ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಇಳಿಮುಖಗೊಂಡಿದೆ. ಕೆಲವೆಡೆ ಗಾಳಿ ಹೆಚ್ಚಾಗಿ ಬೀಸುತ್ತಿರುವ ಪರಿಣಾಮ ಮರಗಳು ಬಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಭಾನುವಾರ ಸಾಧಾರಣ ಮಳೆಯಾಯಿತು.ಮಳೆ ನಿಂತರೂ ಕೆಲವೆಡೆ ಕಾವೇರಿ ನದಿ ನೀರು ಹರಿವಿನ ಪ್ರಮಾಣ ತಗಿಲ್ಲ. ತಗ್ಗು ಪ್ರದೇಶದ ಕಾಫಿ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸುತ್ತಮುತ್ತ ಕಾವೇರಿ ಪ್ರವಾಹದ ನೀರು ನಿಂತಿದೆ. ಕಾಫಿ ತೋಟಗಳಲ್ಲಿ ನಾಲ್ಕೈದು ಅಡಿ ಪ್ರವಾಹದ ನೀರು ನಿಂತಿದ್ದು, ಕಾಫಿ ಮತ್ತಷ್ಟು ಕೊಳೆಯುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಆತಂಕಗೊಂಡಿದ್ದಾರೆ.
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿಯಾದ ಜಾನಕಿ ಬಸಪ್ಪ ಅವರ ವಾಸದ ಮನೆ ಗೋಡೆ ಮತ್ತು ಛಾವಣಿ ಬಿದ್ದು ಹಾನಿಯಾಗಿದೆ. ಬಜೆಗುಂಡಿ ಬಳಗುಂದ ಗ್ರಾಮದ ಖತಿಜ ಅವರ ಮನೆಗೆ ಶೀಟ್ ಗಳು ಹಾನಿಯಾಗಿದೆ. ಇಲ್ಲಿನ ಶಿವಪ್ಪ ಅವರ ಮನೆ ಕೂಡ ಹಾನಿಗೊಳಲಾಗಿದೆ.ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿಯ ಬಿಳಿಗೇರಿ ಗ್ರಾಮದ ಬನ್ನೇಕಾಡು ಪೈಸಾರಿ ಎಂಬಲ್ಲಿ ಹರೀಶ್ ಅವರ ಮನೆಗೆ ಹಾನಿಯಾಗಿದೆ. ಇದೇ ಗ್ರಾಮದ ಕುಮಾರಿ ಎಂಬವರ ಮನೆಗೂ ನಷ್ಟ ಸಂಭವಿಸಿದೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಹರಗ ಗ್ರಾಮದ ಪೊನ್ನಮ್ಮ ಅವರ ಮನೆಯ ಶೀಟ್ ಗಳು ಹಾನಿಯಾಗಿದೆ. ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ಜಾನಕಿ ಅವರ ಮನೆಯ ಗೋಡೆಗಳು ಹಾನಿಯಾಗಿದೆ.
ಶಾಸಕ ಎ.ಎಸ್. ಪೊನ್ನಣ್ಣ ಅವರು ಮಡಿಕೇರಿ- ಕುಟ್ಟ ಮುಖ್ಯ ರಸ್ತೆ ಮಂಚಳ್ಳಿ ಬಳಿ ರಸ್ತೆ ಭೂಕುಸಿತವಾಗಿರುವ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಸಂಚಾರಕ್ಕೆ ವ್ಯತ್ಯಯ ಉಂಟಾಗದಂತೆ ಮುಖ್ಯರಸ್ತೆ ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು. ತಹಸೀಲ್ದಾರರು, ಎಇಇ ಇತರರು ಇದ್ದರು.ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಭಾನುವಾರ ಶಾಂತಳ್ಳಿ ಹೋಬಳಿ ತೋಳೂರು ಶೆಟ್ಟಳ್ಳಿ ಸೇರಿದಂತೆ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಗ್ರಾಮದ ಟಿ.ಲಕ್ಷ್ಮಮ್ಮ, ವಿ.ಕೆ.ಇಂದಿರಾ, ಕೆ.ಜೆ. ನವೀನ್ ಹಾಗೂ ಜಾನಕಿ ಅವರ ಮನೆ ಹಾನಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.