ಸಾರಾಂಶ
ಕುಮಟಾ ತಾಲೂಕಿನಾದ್ಯಂತ ಗುರುವಾರವೂ ಮಳೆಯ ಅಬ್ಬರ ಜೋರಾಗಿದೆ. ಆಗೀಗ ಜೋರಾದ ಗಾಳಿಯೂ ಬೀಸಿದೆ.
ಕುಮಟಾ; ತಾಲೂಕಿನಾದ್ಯಂತ ಗುರುವಾರವೂ ಮಳೆಯ ಅಬ್ಬರ ಜೋರಾಗಿದೆ. ಆಗೀಗ ಜೋರಾದ ಗಾಳಿಯೂ ಬೀಸಿದೆ. ಹಲವೆಡೆ ಮರಮಟ್ಟುಗಳು ಬಿದ್ದು ಹಾನಿಯಾಗಿದೆ.
ಹಳಕಾರದ ದೇವಿ ಗಣಪು ಮುಕ್ರಿ ಅವರ ಮನೆಯ ಹಿಂದುಗಡೆಯ ಚಾವಣಿ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಗಾಳಿ-ಮಳೆಯ ಹೊಡೆತಕ್ಕೆ ಹಳಕಾರ ಗ್ರಾಮದಲ್ಲೇ ಅಕ್ಕಪಕ್ಕದ ನಿವಾಸಿಗಳಾದ ಕಮಲಾ ಈಶ್ವರ ಪಟಗಾರ ಅವರ ಮನೆಯ ಅಡುಗೆ ಕೋಣೆಯ ಚಾವಣಿ ಮೇಲೆ ಹಾಗೂ ಯಶೋದಾ ಗಣಪತಿ ಪಟಗಾರ ಅವರ ಮನೆಯ ಚಾವಣಿ ಮೇಲೆ ಒಂದೇ ದೊಡ್ಡ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಗೋಕರ್ಣದ ಮೇಲಿನಕೇರಿಯಲ್ಲಿ ಶಾಂತಿ ಸೀತಾರಾಮ ಗೌಡ ಅವರ ಮನೆ ಮೇಲೆ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಜನಜಾನುವಾರು ಯಾರಿಗೂ ಪೆಟ್ಟಾಗಿಲ್ಲ.ಕಲಭಾಗ ಪಂಚಾಯಿತಿ ವ್ಯಾಪ್ತಿಯ ಅಳ್ವೆಕೋಡಿಯಲ್ಲಿ ಸರ್ಕಾರಿ ಕೆರೆಯೊಂದರ ಕಾಂಪೌಂಡ್ ಗೋಡೆ ಕುಸಿದು ಬಿದ್ದು ಹಾನಿಯಾಗಿದೆ. ಹಿರೇಗುತ್ತಿಯಲ್ಲಿ ಸಂದೀಪ ನಾರಾಯಣ ಹರಿಕಂತ್ರ ಅವರು ಹೊಸದಾಗಿ ಮನೆ ನಿರ್ಮಾಣಕ್ಕೆ ಕಟ್ಟಿದ ತಡೆಗೊಡೆ ಸಂಪೂರ್ಣ ಕುಸಿದು ಬಿದ್ದಿದೆ.