ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕಿನಲ್ಲಿ ವಿಂಡ್ ಫ್ಯಾನ್‌ ಅಳವಡಿಸಲು ಜಾಗ ನೀಡಿದ ಹೊಲದ ಮಾಲೀಕರು ಈಗ ಮರುಗುತ್ತಿದ್ದಾರೆ. ಅವರ ಜತೆಗೆ ವಿಂಡ್‌ ಫ್ಯಾನ್‌ಗೆ ಜಾಗ ನೀಡದ ಹೊಲದ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ.

ತಾಲೂಕಿನ ಬಹುತೇಕ ರೈತರ ಜಮೀನುಗಳನ್ನು ವಿಂಡ್ ಫ್ಯಾನ್‌ಗಳು ಆವರಿಸಿವೆ. ಜಮೀನು ನೀಡಿರುವ ರೈತರಿಗೆ ಈಗ ಮೂಕವೇದನೆ, ಆದರೆ ವಿಂಡ್ ಫ್ಯಾನ್‌ಗೆ ಜಮೀನು ನೀಡಲು ನಿರಾಕರಿಸಿದ್ದರೂ ಅಲ್ಲಿ ಕೃಷಿ ಮಾಡಲು ಸಾಧ್ಯವಾಗದಂತಾಗಿದೆ. ತಹಸೀಲ್ದಾರ್, ಡಿಸಿ, ಎಂಎಲ್ಎಗೆ ಹೀಗೆ ಕಂಡಕಂಡವರಿಗೆ ಮನವಿ ನೀಡಿದ್ದರೂ ಯಾರೂ ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹೀಗಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ.

ವಿಂಡ್ ಫ್ಯಾನ್ ಗಾಳಿಗೆ ಅಕ್ಕಪಕ್ಕದ ಜಮೀನಿನಲ್ಲೂ ತೇವಾಂಶ ಕೊರತೆಯಿಂದ ಇಳುವರಿ ಬರುತ್ತಿಲ್ಲ. ಗಾಳಿಯ ಹೊಡೆತಕ್ಕೆ ಸಸಿಗಳು ಬೆಳವಣಿಯಾಗುತ್ತಿಲ್ಲ. ನೈಸರ್ಗಿಕ ವಿಕೋಪ, ಹಲವು ಸವಾಲುಗಳ ನಡುವೆ ಕೃಷಿ ಮಾಡುವ ರೈತರಿಗೆ ವಿಂಡ್‌ ಫ್ಯಾನ್‌ ರಕ್ಕಸನಂತೆ ಕಂಡುಬರುತ್ತಿದೆ.

ಕಳೆ ಕೀಳಲು ಬರುತ್ತಿಲ್ಲ ರೈತ ಮಹಿಳೆಯರು:


ವಿಂಡ್ ಪ್ಯಾನ್ ಶಬ್ದಕ್ಕೆ ಕಾರ್ಮಿಕರಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ, ಮಹಿಳೆಯರು ಸುಸ್ತಾಗಿ ಹೋಗುತ್ತಿದ್ದಾರೆ. ಹೀಗಾಗಿ ಪಕ್ಕದ ಜಮೀನಿನಲ್ಲಿ ಕಳೆ ಕೀಳಲು ಸಹ ರೈತ ಮಹಿಳೆಯರು ಬರುತ್ತಿಲ್ಲ. ಭಾರಿ ಶಬ್ದ ರೈತರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ನಿಂತು ಜಮೀನುಗಳಲ್ಲಿ ಕೆಲಸ ಮಾಡಲು ಆಗುತ್ತಿಲ್ಲ, ಹೊಲದಲ್ಲಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿಯಾದರಂತೂ ವಿಂಡ್ ಪ್ಯಾನ್ ರಕ್ಕಸ ಶಬ್ದಕ್ಕೆ ನಿದ್ದೆ ಬರುವುದಿಲ್ಲ. ವಿಂಡ್ ಪ್ಯಾನ್ ಅಳವಡಿಸಿರುವ ಜಮೀನುಗಳ ಮಾಲೀಕರಿಗೆ ಪರಿಹಾರ ಸಿಕ್ಕಿದೆ. ಕೆಲವು ರೈತರಿಗೆ ಮದ್ಯವರ್ತಿಗಳ ಹಾವಳಿಯಿಂದ ಪೂರ್ಣ ಪರಿಹಾರ ಕೈ ಸೇರಿಲ್ಲ, ಅರ್ಜಿ ಹಿಡಿದು ಈಗಲೂ ಅಲೆಯುತ್ತಿದ್ದಾರೆ. ಆದರೆ ಅಕ್ಕಪಕ್ಕದ ಜಮೀನು ಮಾಲೀಕರಿಗೆ ಪರಿಹಾರ ಸಿಗದು, ಸಮಸ್ಯೆಯಷ್ಟೇ ಉಳಿದುಕೊಂಡಿದೆ.

ನಮ್ಮ ಜಮೀನು ಪಕ್ಕದ ರೈತರು ವಿಂಡ್ ಪ್ಯಾನ್‌ಗೆ ಜಮೀನು ನೀಡಿದ್ದಾರೆ. ಆದರೆ ನಮ್ಮ ಹೊಲದಲ್ಲಿ ಬೆಳೆ ಹಾಳಿಯ ಹೊಡೆತಕ್ಕೆ ನಲಗುತ್ತಿದೆ. ವಿಂಡ್ ಫ್ಯಾನ್‌ ಶಬ್ದಕ್ಕೆ ಹೆದರಿ ನಮ್ಮ ಜಮೀನಿನಲ್ಲಿ ಕಳೆ ಕೀಳಲು ಸಹ ಕೂಲಿಯಾಳುಗಳು ಬರುತ್ತಿಲ್ಲ. ಜಮೀನು ನೀಡಿದ ರೈತಗೆ ಮಧ್ಯವರ್ತಿಗಳ ಮೂಲಕ ₹1 ಲಕ್ಷ ಪರಿಹಾರ ಸಿಕ್ಕಿದೆ, ಉಳಿದ ಹಣ ನೀಡಿಲ್ಲ. ತಹಸೀಲ್ದಾರ್, ಡಿಸಿ ಕಚೇರಿಗೆ ಅಲೆದಾಡಿದರೂ ಯಾರೂ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ರಂಗನಾಥನಹಳ್ಳಿಯ ರೈತ ಕೆ. ಮಂಜುನಾಥ.

ಕೂಡ್ಲಿಗಿ ತಾಲೂಕಿನಲ್ಲಿ ವಿಂಡ್ ಪ್ಯಾನ್‌ಗಳ ಅರ್ಭಟಕ್ಕೆ ರೈತರು ತತ್ತರಿಸಿದ್ದಾರೆ. ಮೊದಲೇ ಈ ವರ್ಷ ಬರ ಇದೆ. ಬೆಳೆಗಳು ಒಣಗಿವೆ. ವಿಂಡ್ ಫ್ಯಾನ್ ಬರದ ಮೇಲೆ ಬರೆ ಹಾಕುತ್ತಿದೆ. ರೈತರ ನಷ್ಟ ತುಂಬಿ ಕೊಡುವವರಾರು ಎಂಬುದು ಪ್ರಶ್ನೆಯಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ವಾಸ್ತವಾಂಶ ಪರಿಶೀಲಿಸಿ ರೈತರ ಬದುಕಿಗೆ ನೆರವಾಗಬೇಕಿದೆ ಎನ್ನುತ್ತಾರೆ ವಿಜಯನಗರ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಪಿ.ಸಂತೋಷಕುಮಾರ್.