ಅಪಾಯಕ್ಕೆ ಕಾದಿವೆ ವಿಂಡ್‌ ಮಿಲ್‌ನ ತಂತಿಗಳು

| Published : May 15 2024, 01:34 AM IST

ಸಾರಾಂಶ

ಉತ್ಪಾದನೆ ಆಗುವ ವಿದ್ಯುತ್ ಅನ್ನು ಗ್ರೀಡ್‌ಗೆ ಸಂಪರ್ಕಿಸುವ ತಂತಿಗಳು ಸದ್ಯ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಇತ್ತೀಚೆಗೆ ಮರಕ್ಕೆ ವಿದ್ಯುತ್ ತಗಲಿ ಕುರಿಗಾಹಿ ಸಾವು । ಎಚ್ಚೆತ್ತುಕೊಳ್ಳಬೇಕಿದೆ ಅಳವಡಿಕೆದಾರರು

ಕನ್ನಡಪ್ರಭ ವಾರ್ತೆ ಕುಕನೂರು

ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ 90ಕ್ಕೂ ಹೆಚ್ಚು ವಿಂಡ್‌ ಮಿಲ್ (ಪವನ ವಿದ್ಯುತ್) ಅಳವಡಿಕೆ ಆಗಿದೆ. ಇದರಿಂದ ಉತ್ಪಾದನೆ ಆಗುವ ವಿದ್ಯುತ್ ಅನ್ನು ಗ್ರೀಡ್‌ಗೆ ಸಂಪರ್ಕಿಸುವ ತಂತಿಗಳು ಸದ್ಯ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಫ್ಯಾನ್‌ಗಳಿಂದ ಉತ್ಪಾದನೆ ಆಗುವ ವಿದ್ಯುತ್ ಅನ್ನು ಸಂಗ್ರಹ ಗ್ರೀಡ್‌ಗೆ ಕಳಿಸಲು ವಿದ್ಯುತ್ ತಂತಿ ಅಳವಡಿಕೆ ಕಂಬಗಳನ್ನು ರೈತರ ಜಮೀನಿನಲ್ಲಿ ರೈತರಿಗೆ ಇಂತಿಷ್ಟು ಎಂದು ಪರಿಹಾರ ನೀಡಿ ಅಳವಡಿಸಿದ್ದಾರೆ. ಆದರೆ ವಿದ್ಯುತ್ ತಂತಿಯ ಲೈನ್ ಎಳೆಯುವಾಗ ಪಕ್ಕ ಇರುವ ಗಿಡ ಮರಗಳನ್ನು ಕಡಿಯುವ ಕೆಲಸಕ್ಕೆ ಪ್ಯಾನ್ ಅಳವಡಿಕೆದಾರರು ಹೋಗಿಲ್ಲ. ಇದರಿಂದ ವಿದ್ಯುತ್ ತಂತಿಗೆ ಗಿಡ ತಾಕಿ ವಿದ್ಯುತ್ ಶಾರ್ಟ್‌ ಆಗುತ್ತಿದೆ. ಇತ್ತೀಚೆಗೆ ತಾಲೂಕಿನ ಚಿಕೇನಕೊಪ್ಪ ಗ್ರಾಮದ ಈರಪ್ಪ ಕುರಿ ಎಂಬ ಕುರಿಗಾಹಿ ತಪ್ಪಲು ಕಡಿಯಲು ಹೋಗಿ ಗಿಡದ ರೆಂಬೆ ತಂತಿಗೆ ತಗಲಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಇದರಿಂದ ಕುರಿಗಾಹಿ ಕುಟುಂಬ ಕಂಗಾಲಾಗಿದೆ. ಕುರಿಗಳನ್ನು ಮೇಯಿಸುತ್ತಾ ಬದುಕು ಕಟ್ಟಿಕೊಂಡಿದ್ದ ಈರಪ್ಪ ಅವರ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ.

