲ್ಲಿಸಿ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ಕ್ಷೇತ್ರ ಯಾವಾಗಲೂ ಕಾಂಗ್ರೆಸ್‌ಗೆ ಬೆನ್ನೆಲುಬಾಗಿರುವ ತಾಲೂಕು. ಇಲ್ಲಿಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮೂಡಿದೆ.

ಹರಪನಹಳ್ಳಿ: ಸರ್ವ ಜನಾಂಗದವರ ಹಿತ ಕಾಯುವ ಕಾಂಗ್ರೆಸ್‌ ಗೆಲ್ಲಿಸಿ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತದಾರರನ್ನು ಕೋರಿದರು.

ಅವರು ತಾಲೂಕಿನ ತೆಲಿಗಿ, ಹಲುವಾಗಲು, ಗುಳೇದಲೆಕ್ಕಮ್ಮ ದೇವಸ್ಥಾನದ ಬಳಿ ಮುಂತಾದ ಕಡೆ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹರಪನಹಳ್ಳಿ ಕ್ಷೇತ್ರ ಯಾವಾಗಲೂ ಕಾಂಗ್ರೆಸ್‌ಗೆ ಬೆನ್ನೆಲುಬಾಗಿರುವ ತಾಲೂಕು. ಇಲ್ಲಿಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮೂಡಿದೆ. ವೈಯಕ್ತಿಕ ಏನೇ ಇದ್ದರೂ ಬದಿಗೊತ್ತಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕಿ ಎಂ.ಪಿ. ಲತಾ ಹಾಗೂ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎನ್‌. ಕೊಟ್ರೇಶ ಅವರಿಗೆ ಅಂದರೆ ಇಬ್ಬರಿಗೂ ಬಿದ್ದಿರುವ ಒಟ್ಟು ಮತಗಳು ಇದೀಗ ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿಗೆ ಬೀಳಬೇಕು ಎಂದು ಅವರು ಹೇಳಿದರು.

ಅವರು ಮಾತನಾಡಿಸಲಿಲ್ಲ, ಇವರು ಮಾತನಾಡಿಸಲಿಲ್ಲ ಎನ್ನದೇ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕೋರಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿದರೆ ನಾನು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಡಾ. ಪ್ರಭಾ ಸೇರಿ ತ್ರಿಬಲ್‌ ಎಂಜಿನ್‌ ಆಗಿ ಕೆಲಸ ಮಾಡುತ್ತೇವೆ ಎಂದರು.

ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಆಳವಾಗಿ ಬೇರು ಬಿಟ್ಟಿದೆ. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸೋಣ ಎಂದು ಹೇಳಿದರು.

ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಜನರು ಅನುಭವಿಸುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ. ಈಗ ನಮಗೆ ನಿಮ್ಮ ಆಶೀರ್ವಾದ ಬೇಕು ಎಂದರು.

ಪ್ರಧಾನಿ ಮೋದಿ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್‌ ಮಹಿಳೆಯರಿಗೆ ಶಕ್ತಿ ತುಂಬಿದೆ. ಬಡವರ, ರೈತರ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಹೇಳಿದರು.

ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿರಾಜ ಶೇಖ್‌, ಅರಸಿಕೇರಿ ಎನ್‌. ಕೊಟ್ರೇಶ, ಸಿ. ಚಂದ್ರಶೇಖರ ಭಟ್‌, ಎಂ. ರಾಜಶೇಖರ, ವೀಣಾ ಮಹಾಂತೇಶ, ಎಚ್‌.ಬಿ. ಪರಶುರಾಮಪ್ಪ ಮಾತನಾಡಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಡಾ. ಎಂ.ಬಿ. ಅಧಿಕಾರ, ಕೋಡಿಹಳ್ಳಿ ಭೀಮಪ್ಪ, ಶಶಿಧರ ಪೂಜಾರ, ಎಚ್‌.ಕೆ. ಹಾಲೇಶ, ಹಲಗೇರಿ ಮಂಜಪ್ಪ, ಪಿ.ಟಿ. ಭರತ್, ಲಾಟಿ ದಾದಾಪೀರ, ಭರತೇಶ, ಜಾಕೀರ ಹುಸೇನ್, ಜಯಲಕ್ಷ್ಮಿ, ಎಚ್‌.ಎಂ. ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಸ್ವಾಮಿ ಕಲ್ಮಟ, ತೆಲಿಗಿ ಈಶಪ್ಪ, ಪೂಜಾರ ಬಸಪ್ಪ, ಜಿ.ಬಿ.ಟಿ. ಮಹೇಶ, ಕೆ. ಯೋಗೀಶ, ಹಾಲೇಶಗೌಡ, ಶಿರಗಾನಹಳ್ಳಿ ಪರಶುರಾಮಪ್ಪ ಇತರರು ಪಾಲ್ಗೊಂಡಿದ್ದರು.