ವಿದ್ಯುತ್ ಲೈನ್ ಹಾಗೂ ಕಂಬ ಅಳವಡಿಸುವಾಗ ಲೈನ್‌ಗೆ ತಾಕುವ ಮರಗಳನ್ನು ಕಡಿಯುವ ಕೆಲಸವನ್ನು ಪವನ ವಿದ್ಯುತ್‌ನವರು ಮಾಡಬೇಕಿತ್ತು. ರೈತರು ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯಲು ಅವಕಾಶ ನೀಡದಿದ್ದರೆ, ಆ ಜಮೀನು ಬಿಟ್ಟು ಬೇರೆ ಜಮೀನಿನಲ್ಲಿ ಅಳವಡಿಕೆ ಮಾಡಬೇಕಿತ್ತು. ಇಲ್ಲವೇ ಆ ಮರಕ್ಕೆ ಬೆಲೆ ಕಟ್ಟಿ ರೈತರಿಗೆ ಪರಿಹಾರ ನೀಡಿ ವಿದ್ಯುತ್ ಲೈನ್ ಅಳವಡಿಸಬೇಕಿತ್ತು. ವಿದ್ಯುತ್ ಲೈನ್ ಅಳವಡಿಕೆಗೆ ಮುನ್ನ ಮುಂಜಾಗ್ರತೆ ಕೈಗೊಳ್ಳದ ಕಾರಣ ಈಗ ಅಪಾಯದ ಮುನ್ಸೂಚನೆ ಎದುರಾಗಿದೆ.ಇನ್ನು ಮುಂದಾದರೂ ವಿಂಡ್‌ ಮಿಲ್‌ನವರು ಎಲ್ಲೆಲ್ಲಿ ವಿದ್ಯುತ್ ಲೈನ್ ಪಕ್ಕ ಮರಗಳಿವೆ ಎಂದು ಗುರುತಿಸಿ ಕೂಡಲೇ ಗಿಡ ಮರಗಳ ಟೊಂಗೆ ಕಡಿಯಬೇಕು. ಕಡಿದರೂ ಗಿಡ ಮರಗಳು ಬೆಳೆಯುವುದರಿಂದ ರೈತರಿಗೆ ಸಮಸ್ಯೆ ಬಗ್ಗೆ ತಿಳಿಸಿ ಮರದ ಪರಿಹಾರ ನೀಡಿ ಆಯಾ ಗಿಡ ಮರ ಕಡಿಯಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆಗುವ ಅಪಾಯ ತಪ್ಪಿಸಿದಂತಾಗುತ್ತದೆ. ಅಲ್ಲದೆ ಕಡಿದ ಮರಗಳ ಪರಿಹಾರ ನೀಡುವುದರ ಜೊತೆಗೆ ರೈತರ ಜಮೀನಿನಲ್ಲಿ ಬೇರೆ ಗಿಡಗಳ ಸಸಿ ನೆಡಬೇಕು.

ಕುರಿಗಾಹಿ ಈರಪ್ಪ ಮರಕ್ಕೆ ವಿದ್ಯುತ್ ಪ್ರವಹಿಸಿದ್ದರಿಂದ ಪ್ರಾಣ ಕಳೆದುಕೊಂಡಿದ್ದಾನೆ. ಈಗಲಾದರೂ ಪವನ ವಿದ್ಯುತ್‌ನವರು ಎಚ್ಚೆತ್ತುಕೊಂಡು ವಿದ್ಯುತ್ ಲೈನ್‌ಗಳ ಬಳಿ ಇರುವ ಮರಗಳನ್ನು ಬೇರ್ಪಡಿಸುವ ಕಾರ್ಯ ಮಾಡಬೇಕು ಎನ್ನುತ್ತಾರೆ ಚಿಕೇನಕೊಪ್ಪ ಗ್ರಾಮದ ರೈತ ಭೀಮರಡ್ಡಿ ಶ್ಯಾಡ್ಲಗೇರಿ

ಅಪಾಯದ ಕುರಿತು ಪವನ ವಿದ್ಯುತ್‌ನವರಿಗೆ ತಿಳಿಸಲಾಗಿದೆ. ಎಲ್ಲಿಯಾದರೂ ವಿದ್ಯುತ್ ಲೈನಿಗೆ ಮರ ಟಚ್ ಇದ್ದರೆ ಅವುಗಳನ್ನು ಬೇರ್ಪಡಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದ್ದೇನೆ. ಮೃತ ಈರಪ್ಪಗೆ ಪರಿಹಾರ ಸಹ ಕೊಡಿಸಲಾಗುವುದು ಎಂದು ತಹಸೀಲ್ದಾರ ಅಶೋಕ ಶಿಗ್ಗಾವಿ ತಿಳಿಸಿದ್ದಾರೆ.